ಅಕ್ಟೋಬರ್ ತಿಂಗಳು ಪ್ರವಾಸಕ್ಕೆ ಸೂಕ್ತ ಸಮಯ. ಮಳೆಗಾಲದ ತೀವ್ರತೆ ಕಡಿಮೆಯಾಗಿ ಬಹುತೇಕ ಪ್ರದೇಶಗಳಲ್ಲಿ ಆಹ್ಲಾದಕರ ವಾತಾವರಣ ಕಂಡುಬರುತ್ತದೆ. ಮಕ್ಕಳಿಗೂ ರಜೆ ಇರುವುದರಿಂದ ಕುಟುಂಬ ಸಮೇತ ಪ್ರವಾಸ ಕೈಗೊಳ್ಳಲು ಹಲವರು ಈ ತಿಂಗಳನ್ನು ಆಯ್ಕೆ ಮಾಡುತ್ತಾರೆ. ಹಾಗಾದರೆ ಅಕ್ಟೋಬರ್‌ನಲ್ಲಿ ಭೇಟಿ ನೀಡಬಹುದಾದ ಪ್ರಮುಖ ಪ್ರವಾಸಿ ತಾಣಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ಕೋಲ್ಕತ್ತಾ:
ಅಕ್ಟೋಬರ್‌ನಲ್ಲಿ ಕೋಲ್ಕತ್ತಾ ವಿಭಿನ್ನ ಸೊಬಗಿನಿಂದ ಕಂಗೊಳಿಸುತ್ತದೆ. ದುರ್ಗಾ ಪೂಜೆಯ ಸಂಭ್ರಮ ನಗರದೆಲ್ಲೆಡೆ ಮನೆ ಮಾಡಿರುತ್ತದೆ. ರಾತ್ರಿ ವೇಳೆ ಬಣ್ಣಬಣ್ಣದ ದೀಪಗಳಿಂದ ನಗರ ಕಂಗೊಳಿಸುವುದರ ಜೊತೆಗೆ ವಿವಿಧ ಥೀಮ್‌ಗಳಲ್ಲಿ ನಿರ್ಮಿಸಲಾದ ಪೆಂಡಾಲ್‌ಗಳು ಪ್ರವಾಸಿಗರ ಗಮನ ಸೆಳೆಯುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಟ್ರೀಟ್ ಫುಡ್ ಹಾಗೂ ಸ್ಥಳೀಯ ಮಾರುಕಟ್ಟೆಗಳನ್ನು ಸುತ್ತಾಡಲು ಇದು ಉತ್ತಮ ಸಮಯ.
ರಾಜಸ್ಥಾನ:
ಅಕ್ಟೋಬರ್‌ನಲ್ಲಿ ರಾಜಸ್ಥಾನದ ಬೇಸಿಗೆಯ ತೀವ್ರತೆ ಕಡಿಮೆಯಾಗಿದ್ದು, ಹವಾಮಾನ ಪ್ರವಾಸಕ್ಕೆ ಅನುಕೂಲಕರವಾಗಿರುತ್ತದೆ. ಉದಯಪುರದಲ್ಲಿ ಸರೋವರಗಳು ಮತ್ತು ಅರಮನೆಗಳ ಸೌಂದರ್ಯ ಸವಿಯಬಹುದು. ಲೇಕ್ ಪಿಚೋಲಾದಲ್ಲಿ ಬೋಟಿಂಗ್ ಹಾಗೂ ಸಿಟಿ ಪ್ಯಾಲೇಸ್ ಭೇಟಿ ವಿಶೇಷ ಅನುಭವ ನೀಡಬಹುದು. ಜೋಧ್‌ಪುರದಲ್ಲಿ ಮೆಹ್ರಾನ್‌ಗಢ ಕೋಟೆಯ ಜೊತೆಗೆ ಅಲ್ಲಿನ ಜಾನಪದ ಸಂಗೀತ ಮತ್ತು ಸಂಸ್ಕೃತಿಯನ್ನು ಆನಂದಿಸಬಹುದು.
ಕೇರಳ:
ಮಳೆಗಾಲದ ಬಳಿಕ ಅಕ್ಟೋಬರ್‌ನಲ್ಲಿ ಕೇರಳದ ಹಸಿರು ಸೌಂದರ್ಯ ಮತ್ತಷ್ಟು ಆಕರ್ಷಕವಾಗಿರುತ್ತದೆ. ಅಲೆಪ್ಪಿಯ ಬ್ಯಾಕ್‌ವಾಟರ್ಸ್, ಮುನ್ನಾರ್‌ನ ಚಹಾ ತೋಟಗಳು ಮತ್ತು ಹಸಿರು ಬೆಟ್ಟಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಹೌಸ್‌ಬೋಟ್‌ನಲ್ಲಿ ಉಳಿದು ಬ್ಯಾಕ್‌ವಾಟರ್ಸ್ ಸುತ್ತಾಡುವುದರ ಜೊತೆಗೆ ವಿವಿಧ ಪ್ಲಾಂಟೇಶನ್‌ಗಳಿಗೆ ಭೇಟಿ ನೀಡಬಹುದು. ಶಾಂತ ಮತ್ತು ನೆಮ್ಮದಿಯ ವಾತಾವರಣದಲ್ಲಿ ಸಮಯ ಕಳೆಯಲು ಬಯಸುವವರಿಗೆ ಕೇರಳ ಉತ್ತಮ ಆಯ್ಕೆಯಾಗಿದೆ.
ಗೋವಾ:
ಬೀಚ್ ಪ್ರವಾಸಕ್ಕೆ ಹೋಗಲು ಬಯಸುವವರು ಅಕ್ಟೋಬರ್‌ನಲ್ಲಿ ಗೋವಾವನ್ನು ಆಯ್ಕೆ ಮಾಡಬಹುದು. ಮಳೆಗಾಲದ ಬಳಿಕ ಇಲ್ಲಿನ ಹಸಿರು ವಾತಾವರಣ ಮತ್ತಷ್ಟು ಆಕರ್ಷಕವಾಗಿರುತ್ತದೆ. ಚಳಿಗಾಲದ ಪೀಕ್ ಸೀಸನ್‌ನಷ್ಟು ಪ್ರವಾಸಿಗರ ದಟ್ಟಣೆ ಇರುವುದಿಲ್ಲ. ಬೀಚ್‌ಗಳಲ್ಲಿ ಸಮಯ ಕಳೆಯುವುದು, ಸ್ಕೂಟರ್‌ನಲ್ಲಿ ವಿವಿಧ ಸ್ಥಳಗಳನ್ನು ಸುತ್ತಾಡುವುದು ಹಾಗೂ ಸಂಜೆ ಸೂರ್ಯಾಸ್ತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ಕಾಶ್ಮೀರ:
ಅಕ್ಟೋಬರ್‌ನಲ್ಲಿ ಕಾಶ್ಮೀರದ ಪ್ರಕೃತಿ ಸೌಂದರ್ಯ ಮತ್ತಷ್ಟು ಮನಮೋಹಕವಾಗಿ ಕಾಣಿಸುತ್ತದೆ. ಚಿನಾರ್ ಮರಗಳ ಎಲೆಗಳು ಹಳದಿ ಮತ್ತು ಚಿನ್ನದ ಬಣ್ಣಕ್ಕೆ ತಿರುಗಲು ಆರಂಭಿಸುವುದರಿಂದ ಕಣಿವೆಗಳಿಗೆ ವಿಶೇಷ ಸೊಬಗು ಬರುತ್ತದೆ. ತಂಪಾದ ಗಾಳಿ, ಸ್ವಚ್ಛ ಆಕಾಶ ಮತ್ತು ಬೆಟ್ಟಗಳ ನೋಟ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದಾಲ್ ಸರೋವರದಲ್ಲಿ ಶಿಕಾರಾ ರೈಡ್ ಮಾಡಬಹುದು. ಸುತ್ತಮುತ್ತಲಿನ ಕಣಿವೆಗಳಿಗೆ ಭೇಟಿ ನೀಡಿ ಪ್ರಕೃತಿಯ ಬದಲಾಗುವ ಬಣ್ಣಗಳನ್ನು ಸವಿಯಬಹುದು.
ಆಗ್ರಾ:
ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಲು ಇಷ್ಟಪಡುವವರಿಗೆ ಅಕ್ಟೋಬರ್‌ನಲ್ಲಿ ಆಗ್ರಾ ಪ್ರವಾಸ ಉತ್ತಮ ಅನುಭವ ನೀಡಬಹುದು. ಬೇಸಿಗೆಯ ತೀವ್ರತೆ ಕಡಿಮೆಯಾಗಿರುವುದರಿಂದ ತಾಜ್‌ಮಹಲ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ಆರಾಮವಾಗಿ ವೀಕ್ಷಿಸಬಹುದು. ತಾಜ್‌ಮಹಲ್ ಜೊತೆಗೆ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಗೂ ಭೇಟಿ ನೀಡಬಹುದು.
ನ್ಯಾಷನಲ್ ಪಾರ್ಕ್‌ಗಳು:
ಮಳೆಗಾಲದ ಬಳಿಕ ಅಕ್ಟೋಬರ್‌ನಲ್ಲಿ ಹಲವು ರಾಷ್ಟ್ರೀಯ ಉದ್ಯಾನಗಳು ಪ್ರವಾಸಿಗರನ್ನು ಸ್ವಾಗತಿಸಲು ಆರಂಭಿಸುತ್ತವೆ. ಮಧ್ಯಪ್ರದೇಶದ ಬಾಂಧವಗಢ್ ಮತ್ತು ಕಾನ್ಹಾ ರಾಷ್ಟ್ರೀಯ ಉದ್ಯಾನಗಳು ಹಸಿರಿನಿಂದ ಕಂಗೊಳಿಸುತ್ತವೆ. ರಾಜಸ್ಥಾನದ ರಣಥಂಬೋರ್ ಕೂಡ ವನ್ಯಜೀವಿ ಪ್ರಿಯರನ್ನು ಆಕರ್ಷಿಸುತ್ತದೆ. ಜಂಗಲ್ ಸಫಾರಿ ವೇಳೆ ಹುಲಿ, ಜಿಂಕೆ ಸೇರಿದಂತೆ ವಿವಿಧ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸುವ ಅವಕಾಶ ದೊರೆಯಬಹುದು.
ಅಕ್ಟೋಬರ್ ತಿಂಗಳಲ್ಲಿ ಪ್ರಕೃತಿ, ಸಂಸ್ಕೃತಿ, ಇತಿಹಾಸ, ಬೀಚ್ ಮತ್ತು ವನ್ಯಜೀವಿ ಪ್ರವಾಸ—ಹೀಗೆ ನಿಮ್ಮ ಆಸಕ್ತಿಗೆ ತಕ್ಕಂತೆ ಹಲವು ತಾಣಗಳನ್ನು ಆಯ್ಕೆ ಮಾಡಬಹುದು.












