Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೊಸದುರ್ಗ ಬಸ್ ನಿಲ್ದಾಣದಲ್ಲಿ ಪಿಕ್ ಪಾಕೆಟ್ : ಐವರು ಅಂತರ್ ಜಿಲ್ಲಾ ಕಳ್ಳರ ಬಂಧನ

---Advertisement---

ಸುದ್ದಿಒನ್, ಹೊಸದುರ್ಗ, ನವೆಂಬರ್. 22: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗಿನಿಂದ ಹಣ ಕಳ್ಳತನ ಮಾಡುತ್ತಿದ್ದ ಐವರು ಅಂತರ್ ಜಿಲ್ಲಾ ಪಿಕ್ ಪಾಕೆಟ್ ಕಳ್ಳರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಳ್ಳತನವಾಗಿದ್ದ ಸುಮಾರು 60,000 ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಿತ್ರದುರ್ಗದ ನೀಲಕಂಠೇಶ್ವರ ಬಡಾವಣೆಯ ನಿವಾಸಿ ಎ.ಆರ್. ಲಕ್ಷ್ಮಣ್ ರಾವ್ ಅವರು ನವೆಂಬರ್ 2, 2026 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಹೊಸದುರ್ಗ ನಗರದಲ್ಲಿ ಕಿರಾಣಿ ಅಂಗಡಿಯ ಬಾಕಿ ಹಣವನ್ನು ವಸೂಲಿ ಮಾಡಿಕೊಂಡಿದ್ದರು. ಒಟ್ಟು 1,20,000 ರೂಪಾಯಿ ನಗದು ಹಣವನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಂಡು ಹೊಸದುರ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ಅವರು, ಚಿತ್ರದುರ್ಗಕ್ಕೆ ತೆರಳುವ ಬಸ್ ಹತ್ತುವ ಸಮಯದಲ್ಲಿ ಕಳ್ಳರು ಬ್ಯಾಗಿನಲ್ಲಿದ್ದ ಹಣವನ್ನು ಎಗರಿಸಿದ್ದರು. ಈ ಸಂಬಂಧ ಲಕ್ಷ್ಮಣ್ ರಾವ್ ನೀಡಿದ ದೂರಿನ ಮೇರೆಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪತ್ತೆಗಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಹಿರಿಯೂರು ಡಿವೈಎಸ್ಪಿ ಗೋಪಾಲಕೃಷ್ಣ ಅವರ ಉಸ್ತುವಾರಿಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಹೊಸದುರ್ಗ ಸಿಪಿಐ ರಮೇಶ್ ಕೆ.ಟಿ. ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ಶ್ರೀಶೈಲ, ಮಹೇಶ್ ಕುಮಾರ್ ಎನ್., ಪ್ರೊಬೇಷನರಿ ಪಿಎಸ್ಐ ಸಂಗನಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಕುಮಾರ್, ಉಮೇಶ್, ಗಂಗಾಧರ, ಚಂದ್ರಪ್ಪ, ತಿಪ್ಪೇಸ್ವಾಮಿ, ಬೀರೇಶ್ ಮತ್ತು ತಾಂತ್ರಿಕ ವಿಭಾಗದ ಪ್ರಕಾಶ್ ಹಾಗೂ ಸತೀಶ್ ಅವರ ತಂಡ ತಾಂತ್ರಿಕ ಮತ್ತು ಗುಪ್ತ ಮಾಹಿತಿಯನ್ನು ಸಂಗ್ರಹಿಸಿ ಕಾರ್ಯಾಚರಣೆ ನಡೆಸಿತು.

ನವೆಂಬರ್ 19, 2026 ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಹುಬ್ಬಳ್ಳಿ ನಗರದ ಗಂಗಾಧರ ನಗರದ ಹನುಮಂತ ಹರಳಿ (54), ಶ್ರೀಕಾಂತ ಬಳ್ಳಾರಿ, ಸದ್ದಾಂ ಹುಸೇನ್ ರಾಯಚೂರ್ (34), ಮಂಟೂರು ರಸ್ತೆಯ ಮಂಜುನಾಥ ದೊಡ್ಡಮನಿ (32) ಹಾಗೂ ಕಾರವಾರ ಜಿಲ್ಲೆಯ ಮುಂಡಗೋಡು ತಾಲೂಕಿನ ಸನವಳ್ಳಿ ಗ್ರಾಮದ ಅಣ್ಣಪ್ಪ ಕ್ಯಾರಕಟಿ ಎಂಬ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಶ್ರಮಿಸಿದ ಹೊಸದುರ್ಗ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರು ಶ್ಲಾಘಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now