ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಲಾಗಿದೆ. ಈ ಆದೇಶದ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಇದೀಗ ಬಂದ್ ವಿಚಾರದಲ್ಲೇ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯ ಮೂಡಿದೆ.
ಆಗಸ್ಟ್ 13ರಂದು ಕರ್ನಾಟಕ ಬಂದ್ ನಡೆಸುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಕರ್ನಾಟಕದ ಹಿತಾಸಕ್ತಿ ಹಾಗೂ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಬಂದ್ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಸಂಘಟನೆಗಳ ಒಕ್ಕೂಟದ ಜತೆಗೆ ಕೆಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಆದರೆ ಕರ್ನಾಟಕ ರಕ್ಷಣಾ ವೇದಿಕೆಯ ಹಲವು ಬಣಗಳು, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಖಾಸಗಿ ಸಾರಿಗೆ ಒಕ್ಕೂಟ ಹಾಗೂ ಖಾಸಗಿ ಶಾಲೆಗಳ ಒಕ್ಕೂಟ ಸೇರಿದಂತೆ ಪ್ರಮುಖ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿಲ್ಲ.
ಈ ಹಿನ್ನೆಲೆಯಲ್ಲಿ ಆಗಸ್ಟ್ 13ರಂದು ರಾಜ್ಯಾದ್ಯಂತ ಸಂಪೂರ್ಣ ಬಂದ್ ನಡೆಯುವುದು ಅನುಮಾನವಾಗಿದೆ. ಕೆಲವು ಪ್ರದೇಶಗಳಲ್ಲಿ ಮಾತ್ರ ಬಂದ್ ಹಾಗೂ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ.
ವಾಟಾಳ್ ನಾಗರಾಜ್ ಹೇಳಿದ್ದೇನು?
ಆಗಸ್ಟ್ 13ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಖಂಡ ಕರ್ನಾಟಕ ಬಂದ್ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಬಂದ್ ಯಶಸ್ವಿಗೊಳಿಸಲು ಸರಣಿ ಪ್ರತಿಭಟನೆಗಳನ್ನು ನಡೆಸುವುದಾಗಿಯೂ ಅವರು ತಿಳಿಸಿದ್ದಾರೆ.
ವಾಟಾಳ್ ನಾಗರಾಜ್ ನೇತೃತ್ವದ ಸಂಘಟನೆಗಳ ಜತೆಗೆ ಆದರ್ಶ ಆಟೋ ಸಂಘಟನೆಗಳ ಒಕ್ಕೂಟ ಹಾಗೂ ಹೋಟೆಲ್ ಅಸೋಸಿಯೇಷನ್ ನೈತಿಕ ಬೆಂಬಲ ನೀಡಿವೆ ಎಂದು ತಿಳಿದುಬಂದಿದೆ.
ಆದರೆ ಕರವೇ ಶಿವರಾಮೇಗೌಡ ಬಣ, ಕರವೇ ಪ್ರವೀಣ್ ಶೆಟ್ಟಿ ಬಣ, ಕರವೇ ನಾರಾಯಣ ಗೌಡ ಬಣ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಖಾಸಗಿ ಸಾರಿಗೆ ಒಕ್ಕೂಟ ಹಾಗೂ ಖಾಸಗಿ ಶಾಲೆಗಳ ಒಕ್ಕೂಟ (RUPSA) ಬಂದ್‌ಗೆ ಬೆಂಬಲ ಸೂಚಿಸಿಲ್ಲ.
ಶಾಲಾ-ಕಾಲೇಜುಗಳಿಗೆ ರಜೆ ಇದೆಯಾ?
ಇನ್ನು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತದೆಯೇ ಎಂಬ ಪ್ರಶ್ನೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಮೂಡಿದೆ.ಸದ್ಯಕ್ಕೆ ಶಿಕ್ಷಣ ಇಲಾಖೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಕುರಿತು ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಅಲ್ಲದೆ, ಖಾಸಗಿ ಶಾಲೆಗಳ ಒಕ್ಕೂಟವೂ ಬಂದ್‌ಗೆ ಬೆಂಬಲ ನೀಡಿಲ್ಲ.BMTC ಮತ್ತು KSRTC ಕೂಡ ಬಂದ್‌ಗೆ ಬೆಂಬಲ ಸೂಚಿಸದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳು ಎಂದಿನಂತೆ ಮುಂದುವರಿಯುವ ಸಾಧ್ಯತೆ ಇದೆ.
ಹೀಗಾಗಿ ಸರ್ಕಾರ ಅಥವಾ ಶಿಕ್ಷಣ ಇಲಾಖೆ ಅಧಿಕೃತವಾಗಿ ರಜೆ ಘೋಷಿಸುವವರೆಗೆ ಶಾಲಾ-ಕಾಲೇಜುಗಳು ಎಂದಿನಂತೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.ಆದ್ದರಿಂದ ಆಗಸ್ಟ್ 13ರಂದು ಶಾಲಾ-ಕಾಲೇಜುಗಳಿಗೆ ರಜೆ ಇದೆಯೇ ಎಂಬುದರ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಅಥವಾ ತಮ್ಮ ಶಾಲಾ-ಕಾಲೇಜು ಆಡಳಿತ ಮಂಡಳಿಯ ಅಧಿಕೃತ ಸೂಚನೆಯನ್ನು ಪರಿಶೀಲಿಸುವುದು ಸೂಕ್ತ.











