ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಹಿರಿಯೂರಿನಲ್ಲಿ ಶನಿವಾರ ನಡೆದ ಪ್ರಜಾಸೇವಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಆರ್.ಮಂಜುನಾಥ್‍ಗೆ ನೀನೆ ಏನೋ ಡಿಡಿಪಿಐ ಎಂದು ಎಲ್ಲರೆದುರಿನಲ್ಲಿ ಏಕ ವಚನದಲ್ಲಿ ಕರೆದಿರುವುದನ್ನು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್ ಖಂಡಿಸಿದ್ದಾರೆ.
ಸಂವಿಧಾನದತ್ತವಾಗಿ ಅಧಿಕಾರ ಸ್ವೀಕರಿಸಿರುವ ಡಿಡಿಪಿಐ ಕೆ.ಆರ್.ಮಂಜುನಾಥ್‍ರವರಿಗೆ ಅವರದೆ ಆದ ಘನತೆ ಗೌರವವಿದೆ. ಸರ್ಕಾರಿ ನೌಕರರು, ಅಧಿಕಾರಿಗಳೆಂದರೆ ಸರ್ಕಾರದ ಗುಲಾಮರಲ್ಲ. ಮುಖ್ಯಮಂತ್ರಿಗಳ ಪಕ್ಕದಲ್ಲಿ ಕುಳಿತಿದ್ದ ಸಚಿವ ಜಮೀರ್ ಅಹಮದ್ ತಮ್ಮ ಕೈಯಲ್ಲಿದ್ದ ಪೇಪರ್‍ನಿಂದ ಡಿಡಿಪಿಐ ಕೈಗೆ ಹೊಡೆದು ಈ ಕೆಲಸ ಆಗಬೇಕೆಂದು ಗದರಿಸಿರುವುದನ್ನು ನೋಡಿದರೆ ಇವರೇನು ಜನಪ್ರತಿನಿಧಿಗಳ ಇಲ್ಲಾ ಗೂಂಡಾಗಳ ಎನ್ನುವ ಅನುಮಾನ ಕಾಡುತ್ತಿದೆ. ವೇದಿಕೆಯಲ್ಲೆ ಕುಳಿತಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ತುಟಿಕ್ ಪಿಟಿಕ್ ಎನ್ನದೆ ಮೌನ ವಹಿಸಿದ್ದನ್ನು ನೋಡಿದರೆ ನೌಕರರ ಹಿತ ಕಾಪಾಡುವುದಕ್ಕಾಗಿದ್ದಾರೋ ಅಥವಾ ಜನಪ್ರತಿನಿಧಿಗಳ ಬಾಲಂಗೋಚಿಯೋ ಗೊತ್ತಾಗುತ್ತಿಲ್ಲ. ಪ್ರಜಾಸೇವೆ ನೆಪದಲ್ಲಿ ಮೇಲಿಂದ ಮೇಲೆ ಹಿರಿಯೂರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ಇದೊಂದು ಹಿರಿಯೂರು ವಿಧಾನಸಭೆ ಉಪ ಚುನಾವಣೆಯ ಗಿಮಿಕ್ ಅಲ್ಲದೆ ಮತ್ತಿನೇನು?
ಕೇವಲ ಡಿಡಿಪಿಐ.ಗಷ್ಟೆ ಅಲ್ಲ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇಲ್ಲೇ ವೇದಿಕೆ ಮುಂಭಾಗ ಇರ್ರಯ್ಯ ಎಂದು ಲಘುವಾಗಿ ಕರೆದಿರುವುದು ಮುಖ್ಯಮಂತ್ರಿಗಳ ಘನತೆಗೆ ಶೋಭೆಯಲ್ಲ. ರಾಜಕೀಯದ ಅಧಿಕಾರ ಕೇವಲ ಐದು ವರ್ಷ. ಅದೇ ಒಬ್ಬ ಅಧಿಕಾರಿಗಿರುವ ಅಧಿಕಾರ ಅರವತ್ತು ವರ್ಷ. ಎನ್ನುವುದನ್ನು ಚುನಾಯಿತ ಪ್ರತಿನಿಧಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಇನ್ನು ಮುಂದಾದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹಮದ್ ಇವರುಗಳು ರಾಜಕೀಯ ವೇದಿಕೆಗಳಲ್ಲಿ ಸಾರ್ವಜನಿಕರೆದುರು ಅಧಿಕಾರಿಗಳನ್ನು ಅವಮಾನಿಸಬಾರದು. ಕರ್ತವ್ಯದಲ್ಲಿ ಏನಾದರೂ ಲೋಪವಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದು ಭಾರ್ಗವಿ ದ್ರಾವಿಡ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.










