ಮಂಡ್ಯ: ಇತ್ತೀಚೆಗೆ ಸಾಲದಿಂದ ಮನನೊಂದು ಮೈಸೂರಿನ ವಿಶ್ವೇಶ್ವರಯ್ಯ ನಗರ ಅಪಾರ್ಟ್ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆ ಘಟನೆ ಮಾಸುವ ಮುನ್ನವೇ ಮಂಡ್ಯದಲ್ಲೂ ಅಂಥದ್ದೇ ಒಂದು ಘಟನೆ ನಡೆದಿದೆ. ಸಾಲದ ಸುಳಿಯಿಂದ ನಲುಗಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆ ನಡೆದಿರೋದು ಮಂಡ್ಯ ತಾಲೂಕಿನ ವಿಸಿ ನಾಲೆಯಲ್ಲಿ. ಮೃತರು 3 ಲಕ್ಷ ಸಾಲ ಮಾಡಿಕೊಂಡಿದ್ದರಂತೆ. ಆದರೆ ಆ ಸಾಲ ತೀರಿಸುವುದು ತಡವಾಗಿದೆ. ಇದರಿಂದ ಸಾಲಗಾರರು ಮನೆ ಬಳಿ ಬಂದಿ ಗಲಾಟೆ ಮಾಡಿದ್ದರಂತೆ. ಏನೇ ಆಗಲಿ ಮರ್ಯಾದೆಗೆ ಭಯ ಪಡುವ ಜನರಾಗಿರುವ ಕಾರಣ, ಆ ಘಟನೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂದಾಗುವಷ್ಟು ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಸಾಲಗಾರರು ಮನೆ ಬಾಗಿಲಿಗೆ ಬಂದು ಜಗಳವಾಡಿ ಹೋದ ಮೇಲೆ, ಮನೆಯಲ್ಲಿದ್ದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೊದಲು ವಿಷ ಸೇವಿಸಿದ ಮೂವರು ಬಳಿಕ ವಿಸಿ ನಾಲೆಗೆ ಬಂದು ಹಾರಿ, ಪ್ರಾಣ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟವರು ಯಾರು..? ಫೈನಾನ್ಸ್ ಕಂಪನಿಯವರೇನಾದರೂ ಕೊಟ್ಟರಾ ಎಂಬೆಲ್ಲಾ ಮಾಹಿತಿ ಇನ್ನು ತಿಳಿಯಬೇಕಿದೆ. ಮೃತರು ಮೂಲತಃ ಯಾವ ಗ್ರಾಮದವರು ಎಂಬ ಯಾವ ಮಾಹಿತಿಯೂ ಇನ್ನು ತಿಳಿದು ಬಂದಿಲ್ಲ. ಇದೇ ಕಾರಣಕ್ಕಾಗಿಯೇ ಸರ್ಕಾರ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಸುಗ್ರಿವಾಜ್ಞೆ ಹೊರಡಿಸಿರೋದು. ಸಾಲ ಸುಲಭಕ್ಕೆ ಸಿಗುತ್ತದೆ ಎಂದು ತೆಗೆದುಕೊಂಡು, ಅದನ್ನು ಕಟ್ಟುವ ಮಾರ್ಗ ಸಿಗದೆ ಇದ್ದಾಗ, ಮರ್ಯಾದೆಯ ಪ್ರಶ್ನೆ ಎದುರಾದಾಗ, ಗೌರವಕ್ಕೆ ಹೆಚ್ಚು ಒತ್ತು ಕೊಡುವ ಕುಟುಂಬವಾದರೆ ಈ ರೀತಿಯ ಘಟನೆಯನ್ನೆಲ್ಲಾ ತಡೆದುಕೊಳ್ಳುವುದು ಕಷ್ಟವಾಗುತ್ತದೆ.


















