ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ (EPFO) ಪಿಂಚಣಿ ಪಡೆಯುತ್ತಿರುವವರಿಗೆ ಪಿಂಚಣಿ ಪಾವತಿ ಆದೇಶ (PPO) ಸಂಖ್ಯೆ ಅತ್ಯಂತ ಮಹತ್ವದ್ದಾಗಿದೆ. ನಿವೃತ್ತಿಯ ನಂತರ ಪಿಂಚಣಿ ಪಡೆಯುತ್ತಿರುವವರು ತಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ಬ್ಯಾಂಕ್ ಖಾತೆ ಬದಲಾಯಿಸಲು ಹಾಗೂ ಜೀವನ ಪ್ರಮಾಣಪತ್ರ (Life Certificate) ಸಲ್ಲಿಸುವಂತಹ ಪ್ರಮುಖ ಕೆಲಸಗಳಿಗೆ ಈ 12 ಅಂಕಿಗಳ ಸಂಖ್ಯೆ ಕಡ್ಡಾಯವಾಗಿ ಬೇಕಾಗುತ್ತದೆ. ಒಂದು ವೇಳೆ ನೀವು ಈ ಪಿಪಿಒ ಸಂಖ್ಯೆಯನ್ನು ಮರೆತಿದ್ದರೆ ಆತಂಕಪಡುವ ಅಗತ್ಯವಿಲ್ಲ; ಇಪಿಎಫ್‌ಒ ಪಿಂಚಣಿದಾರರ ಪೋರ್ಟಲ್ ಮೂಲಕ ಕೆಲವೇ ನಿಮಿಷಗಳಲ್ಲಿ ಇದನ್ನು ಸುಲಭವಾಗಿ ಪತ್ತೆಹಚ್ಚಬಹುದು.
ಪಿಪಿಒ ನಂಬರ್ ತಿಳಿದುಕೊಳ್ಳುವುದು ಹೇಗೆ?
ನಿಮ್ಮ ಪಿಪಿಒ ಸಂಖ್ಯೆಯನ್ನು ಪಡೆಯಲು ಮೊದಲು ಇಪಿಎಫ್‌ಒ ಅಧಿಕೃತ ವೆಬ್‌ಸೈಟ್ (www.epfo.gov.in) ಗೆ ಭೇಟಿ ನೀಡಿ. ಮುಖಪುಟದಲ್ಲಿ ಕಾಣಿಸುವ ‘ಪಿಂಚಣಿದಾರರು’ (Pensioners) ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ ಲಾಗಿನ್ ಆಗಬೇಕು. ಅಲ್ಲಿ ಎಡಭಾಗದ ಮೆನುವಿನಲ್ಲಿ ಕಾಣಿಸುವ ‘ನಿಮ್ಮ ಪಿಪಿಒ ನಂಬರ್ ತಿಳಿಯಿರಿ’ (Know Your PPO No.) ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. ಇಲ್ಲಿ ನಿಮಗೆ ಎರಡು ವಿಧಾನಗಳು ಲಭ್ಯವಿರುತ್ತವೆ. ಮೊದಲನೆಯದಾಗಿ, ಬ್ಯಾಂಕ್ ಖಾತೆ ಸಂಖ್ಯೆಯ ಮೂಲಕ ಪಿಪಿಒ ಸಂಖ್ಯೆ ಹುಡುಕುವ ಆಯ್ಕೆಯನ್ನು ಆರಿಸಿ, ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ದಾಖಲಿಸಿದರೆ ತಕ್ಷಣವೇ ನಿಮ್ಮ ಪಿಪಿಒ ಸಂಖ್ಯೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಇನ್ನೊಂದು ವಿಧಾನದಲ್ಲಿ, ನಿಮ್ಮ ಇಪಿಎಫ್‌ಒ ಮೆಂಬರ್ ಐಡಿ (Member ID) ಆಯ್ಕೆಯನ್ನು ಆರಿಸಿ, ಐಡಿ ಸಂಖ್ಯೆಯನ್ನು ನಮೂದಿಸಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡುವ ಮೂಲಕವೂ ಪೋರ್ಟಲ್‌ನಲ್ಲಿ ಪಿಪಿಒ ಸಂಖ್ಯೆಯನ್ನು ತಿಳಿದುಕೊಳ್ಳಬಹುದು.

ಅಷ್ಟಕ್ಕೂ ಪಿಪಿಒ ನಂಬರ್ ಎಂದರೇನು?
ಪಿಪಿಒ ಎಂದರೆ ಪೆನ್ಷನ್ ಪೇಮೆಂಟ್ ಆರ್ಡರ್ (Pension Payment Order) ಎಂದರ್ಥ. ಇದು ಪಿಂಚಣಿದಾರರಿಗೆ ಪಿಂಚಣಿ ಪಾವತಿಸುವ ದಾಖಲೆಗಳನ್ನು ಗುರುತಿಸಲು ಸಹಾಯ ಮಾಡುವ 12 ಅಂಕಿಗಳ ವಿಶಿಷ್ಟ ಸಂಖ್ಯೆಯಾಗಿದೆ. ಈ 12 ಅಂಕಿಗಳಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಅರ್ಥವಿದೆ. ಮೊದಲ ಐದು ಅಂಕಿಗಳು ಪಿಪಿಒ ಜಾರಿ ಮಾಡಿದ ಸಂಸ್ಥೆಯ ಕೋಡ್ ಅನ್ನು ಸೂಚಿಸಿದರೆ, ನಂತರದ ಎರಡು ಅಂಕಿಗಳು ಪಿಪಿಒ ಜಾರಿಯಾದ ವರ್ಷವನ್ನು ತಿಳಿಸುತ್ತವೆ. ಆನಂತರದ ನಾಲ್ಕು ಅಂಕಿಗಳು ಪಿಂಚಣಿ ದಾಖಲೆಯ ಸಂಖ್ಯೆಯನ್ನು ಪ್ರತಿನಿಧಿಸುತ್ತವೆ ಮತ್ತು ಕೊನೆಯ ಒಂದು ಅಂಕಿಯನ್ನು ಪರಿಶೀಲನೆಗಾಗಿ (Verification) ಬಳಸಲಾಗುತ್ತದೆ. ಒಟ್ಟಾರೆಯಾಗಿ, ಈ ಸಂಖ್ಯೆಯು ಪಿಂಚಣಿದಾರರ ಸಂಪೂರ್ಣ ಪಿಂಚಣಿ ವಿವರಗಳನ್ನು ಒಳಗೊಂಡಿರುತ್ತದೆ.










