ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 11 : ಜಿಲ್ಲೆಯ ವಸತಿ ರಹಿತರಿಗೆ ನಿವೇಶನಕ್ಕಾಗಿ ಸರ್ಕಾರಿ ಭೂಮಿಯನ್ನು ಕಾಯ್ದಿರಿಸುವಂತೆ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಕೋಟೆ ಮುಂಭಾಗದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ರಸ್ತೆಯುದ್ದಕ್ಕೂ ಕ್ರಾಂತಿ ಗೀತೆಗಳನ್ನು ಹಾಡಿದರು.
ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕಾಂ.ಸಾತಿ ಸುಂದರೇಶ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಕೇಂದ್ರದಲ್ಲಿ ಬಿಜೆಪಿ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರು ಕಾರ್ಮಿಕರ ಬದುಕು ಸುಧಾರಣೆಯಾಗಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಘೋಷಿಸಿರುವ ಪ್ರಧಾನಿ ಮೂರನೆ ಬಾರಿಗೆ ದೇಶದ ಚುಕ್ಕಾಣಿ ಹಿಡಿದಿದ್ದರೂ ಯುವಕರ ಕೈಗೆ ಉದ್ಯೋಗ ಸಿಕ್ಕಿಲ್ಲ. ರಾಜಕೀಯದಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಇನ್ನು ಆಗುತ್ತಿಲ್ಲ ಎಂದು ಕಿಡಿಕಾರಿದರು.
ಜಿಲ್ಲೆಯಲ್ಲಿ ನಿವೇಶನ ಮನೆ ಇಲ್ಲದವರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಆಳುವ ಸರ್ಕಾರಗಳ ಹೊಣೆ. ನ್ಯಾಯ ಕೇಳಿದವರನ್ನು ದೇಶ ದ್ರೋಹಿಗಳೆಂದು ಕರೆಯುತ್ತಾರೆ. ಒಂದು ವರ್ಷದ ಹಿಂದೆ ಮನೆಗಳಿಗೆ ಅರ್ಜಿ ಹಾಕಿದಾಗ ಓಟಿಪಿ. ಬಂದಿರಲಿಲ್ಲ. ಈಗ ಬಂದಿದೆ. ನಗರದ ಸುತ್ತಮುತ್ತ ಇರುವ ಸರ್ಕಾರಿ ಜಮೀನುಗಳನ್ನು ಬಡವರಿಗೆ ಹಂಚಲು ಜಿಲ್ಲಾಡಳಿತ ರೆಕಾರ್ಡ್ ಸಿದ್ದಪಡಿಸಿಕೊಳ್ಳಬೇಕು. ಇನ್ನು ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಸೆ.1 ರಂದು ದೆಹಲಿಯಲ್ಲಿ ಒಂದು ಲಕ್ಷ ಜನ ಸೇರಿ ಪ್ರಧಾನಿ ಮೋದಿಯನ್ನು ಭೇಟಿ ಮಾಡುತ್ತೇವೆ. ದೇಶದ ಬೇರೆ ಬೇರೆ ಭಾಗಗಳಿಂದ ಜನ ಸೇರಲಿದ್ದು, ರಾಜ್ಯದಿಂದ ಐದುನೂರು, ಜಿಲ್ಲೆಯಿಂದ 25 ಮಂದಿ ಪಾಲ್ಗೊಂಡು ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇವೆಂದು ತಿಳಿಸಿದರು.
ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡುತ್ತ ಕಮ್ಯುನಿಸ್ಟ್ ಪಕ್ಷದ ಹೋರಾಟದ ಫಲವಾಗಿ ಕೇರಳದಲ್ಲಿ ಬಡವರು ಮನೆಗಳನ್ನು ಕಟ್ಟಿಸಿಕೊಳ್ಳಲು ಹಣದ ನೆರವು ಸಿಕ್ಕಿದೆ. ಜಿಲ್ಲೆಯಲ್ಲಿ ವಸತಿ ರಹಿತರಿಗೆ ನಿವೇಶನಗಳನ್ನು ನೀಡುವಂತೆ ನಗರಸಭೆಗೆ ಅರ್ಜಿ ಸಲ್ಲಿಸಲಾಗಿದೆ. ತುರ್ತಾಗಿ ನಿವೇಶನಗಳನ್ನು ನೀಡಿ ಮನೆ ಕಟ್ಟಿಸಿಕೊಳ್ಳಲು ಐದು ಲಕ್ಷ ರೂ.ಗಳನ್ನು ಕೊಡಬೇಕು. ಕೇವಲ ಒಂದು ಲಕ್ಷ 35 ಸಾವಿರ ರೂ.ಗಳನ್ನು ನೀಡಿದರೆ ಬಡವರು ಮನೆಗಳನ್ನು ಕಟ್ಟಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು?
ಸಮಿತಿಯ ತಾಲ್ಲೂಕು ಕಾರ್ಯದರ್ಶಿ ಕಾಂ.ಟಿ.ಆರ್.ಉಮಾಪತಿ ಮಾತನಾಡಿ ಕಾರ್ಮಿಕರಿಗೆ ಮಾರಕವಾಗಿರುವ ಕಾನೂನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಕಾಯಿದೆಯನ್ನು ಬದಲಾವಣೆಗೊಳಿಸಬೇಕು. ಜಿಲ್ಲೆಯಲ್ಲಿರುವ ಗೋಮಾಳ ಜಮೀನುಗಳನ್ನು ನಿವೇಶನಗಳನ್ನಾಗಿ ಮಾರ್ಪಡಿಸಿ ಬಡವರಿಗೆ ಹಂಚಿಕೆ ಮಾಡಿ ಮನೆಗಳನ್ನು ಕಟ್ಟಿಸಿಕೊಳ್ಳಲು ಹಣ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಸಿಪಿಐ.ಜಿಲ್ಲಾ ಸಹ ಕಾರ್ಯದರ್ಶಿ ಕಾಂ.ಜಾಫರ್ ಷರೀಪ್ ಮಾತನಾಡುತ್ತ ರಾಜ್ಯದಲ್ಲಿ 35 ಲಕ್ಷ ಜನರಿಗೆ ವಾಸಿಸಲು ಸ್ವಂತ ಮನೆಗಳಿಲ್ಲವೆಂದು ವಸತಿ ಸಚಿವರಾಗಿದ್ದ ಜಮೀರ್ ಅಹಮದ್ ಹೇಳಿದ್ದರು. ನಮ್ಮ ಅಂದಾಜಿನ ಪ್ರಕಾರ ಐವತ್ತು ಲಕ್ಷ ಜನರು ವಸತಿ ಹೀನರಿದ್ದಾರೆ. ಸೂರಿಗಾಗಿ ಅನೇಕ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಮೊಳಕಾಲ್ಮುರು ತಾಲ್ಲುಕಿನಲ್ಲಿ ಬಡವರಿಗೆ ನಿವೇಶನಗಳನ್ನು ವಿತರಿಸಲು 84 ಎಕರೆ ಜಮೀನು ಗುರುತಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿರುವುದರಿಂದ ಬಡವರು ಜೀವಿಸುವುದು ಕಷ್ಟವಾಗಿದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರುಗಳಿಲ್ಲ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕ್ಷಣದ ವ್ಯವಸ್ಥೆ ಧೂಳಿಪಟವಾಗಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಆಳುವ ಸರ್ಕಾರಗಳು ಉಳ್ಳವರ ಪರವಾಗಿವೆ. ಹೋರಾಟದಿಂದ ಮಾತ್ರ ಹಕ್ಕುಗಳನ್ನು ಪಡೆದುಕೊಳ್ಳಬಹುದೆಂದು ಹೇಳಿದರು.
ಕಾಂ.ಬಿ.ಬಸವರಾಜಪ್ಪ, ಕಾಂ.ಬಿ.ಹೆಚ್.ಹನುಮಂತಪ್ಪ, ಕಾಂ.ಎಂ.ಬಿ.ಜಯದೇವಮೂರ್ತಿ, ಕಾಂ.ಈ.ಸತ್ಯಕೀರ್ತಿ, ಕಾಂ.ತಿಪ್ಪಮ್ಮ, ಕಾಂ.ಅಮೀನಾಭಿ, ಅಂಗನವಾಡಿಯ ಸಾವಿತ್ರಮ್ಮ ತಿಪ್ಪಮ್ಮ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.












