ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಎಲೆ ಮರೆಯ ಕಾಯಿಯಂತಿರುವವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನನ್ನನ್ನು ಸನ್ಮಾನಿಸಿದಷ್ಟೆ ಖುಷಿಯಾಗಿದೆ ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.
ಎಪ್ಪತ್ತೈದು ವರ್ಷಗಳನ್ನು ಪೂರೈಸಿರುವ ಅಮೃತ ಮಹೋತ್ಸವದ ನಿಮಿತ್ತ ವಿವಿಧ ರಂಗಗಳಲ್ಲಿನ 75 ಸಾಧಕರುಗಳನ್ನು ಗುರುತಿಸಿ ರಂಗ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶಿವ ಸಂಚಾರ ಪುರಸ್ಕøತರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಯಾರಿಗಾದರೂ ವಯಸ್ಸಾಗುವುದು ದೊಡ್ಡದಲ್ಲ. 75 ವರ್ಷಗಳಲ್ಲಿ ಮಾಡಿದ ಸತ್ಕಾರ್ಯ, ದುಷ್ಕಾರ್ಯಗಳನ್ನು ಕುರಿತು ಆತ್ಮಾವಲೋಕನ ಮಾಡಿಕೊಂಡು ತಪ್ಪುಗಳನ್ನು ತಿದ್ದಿಕೊಂಡು ನಡೆದಾಗ ಮಾತ್ರ ಬದುಕಿದ್ದಕ್ಕೂ ಸಾರ್ಥಕವಾಗುತ್ತದೆ. ಸನ್ಮಾನ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ ಎಂದು ಹೇಳಿದರು.
ಸಾಧಕರುಗಳಲ್ಲಿ ನಿಷ್ಟೆ, ಭಕ್ತಿ, ಪ್ರಾಮಾಣಿಕತೆಯಿರಬೇಕು. ಸಮಸ್ಯೆ, ಸವಾಲುಗಳನ್ನು ಎದುರಿಸಿ ಜೀವನೋತ್ಸಾಹದಿಂದ ಮುಂದಿನ ಹೆಜ್ಜೆಗಳನ್ನು ಇಡಬೇಕು. ವೇದಿಕೆಗೆ ಬರುವ ಮುನ್ನಾ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ಗೆ ಪುಸ್ತಕಗಳ ಹಾರ ಹಾಕಿದ್ದು, ರಾಜಾವೀರ ಮದಕರಿನಾಯಕನಿಗೆ ಮೂವತ್ತು ವರ್ಷಗಳ ಶಿವ ಸಂಚಾರ ನಾಟಕಗಳನ್ನು ನೆನಪಿಸುವ ಪುಸ್ತಕಗಳ ಹಾರ ಸಮರ್ಪಿಸಿದ್ದು, ರಾಜ್ಯದಲ್ಲಿ ಇದೆ ಮೊದಲು. ಹಣವಿದ್ದವರೆಲ್ಲಾ ಒಳ್ಳೆ ಕೆಲಸಗಳನ್ನು ಮಾಡಲು ಆಗಲ್ಲ. ಜನಬಲದಿಂದ ಮಾತ್ರ ಇಂತಹ ಕೆಲಸಗಳನ್ನು ಮಾಡಬಹುದು ಎಂದು ತಿಳಿಸಿದರು.
ರಂಗ ಮಂಟಪಕ್ಕೆ ತ.ರಾ.ಸು.ರಂಗಮಂದಿರವೆಂದು ನಾಮಕರಣ ಮಾಡಿಯಾಗಿದೆ. ಕೊನೆ ಪಕ್ಷ ವೇದಿಕೆಗಾದರೂ ನಾಟಕಕಾರ ಸಿ.ಜಿ.ಕೆ. ಹೆಸರನ್ನು ನಾಮಕರಣ ಮಾಡಬೇಕು. ಇರುವಷ್ಟು ಕಾಲ ಜನಮುಖಿ ಕೆಲಸ ಮಾಡಿದರೆ ಸಾಕು. ಯೋಗ್ಯ ಸ್ವಾಮೀಜಿಗಳಾಗುವುದು ಕಷ್ಟ. ಬಸವಣ್ಣ, ಅಕ್ಕಮಹಾದೇವಿಯವರಂತಾದಾಗ ಆಗ ಸುಂದರ ಸಮಾಜ ನಿರ್ಮಾಣವಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಒಳ್ಳೆಯವರು, ಕೆಟ್ಟವರು ಇದ್ದಾರೆ. ಒಳ್ಳೆಯದನ್ನು ಜೀವನದಲ್ಲಿ ಪ್ರತಿಯೊಬ್ಬರು ಪಾಲಿಸಬೇಕು. ಲೋಕ ಮೆಚ್ಚುವಂತ
ಸತ್ಕಾರ್ಯ ಮಾಡಿರುವ ಬಸವಣ್ಣನವರ ಕುರಿತು ರವಿ ಹಂಜೆ ಅವಹೇಳನವಾಗಿ ಮಾತನಾಡಿರುವುದು ಶರಣರಿಗೆ ಮಾಡಿರುವ ಅಪಮಾನ, ಇಂತಹ ಲೇಖಕನ ತಲೆ ತೆಗೆದರೆ ಐದು ಲಕ್ಷ ರೂ.ಗಳನ್ನು ನೀಡುವುದಾಗಿ ಯಾರೋ ಘೋಷಿಸಿದ್ದಾರೆ. ತಲೆ ತೆಗೆಯುವುದು ನಮ್ಮ ಕೆಲಸವಲ್ಲ. ತಲೆಯಲ್ಲಿರುವ ಕಸವನ್ನು ತೆಗೆಯಬೇಕು. ಸರ್ಕಾರ ಇಂತಹ ಕೃತಿಯನ್ನು ಮುಟ್ಟುಗೋಲು ಹಾಕಿರುವುದು ದೊಡ್ಡದಲ್ಲ. ರಂಜಿ ಹಂಜ್ ಮತ್ತು ವಿಶ್ವೇಶ್ವರ ಭಟ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.










