Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : 2ಬಿ ಮೀಸಲಾತಿ ಮರುಸ್ಥಾಪಿಸದಿದ್ದರೆ ತೀವ್ರ ಹೋರಾಟ: ರಾಜ್ಯ ಸರ್ಕಾರಕ್ಕೆ ಮುಸ್ಲಿಂ ಮುಖಂಡರ ಎಚ್ಚರಿಕೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 11 : ಶಾಶ್ವತ ಹಿಂದುಳಿದ ವರ್ಗಗಳ ಹಾಗೂ ವಿವಿಧ ಆಯೋಗಗಳ ವೈಜ್ಞಾನಿಕ ಮತ್ತು ಸಾಮಾಜಿಕ ಪರಿಶೋಧನೆಯ ಮೂಲಕವೇ ಮುಸ್ಲಿಂ ಸಮುದಾಯವು ಹಿಂದುಳಿದಿದೆ ಎಂಬ ಕಾರಣಕ್ಕೆ ಈ ಮೀಸಲಾತಿ ಯನ್ನು ಕಲ್ಪಿಸಲಾಗಿತ್ತು. ಮುಸ್ಲಿಂ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2ಬಿ ಅಡಿ ನೀಡಿರುವ ಮೀಸಲಾತಿಯನ್ನು ರದ್ದುಪಡಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಅದನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಮುಸ್ಲಿಂ ಸಮುದಾಯದ ಮುಖಂಡರು ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟ ಸಮಿತಿ-ಕರ್ನಾಟಕ ಇದರ ವತಿಯಿಂದ ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2ಬಿ ಮುಸ್ಲಿಮರ ಮೀಸಲಾತಿ ಕುರಿತು ಮುಂದಿನ ಸವಾಲುಗಳ ಕುರಿತ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಚಿಂತಕರಾದ ಶಿವಸುಂದರ್ ವಿಷಯವನ್ನು ಮಂಡನೆ ಮಾಡಿ, ಮುಸ್ಲಿಮರಿಗೆ ನೀಡಿರುವ ಮೀಸಲಾತಿಯು ಧರ್ಮದ ಆಧಾರದ ಮೇಲಿರುವ ಧರ್ಮಾಧಾರಿತ ಮೀಸಲಾತಿಯಲ್ಲ. ಬದಲಿಗೆ, ಸಂವಿಧಾನ ನೀಡಿರುವ ಹಕ್ಕಿನಂತೆ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವಿಕೆಯನ್ನು ಆಧರಿಸಿ ಜಾರಿಗೊಳಿಸಲಾದ ಸೌಲಭ್ಯವಾಗಿದೆ. ಈ ಕುರಿತು ಕೇಳಿಬರುತ್ತಿರುವ ಅಪಪ್ರಚಾರಗಳು ಮತ್ತು ತಪ್ಪು ಮಾಹಿತಿಗಳು ಸತ್ಯಕ್ಕೆ ದೂರವಾಗಿವೆ ಮುಸ್ಲಿಮರಿಗೆ ನೀಡಿರುವ ಮೀಸಲಾತಿಯು ಯಾವುದೇ ಧರ್ಮಾಧಾರಿತವಾಗಿಲ್ಲದೆ, ಸಂಪೂರ್ಣವಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಸಂವಿಧಾನಾತ್ಮಕವಾಗಿ ನೀಡಲಾಗಿದೆ ಎಂದರು.

ಮೀಸಲಾತಿ ರದ್ದು ಮತ್ತು ಸುಪ್ರೀಂ ಕೋರ್ಟ್ ತೀರ್ಪು: ಮುಸ್ಲಿಂ ಸಮುದಾಯವು ಹಿಂದುಳಿದಿದೆ ಎಂದು ಅಧ್ಯಯನದ ಮೂಲಕ ಸಾಬೀತಾಗಿರುವುದರಿಂದ, ಅಂಥವರಿಗೆ ಮೀಸಲಾತಿಯನ್ನು ನಿರಾಕರಿಸಲು ಬರುವುದಿಲ್ಲ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‍ನ ವಿವಿಧ ಸಂವಿಧಾನಿಕ ಪೀಠಗಳು ತೀರ್ಪು ನೀಡಿವೆ, 2023ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು 2ಬಿ ಮೀಸಲಾತಿಯನ್ನು ಧರ್ಮಾಧಾರಿತ ಹಾಗೂ ಸಂವಿಧಾನ ಬಾಹಿರವೆಂದು ತಿಳಿಸಿ ರದ್ದುಗೊಳಿಸಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಲಾಗಿದ್ದು, ಮುಸ್ಲಿಂ ಮೀಸಲಾತಿಯನ್ನು ರದ್ದು ಮಾಡುವುದಿಲ್ಲ ಮತ್ತು ಮುಂದಿನ ತೀರ್ಪಿನ ತನಕ ಹಳೆಯ ಮೀಸಲಾತಿಯೇ ಮುಂದುವರಿಯಲಿದೆ ಎಂದು ಸುಪ್ರೀಂ ಕೋರ್ಟ್‍ಗೆ ಸರ್ಕಾರ ಮುಖಪತ್ರ ಸಲ್ಲಿಸಿತ್ತು ಎಂದು ವಿವರಿಸಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೂಡಲೇ 2ಬಿ ಮೀಸಲಾತಿಯನ್ನು ಮರುಸ್ಥಾಪನೆ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಮತ್ತು ಪ್ರಮಾಣ ಮಾಡುವ ಸಂದರ್ಭದಲ್ಲಿ ಭರವಸೆ ನೀಡಿತ್ತಾದರೂ, ಇದುವರೆಗೂ ಆ ಭರವಸೆಯನ್ನು ಈಡೇರಿಸಿಲ್ಲ ಎಂದು ಟೀಕಿಸಿದರು.

2ಬಿ ಮೀಸಲಾತಿಯ ಮರುಸ್ಥಾಪನೆಗೆ ಒತ್ತಾಯಿಸಿ ಹಾಗೂ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ತೀರ್ಮಾನ ಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಜತೆಗೆ, ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ತಂದಿರುವ ಕಾಯ್ದೆಗಳನ್ನು ಕೂಡ ಕಾಂಗ್ರೆಸ್ ಸರ್ಕಾರ ರದ್ದುಪಡಿಸಬೇಕು ಎಂದು ಒತ್ತಾಯಿಸಿ, ಸರ್ಕಾರವು ನೀಡಿದ ಭರವಸೆಯಂತೆ 2ಬಿ ಮೀಸಲಾತಿಯನ್ನು ತಕ್ಷಣವೇ ಮರುಸ್ಥಾಪಿಸಬೇಕು. ತಪ್ಪಿದ್ದಲ್ಲಿ ಮುಸ್ಲಿಂ ಸಮು ದಾಯದ ವತಿಯಿಂದ ತೀವ್ರ ರಾಜಕೀಯ ಪಾಠ ಕಲಿಸಬೇಕಾಗುತ್ತದೆ ಎಚ್ಚರಿಕೆಯ ಸಂದೇಶವನ್ನು ನೀಡಲಾ ಯಿತು.

ಹಿಂದೆ ವಾಜಪೇಯಿ ಸರ್ಕಾರ, ದೇವೇಗೌಡರ ಸರ್ಕಾರ ಹಾಗೂ ವಿವಿಧ ಪಕ್ಷಗಳು ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಮುಸ್ಲಿಂ ಮೀಸಲಾತಿಯನ್ನು ಯಾರೂ ಕೂಡ ವಿರೋಧಿಸಿರಲಿಲ್ಲ ಅಥವಾ ರದ್ದುಪಡಿಸುವ ಕುರಿತು ಮಾತನಾಡಿರಲಿಲ್ಲ ಎಂದು ತಿಳಿಸಲಾಯಿತು. ಆಂಧ್ರಪ್ರದೇಶದ ಮೀಸಲಾತಿ ಪ್ರಕರಣ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳುಆಂಧ್ರಪ್ರದೇಶದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು ಹೈಕೋರ್ಟ್ ರದ್ದುಪಡಿಸಿದ್ದರೂ, ನಂತರ 2010ರಲ್ಲಿ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಾಗಿದ್ದ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ತ್ರಿಸದಸ್ಯ ಪೀಠವು ಆಂಧ್ರಪ್ರದೇಶದ ಮುಸ್ಲಿಂ ಮೀಸಲಾತಿಯನ್ನು ಎತ್ತಿಹಿಡಿದು, ಅದನ್ನು ಅಮಾನ್ಯಗೊಳಿಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಟಿಪ್ಪು ಕ್ರಾಂತಿ ಸೇನೆ, ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷರಾದ ಡಾ.ದಸ್ತಗೀರ ಮುಲ್ಲಾ ಮಾತನಾಡಿ, ಮುಸ್ಲಿಂ ಸಮುದಾಯವು ಎದುರಿಸುತ್ತಿರುವ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯಾವುದೇ ಸರ್ಕಾರದ ಭರವಸೆಗಳನ್ನು ಕಾಯದೆ, ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗಾಗಿ ಸಮುದಾಯದ ಎಲ್ಲ ವರ್ಗದವರು ಒಗ್ಗಟ್ಟಿನಿಂದ ಜಾಗೃತರಾಗಿ ಹೋರಾಟ ನಡೆಸುವುದು ಅನಿವಾರ್ಯ ಹಾಗೂ ಅತ್ಯವಶ್ಯಕವಾಗಿದೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದ್ದು, ಮೀಸಲಾತಿ ಕೇವಲ ಕಾಗದದಲ್ಲೇ ಉಳಿದಿದೆ ಯಾವುದೇ ಪಕ್ಷದವರಾಗಲಿ, ಸಮುದಾಯದ ಮೂಲಭೂತ ಹಕ್ಕುಗಳು ಹಾಗೂ ಸಂವಿಧಾನಾತ್ಮಕ ಸೌಲಭ್ಯಗಳನ್ನು ರಕ್ಷಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದರು.

ರಾಜ್ಯದಲ್ಲಿ ಉರ್ದು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಇತರ ಶಾಲೆಗಳಂತೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಉರ್ದು ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಕಾನೂನುಗಳಲ್ಲಿ ಲೋಪಗಳಿದ್ದರೆ ಅಥವಾ ದೌರ್ಜನ್ಯಗಳು ನಡೆದರೆ ಅವುಗಳನ್ನು ಸರಿಪಡಿಸಬೇಕಾದದ್ದು ಆಳುವ ಸರ್ಕಾರಗಳ ಕರ್ತವ್ಯವಾಗಿದೆ. ಆದರೆ ಇಂದಿನ ಸರ್ಕಾರಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳು ಮುಸ್ಲಿಂ ಸಮುದಾಯದ ನಿಜವಾದ ಅಭಿವೃದ್ಧಿಗೆ ಮುಂದಾಗುತ್ತಿಲ್ಲ. ಮುಸ್ಲಿಮರು ಕೇವಲ ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಳಕೆಯಾಗುತ್ತಿದ್ದಾರೆ ವಿನಃ ಅವರಿಗೆ ಸಂವಿಧಾನಾತ್ಮಕ ಹಕ್ಕುಗಳು ದೊರೆಯುತ್ತಿಲ್ಲ ಸ್ವಾತಂತ್ರ್ಯ ಪೂರ್ವದ ಹಾಗೂ ನಂತರದ ವಿವಿಧ ಆಯೋಗಗಳ ವರದಿಗಳ ಪ್ರಕಾರ ಮುಸ್ಲಿಮರು ಅತ್ಯಂತ ಹಿಂದುಳಿದಿದ್ದಾರೆ. ಅಲ್ಪಸಂಖ್ಯಾತರಿಗೆ ಸಿಗಬೇಕಾದ ಶೇಕಡಾ 33ರಷ್ಟು ಮೀಸಲಾತಿ ಹಾಗೂ ನ್ಯಾಯಯುತ ಹಕ್ಕುಗಳು ಮರೀಚಿಕೆಯಾಗಿವೆ ಕೇವಲ ನಾಯಕರನ್ನು ನಂಬಿಕೊಂಡು ಕುಳಿತುಕೊಳ್ಳದೆ, ಸಮುದಾಯದ ಯುವಕರು, ಬುದ್ಧಿಜೀವಿಗಳು ಹಾಗೂ ಸಂಘಟನೆಗಳು ಒಟ್ಟಾಗಿ ನಿಂತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟವನ್ನು ರೂಪಿಸಬೇಕು ಎಂದು ಕರೆ ನೀಡಿದರು.

ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟ ಸಮಿತಿಯ ಮುಖಂಡರಾದ ಟಿ.ಶಫೀವುಲ್ಲಾ, ಟಿಪ್ಪು ಕ್ರಾಂತಿ ಸೇನೆ, ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷರಾದ ಡಾ.ದಸ್ತಗೀರ ಮುಲ್ಲಾ, ಹಜರತ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ(ರಿ.)ಯ ಅಧ್ಯಕ್ಷರಾದ ಖಾಸಿಂಅಲಿ, ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಇಸ್ಮಾಯಿಲ್, ಅಜೀಜ್ ಭಂಡಾರಿ, ಬಡಗಿ ಕಾರ್ಮೀಕರ ಕ್ಷೇಮಾಭೀವೃದ್ದಿ ಸಂಘದ ಜಾಕಿರ್ ಹುಸೇನ್ ಭಾಗವಹಿಸಿದ್ದು, ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟ ಸಮಿತಿಯ ಮುಖಂಡರಾದ ಎ.ಸಾದಿಕ್‍ವುಲ್ಲಾ ಅಧ್ಯಕ್ಷತೆಯನ್ನು ವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now