ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಮನುಷ್ಯ ಜೀವತಾಳಿ, ಜೀವಿಸಿ ಮರಣ ಹೊಂದುವುದರ ನಡುವೆ ಏನಾದರೂ ಸಾಧನೆ ಮಾಡಬೇಕು. ಆಗ ಮಾತ್ರ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಹೇಳಿದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳವರ ಅಮೃತ ಮಹೋತ್ಸವ ಅಂಗವಾಗಿ 75 ಸಾಧಕರಿಗೆ ತ.ರಾ.ಸು.ರಂಗ ಮಂದಿರದಲ್ಲಿ ಬಿ.ಕಾಂತರಾಜ್ ಮತ್ತು ತಂಡದವರು ಹಮ್ಮಿಕೊಂಡಿದ್ದ ಶಿವ ಸಂಚಾರ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬಸವಾದಿ ಶರಣರ ತತ್ವಾದರ್ಶಗಳನ್ನು ಚಾಚು ತಪ್ಪದೆ ಪಾಲನೆ ಮಾಡುತ್ತಿದ್ದಾರೆ. ಶಿವ ಸಂಚಾರ ನಾಟಕದ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕೆಲಸವಾಗುತ್ತಿದೆ. ಮದ್ಯಪಾನದಿಂದ ಸರ್ಕಾರಕ್ಕೆ ಆದಾಯ ಬರುತ್ತದೆ ನಿಜ. ಆದರೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಆರೋಗ್ಯ ಪೂರ್ಣ ಸಮಾಜ ನಿರ್ಮಿಸಬಹುದು. ನಾನು ಚಳ್ಳಕೆರೆ ಶಾಸಕನಾದಾಗಿನಿಂದಲೂ ಯಾವುದೇ ಹೊಸ ಮದ್ಯದಂಗಡಿಗಳಿಗೆ ಅನುಮತಿ ಕೊಟ್ಟಿಲ್ಲ. ಮದ್ಯ ಸೇವನೆಯಿಂದ ಅಪರಾಧಗಳು ಹೆಚ್ಚುತ್ತದೆ. 75 ಸಾಧಕರುಗಳನ್ನು ಗುರುತಿಸಿ ಶಿವ ಸಂಚಾರ ಪುರಸ್ಕಾರ ನೀಡುತ್ತಿರುವುದು ವಿಶೇಷ. ಇದು ಸಾಧಕರುಗಳಿಗೆ ಪ್ರೇರಣೆ. ಜಿಲ್ಲೆಯ ಅಭಿವೃದ್ದಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇನೆಂದು ಭರವಸೆ ನೀಡಿದರು.
ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ ಮೂಢ ನಂಬಿಕೆಯಿಂದ ನಲುಗುತ್ತಿರುವವರ ಸುಧಾರಣೆಗೆ ಶ್ರಮಿಸಿದ ಹನ್ನೆರಡನೆ ಶತಮಾನದ ಬಸವಣ್ಣನವರ ಬಗ್ಗೆ ಇಲ್ಲ ಸಲ್ಲದ ಅಪ ಪ್ರಚಾರವಾಗುತ್ತಿದೆ. ಸಮಾಜ ದ್ರೋಹ ಕೆಲಸಕ್ಕೆ ಕೈಹಾಕಿರುವ ಅಜ್ಞಾನಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. 21 ನೇ ಶತಮಾನದಲ್ಲಿ ಇನ್ನು ಬಸವ ತತ್ವ ಉಳಿದಿದೆ ಎನ್ನುವುದಾದರೆ ಅದಕ್ಕೆ ಅನೇಕ ಮಠಾಧೀಶರುಗಳು ಕಾರಣ. ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ದೀನ ದಲಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆಂದು ಗುಣಗಾನ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮಿಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿರುವುದು ನಿರಂತರವಾಗಿ ನಡೆಯಲಿ. ಬುದ್ದಿಗಳಿಂದ ಪ್ರತಿಯೊಬ್ಬರು ಶಿಸ್ತು ಕಲಿಯಬೇಕಿದೆ. ಸಾಧಕರುಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಸಿಗಲಿ ಎಂದು ಆಶಿಸಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡುತ್ತ ಶಿವಸಂಚಾರ ನಾಟಕವನ್ನು ಉತ್ತರ ಭಾರತಕ್ಕೆ ಪಸರಿಸಿರುವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಸಮಾಜದ ತಪ್ಪು ಹಾಗೂ ನೂನ್ಯತೆಗಳನ್ನು ನಾಟಕದ ಮೂಲಕ ತಿದ್ದುತ್ತಿದ್ದಾರೆ. ನೇರ ನಿಷ್ಟುರ ನುಡಿಯವರು. ಅವರ ಸಾಧನೆಗಳೆ ಗೋಲ್ಡ್ ಮೆಡಲ್‍ಗಳಾಗಿವೆ ಎಂದರು.
ಹೊಸದುರ್ಗ ತಾಲ್ಲೂಕಿನಲ್ಲಿ 33 ಕೆರೆಗಳು ತುಂಬಿ ತುಳುತ್ತಿರುವುದರ ಹಿಂದೆ ಪಂಡಿತಾರಾಧ್ಯರ ಕಾಳಜಿಯಿದೆ. 75 ಸಾಧಕರುಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಒಳ್ಳೆಯ ಕಾರ್ಯಕ್ರಮ ಎಂದು ಪ್ರಶಂಶಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಮಧ್ಯ ಕರ್ನಾಟಕದ ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಗೆ ಬಡತನವಿರಬಹುದು. ಆದರೆ ಕಲೆ ಸಾಹಿತ್ಯ ಸಂಸ್ಕøತಿಯಲ್ಲಿ ಅತ್ಯಂತ ಶ್ರೀಮಂತಿಕೆಯಿದೆ. ಶಿವ ಸಂಚಾರ ನಾಟಕದ ಮೂಲಕ ಸಮಾಜಕ್ಕೆ ದಿಕ್ಸೂಚಿ ಕೊಟ್ಟವರು ಪಂಡಿತಾರಾಧ್ಯರು. ರಾಜ್ಯ ಸರ್ಕಾರ ಮದ್ಯಪಾನ ನಿಷೇಧಿಸುವುದಾದರೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವುಗಳೆಲ್ಲಾ ಬೇರೆ ಬೇರೆ ಪಕ್ಷಗಳಲ್ಲಿರಬಹುದು. ಆರೋಗ್ಯ ಪೂರ್ಣ ಕೆಲಸಕ್ಕೆ ಸಹಕಾರವಿದೆ. ಸಾಣೆಹಳ್ಳಿ ಮೂಲಕ ಜಿಲ್ಲೆಗೆ ಭದ್ರಾ ನೀರು ಪಾದಾರ್ಪಣೆ ಮಾಡಿರುವುದು ಹೆಗ್ಗಳಿಕೆ. ಸಮಾನತೆಯ ಸಂದೇಶವನ್ನು ಸಮಾಜಕ್ಕೆ ಕೊಟ್ಟಿರುವ ಬಸವಣ್ಣನವರ ಆಶಯಗಳಂತೆ ಶ್ರೀಗಳು ಬದುಕುತ್ತಿದ್ದಾರೆಂದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡುತ್ತ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕೇವಲ ಕಲೆ, ಸಾಹಿತ್ಯ, ಸಂಗೀತ, ನಾಟಕಕ್ಕಷ್ಟೆ ಸೀಮಿತವಾಗಿಲ್ಲ. ಸಮಾಜ ಸುಧಾರಣೆಗೆ ಅವರ ಕೊಡುಗೆ ಅಪಾರವಾಗಿದೆ. ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟವರು ಸಾಣೆಹಳ್ಳಿಯ ಸ್ವಾಮಿಗಳು. ರಂಗಭೂಮಿ ಮೂಲಕ ಸಾಣೆಹಳ್ಳಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಕೀರ್ತಿ ಸಾಣೆಹಳ್ಳಿ ಮಠಕ್ಕೆ ಸಲ್ಲುತ್ತದೆ ಎಂದು ನುಡಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಐವತ್ತು ವರ್ಷಗಳನ್ನು ಸ್ವಾಮಿಗಳಾಗಿ ಕಳೆದಿರುವುದು ದೊಡ್ಡ ಸಾಧನೆ.
ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ನಿವೃತ್ತಿಯಿದೆ. ಆದರೆ ಸ್ವಾಮೀಜಿಗಳಿಗೆ ನಿವೃತ್ತಿಯಿಲ್ಲ. ಯಾವಾಗ ಬೇಕಾದರೂ ಸ್ವಾಮಿಗಳ ಮೇಲೆ ಕಳಂಕ ಬರಬಹುದು. ಆದರೆ ಈ ಸ್ವಾಮೀಜಿಗಳ ಮೇಲೆ ಯಾವುದೇ ಕಪ್ಪು ಚುಕ್ಕೆಯಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಶಿವ ಸಂಚಾರ ಪುರಸ್ಕøತರು ಸಮಾರಂಭದ ಸಾನಿಧ್ಯ ವಹಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಮಾಜಿ ಶಾಸಕಿ ಆರ್.ಪೂರ್ಣಿಮ ಶ್ರೀನಿವಾಸ್, ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್, ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಹನುಮಲಿ
ಷಣ್ಮುಖಪ್ಪ, ಶಂಕರಮೂರ್ತಿ, ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್, ವಿ.ಎಲ್.ಪ್ರಶಾಂತ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಉದ್ಯಮಿ ಅರುಣ್, ಅಹೋಬಲಪತಿ, ದರ್ಶನ್ ಇವರುಗಳು ವೇದಿಕೆಯಲ್ಲಿದ್ದರು.
ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ ಉಪನ್ಯಾಸ ನೀಡಿದರು.












