ಬೆಂಗಳೂರು : ದೈನಂದಿನ ಸಮತೋಲಿತ ಆಹಾರ ಶೈಲಿಯಲ್ಲಿ ಹಣ್ಣುಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ಜೀವಸತ್ವಗಳು, ಖನಿಜಗಳು, ನಾರಿನಂಶ ಹಾಗೂ ಸಸ್ಯಜನ್ಯ ಪೋಷಕಾಂಶಗಳು ಸಮಗ್ರ ಆರೋಗ್ಯಕ್ಕೆ ಸಹಕಾರಿಯಾಗಿವೆ. ಒಂದೊಂದು ಹಣ್ಣಿನಲ್ಲಿಯೂ ವಿಶಿಷ್ಟ ಪೋಷಕಾಂಶಗಳಿರುತ್ತವೆ; ಕೆಲವು ಉತ್ಕರ್ಷಣ ನಿರೋಧಕಗಳಿಂದ (ಆ್ಯಂಟಿಆಕ್ಸಿಡೆಂಟ್ಸ್) ಸಮೃದ್ಧವಾಗಿದ್ದರೆ, ಇನ್ನು ಕೆಲವು ಪೊಟ್ಯಾಸಿಯಮ್, ವಿಟಮಿನ್ ಸಿ ಅಥವಾ ಜೀರ್ಣಕ್ರಿಯೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವ ನಾರಿನಂಶವನ್ನು ಒದಗಿಸುತ್ತವೆ. ಋತುಮಾನಕ್ಕೆ ತಕ್ಕಂತೆ ವಿವಿಧ ಬಗೆಯ ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಸಂಪೂರ್ಣ ಪೋಷಕಾಂಶಗಳು ಲಭಿಸುತ್ತವೆ. ನಿಮ್ಮ ದೈನಂದಿನ ಆರೋಗ್ಯಕ್ಕೆ ಸಹಕಾರಿಯಾಗಬಲ್ಲ ಹತ್ತು ಪ್ರಮುಖ ಹಣ್ಣುಗಳ ವಿವರ ಇಲ್ಲಿದೆ.
ಬ್ಲೂಬೆರ್ರಿ
ಬ್ಲೂಬೆರ್ರಿಗಳಲ್ಲಿ ಆಂಥೋಸಯಾನಿನ್ ಎಂಬ ಸಸ್ಯಜನ್ಯ ಅಂಶವಿದ್ದು, ಇದು ಇವುಗಳ ದಟ್ಟ ನೀಲಿ ಬಣ್ಣಕ್ಕೆ ಕಾರಣವಾಗಿದೆ. ಈ ಆ್ಯಂಟಿಆಕ್ಸಿಡೆಂಟ್ಗಳು ಮೆದುಳಿನ ಜೀವಕೋಶಗಳನ್ನು ರಕ್ಷಿಸಲು, ನೆನಪಿನ ಶಕ್ತಿಯನ್ನು ಸುಧಾರಿಸಲು ಮತ್ತು ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕರಿಸುತ್ತವೆ ಎಂದು ಅಧ್ಯಯನಗಳು ತಿಳಿಸಿವೆ. ಇದಲ್ಲದೆ, ಇವುಗಳಲ್ಲಿ ದೇಹಕ್ಕೆ ಅಗತ್ಯವಿರುವ ನಾರಿನಂಶ ಹಾಗೂ ವಿಟಮಿನ್ ಸಿ ಕೂಡ ಲಭ್ಯವಿದೆ.
ಕಿತ್ತಳೆ
ಕಿತ್ತಳೆ ಹಣ್ಣು ವಿಟಮಿನ್ ಸಿ ಅಂಶಕ್ಕೆ ಹೆಸರುವಾಸಿಯಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿರಿಸಲು ನೆರವಾಗುವುದರ ಜೊತೆಗೆ ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಇದರಲ್ಲಿರುವ ಫೋಲೇಟ್ ಮತ್ತು ಇತರ ಸಸ್ಯ ಸಂಯುಕ್ತಗಳು ದೇಹದ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ.
ಬೆಣ್ಣೆಹಣ್ಣು (ಅವಕಾಡೊ)

ಇತರ ಹಣ್ಣುಗಳಿಗೆ ಹೋಲಿಸಿದರೆ ಬೆಣ್ಣೆಹಣ್ಣಿನಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಂಶ ಹೇರಳವಾಗಿರುತ್ತದೆ. ಇದರೊಂದಿಗೆ ನಾರಿನಂಶ, ಪೊಟ್ಯಾಸಿಯಮ್ ಮತ್ತು ಫೋಲೇಟ್ ಲಭ್ಯವಿದ್ದು, ಇವು ಹೃದಯದ ಆರೋಗ್ಯವನ್ನು ಕಾಪಾಡಲು ಹಾಗೂ ಮೆದುಳಿನ ಸಾಮಾನ್ಯ ಕಾರ್ಯಚಟುವಟಿಕೆಗೆ ಬೇಕಾದ ಪೋಷಕಾಂಶಗಳನ್ನು ಒದಗಿಸಲು ಉಪಯುಕ್ತವಾಗಿವೆ.
ದಾಳಿಂಬೆ
ದಾಳಿಂಬೆಯಲ್ಲಿ ಪ್ಯೂನಿಕಾಲಾಜಿನ್ ಸೇರಿದಂತೆ ಪ್ರಬಲ ಪಾಲಿಫಿನಾಲ್ಗಳಿವೆ, ಇವು ಅತ್ಯುತ್ತಮ ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿವೆ. ಇವು ಹೃದಯನಾಳದ ಆರೋಗ್ಯ ರಕ್ಷಣೆಗೆ ಸಹಕಾರಿ ಎಂದು ಸಂಶೋಧನೆಗಳು ಹೇಳುತ್ತವೆ. ಬೀಜಗಳ ಸಮೇತ ಸೇವಿಸುವ ದಾಳಿಂಬೆಯು ಉತ್ತಮ ಪ್ರಮಾಣದ ನಾರಿನಂಶವನ್ನೂ ನೀಡುತ್ತದೆ.

ಬಾಳೆಹಣ್ಣು
ಬಾಳೆಹಣ್ಣು ಪೊಟ್ಯಾಸಿಯಮ್ನ ಸುಲಭ ಮೂಲವಾಗಿದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಸ್ನಾಯು ಹಾಗೂ ನರಗಳ ಸಾಮಾನ್ಯ ಕಾರ್ಯವೈಖರಿಯನ್ನು ಕಾಪಾಡಲು ನೆರವಾಗುತ್ತದೆ. ಜೊತೆಗೆ ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುವ ಕಾರ್ಬೋಹೈಡ್ರೇಟ್ಸ್ ಮತ್ತು ನಾರಿನಂಶವನ್ನು ಒಳಗೊಂಡಿದೆ.
ಸೇಬು

ಸೇಬಿನಲ್ಲಿ ಪೆಕ್ಟಿನ್ ಎಂಬ ಕರಗುವ ನಾರಿನಂಶವಿದ್ದು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಸೇಬಿನ ಸಿಪ್ಪೆಯಲ್ಲಿ ಉಪಯುಕ್ತ ಸಸ್ಯ ಸಂಯುಕ್ತಗಳು ಇರುವುದರಿಂದ, ಹಣ್ಣನ್ನು ಚೆನ್ನಾಗಿ ತೊಳೆದು ಸಿಪ್ಪೆ ಸಮೇತ ಸೇವಿಸುವುದರಿಂದ ಹೆಚ್ಚಿನ ನಾರಿನಂಶ ದೊರೆಯುತ್ತದೆ.
ಪಪ್ಪಾಯಿ
ಪರಂಗಿಹಣ್ಣಿನಲ್ಲಿ ಪ್ರೋಟೀನ್ಗಳನ್ನು ಸುಲಭವಾಗಿ ಒಡೆಯಲು ನೆರವಾಗುವ ‘ಪಪೈನ್’ ಎಂಬ ನೈಸರ್ಗಿಕ ಕಿಣ್ವವಿದೆ. ಇದು ಜೀರ್ಣಕ್ರಿಯೆಗೆ ಪೂರಕವಾಗಿದ್ದು, ಜೊತೆಗೆ ನಾರಿನಂಶ ಮತ್ತು ವಿಟಮಿನ್ ಸಿ ಒದಗಿಸುವ ಮೂಲಕ ಸಮತೋಲಿತ ಆಹಾರದ ಪ್ರಮುಖ ಅಂಗವಾಗಿದೆ.

ಅನಾನಸ್
ಅನಾನಸ್ನಲ್ಲಿ ಪ್ರೋಟೀನ್ ಜೀರ್ಣಿಸಲು ಸಹಾಯ ಮಾಡುವ ‘ಬ್ರೊಮೆಲೈನ್’ ಕಿಣ್ವಗಳ ಸಮೂಹವಿದೆ. ಇದು ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ಅಂಶಗಳನ್ನು ಹೇರಳವಾಗಿ ಒಳಗೊಂಡಿದೆ. ತಾಜಾ ಅನಾನಸ್ ಅನ್ನು ಮಿತ ಪ್ರಮಾಣದಲ್ಲಿ ಆಹಾರದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ರುಚಿ ಹಾಗೂ ಪೋಷಣೆ ಎರಡೂ ಸಿಗುತ್ತವೆ.
ಕಿವಿ ಹಣ್ಣು
ಕಿವಿ ಹಣ್ಣು ವಿಟಮಿನ್ ಸಿ, ನಾರಿನಂಶ ಹಾಗೂ ಪ್ರೋಟೀನ್ ಜೀರ್ಣಕ್ರಿಯೆಗೆ ಸಹಕರಿಸುವ ‘ಆಕ್ಟಿನಿಡಿನ್’ ಎಂಬ ಕಿಣ್ವವನ್ನು ಹೊಂದಿದೆ. ಇದರಲ್ಲಿರುವ ಸಮೃದ್ಧ ನಾರಿನಂಶವು ಕರುಳಿನ ಚಲನೆಯನ್ನು ಸುಗಮಗೊಳಿಸಿ, ಜೀರ್ಣಾಂಗಗಳ ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ.
ಸ್ಟ್ರಾಬೆರಿ
ಸ್ಟ್ರಾಬೆರಿಗಳು ವಿಟಮಿನ್ ಸಿ ಅಂಶವನ್ನು ಒದಗಿಸುತ್ತವೆ, ಇದು ಚರ್ಮದ ಆರೋಗ್ಯಕ್ಕೆ ಬೇಕಾದ ಕಾಲಾಜೆನ್ ಉತ್ಪಾದನೆಗೆ ಮತ್ತು ರೋಗನಿರೋಧಕ ಶಕ್ತಿಗೆ ಅತ್ಯಗತ್ಯ. ಇದರಲ್ಲಿರುವ ಆಂಥೋಸಯಾನಿನ್ ಮತ್ತು ಇತರ ಆ್ಯಂಟಿಆಕ್ಸಿಡೆಂಟ್ಗಳು ಜೀವಕೋಶಗಳು ಹಾನಿಗೊಳಗಾಗದಂತೆ ರಕ್ಷಿಸಲು ಸಹಕರಿಸುತ್ತವೆ.












