ಚಿತ್ರದುರ್ಗ. ನ.11: ಕಷ್ಟದ ಸಮಯದಲ್ಲಿ ಧೈರ್ಯ ತೋರಿಸಿ ಚಿತ್ರದುರ್ಗ ಕೋಟೆ ರಕ್ಷಿಸಿದ ವೀರ ವನಿತೆ ಒನಕೆ ಓಬವ್ವ ಪ್ರತಿಯೊಬ್ಬ ಮಹಿಳೆಗೂ ಧೈರ್ಯ ಮತ್ತು ಆತ್ಮವಿಶ್ವಾಸದ ಸ್ಫೂರ್ತಿಯಾಗಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್ಪೀರ್ ತಿಳಿಸಿದರು.
ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ‘ವೀರ ವನಿತೆ ಒನಕೆ ಓಬವ್ವ ಜಯಂತಿ’ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರದುರ್ಗದ ಇತಿಹಾಸ ಮತ್ತು ಕಲ್ಲಿನ ಕೋಟೆಯ ಪ್ರಸ್ತಾಪ ಬಂದಾಗ ನಮಗೆ ಮದಕರಿ ನಾಯಕರು ಹಾಗೂ ಒನಕೆ ಓಬವ್ವ ನೆನಪಾಗುತ್ತಾರೆ. ಹೈದರಾಲಿ ಸೈನಿಕರು ಕಳ್ಳಬಾಗಿಲ ಮೂಲಕ ಕೋಟೆಯನ್ನು ನುಗ್ಗಲು ಯತ್ನಿಸಿದಾಗ, ಓಬವ್ವ ಪ್ರದರ್ಶಿಸಿದ ಅಪ್ರತಿಮ ಧೈರ್ಯ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯ ಎಂದರು.
ಕುಟುಂಬ, ಊರು, ದೇಶಕ್ಕೆ ಕಷ್ಟ ಬಂದಾಗ ನಾವೆಲ್ಲರೂ ಎದೆಗುಂದದೆ ನಿಲ್ಲಬೇಕು ಎಂಬ ಸಂದೇಶ ಓಬವ್ವ ನೀಡಿದ್ದಾರೆ ಎಂದು ತಿಳಿಸಿದ ಅವರು, ಶಿಕ್ಷಣ, ಉದ್ಯೋಗ, ಮಿಲಿಟರಿ, ಪೈಲಟ್ ಕ್ಷೇತ್ರಗಳಲ್ಲದೆ ಸ್ವಂತ ಉದ್ಯೋಗ ನಡೆಸಿ ಇತರರಿಗೆ ಕೆಲಸ ನೀಡುವ ಮಟ್ಟಕ್ಕೆ ಇಂದು ಮಹಿಳೆಯರು ಬೆಳೆದಿದ್ದಾರೆ. ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆದು ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷವ್ಯಕ್ತಪಡಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಾತನಾಡಿ, ವೀರ ವನಿತೆ ಒನಕೆ ಓಬವ್ವ ಅವರ ಧೈರ್ಯ, ಸಮಯಪ್ರಜ್ಞೆ ಮತ್ತು ತ್ಯಾಗ ಪ್ರತಿಯೊಬ್ಬ ನಾಡಿನ ಮಹಿಳೆಗೂ ಪ್ರೇರಣೆ ಎಂದು ಹೇಳಿದರು.

ಆಹಾರ ಸೇವಿಸುತ್ತಿದ್ದ ಗಂಡನಿಗೆ ತೊಂದರೆಯಾಗಬಾರದು ಎಂಬ ಕಾಳಜಿಯಿಂದ, ಕೋಟೆಯ ಕಿಂಡಿಯ ಮೂಲಕ ನುಗ್ಗುತ್ತಿದ್ದ ಹೈದರಾಲಿ ಸೈನಿಕರನ್ನು ತಾನೇ ಧೈರ್ಯದಿಂದ ಒನಕೆಯಿಂದ ಹೊಡೆದು ಉರುಳಿಸಿದ ಓಬವ್ವ ಅವರ ಸಾಹಸ ಇತಿಹಾಸದ ಪುಟಗಳಲ್ಲಿ ಅಮರವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ವೀರ ವನಿತೆ ಒನಕೆ ಓಬವ್ವ ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ. ಅವರಲ್ಲಿ ಸದಾ ಜಾಗೃತವಾಗಿದ್ದ ಶೌರ್ಯ, ಪರಾಕ್ರಮ, ಸಮಯಪ್ರಜ್ಞೆ ಹಾಗೂ ಸ್ವಾಮಿನಿಷ್ಠೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ಓಬವ್ವ ಅವರು ನೆಲಮೂಲ ಸಂಸ್ಕøತಿಯ ಸಾಮಾನ್ಯ ಮಹಿಳೆಯಾಗಿದ್ದರೂ ತಮ್ಮಲ್ಲಿದ್ದ ಅಪಾರ ಸ್ವಾಮಿನಿಷ್ಠೆ ಹಾಗೂ ಸಾಹಸ ಮನೋಭಾವದಿಂದ ಇತಿಹಾಸದ ಪುಟಗಳಲ್ಲಿ ಅಮರರಾಗಿದ್ದಾರೆ. ಇಂದಿನ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಅವರ ಧೈರ್ಯ ಹಾಗೂ ದಿಟ್ಟ ನಿರ್ಧಾರ ತಳೆಯುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಇಂದಿನ ದಿನಗಳಲ್ಲಿ ಮೊಬೈಲ್, ಫೇಸ್ಬುಕ್, ವಾಟ್ಸಾಪ್ಗಳಂತಹ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದಾಗಿ ಪುಸ್ತಕ ಓದುವ ಸಂಸ್ಕøತಿ ದೂರವಾಗುತ್ತಿದೆ. ಪ್ರತಿಯೊಬ್ಬರೂ ಕಣ್ಣಿಗೆ ಕಾಣುವ ಕ್ಷಣಿಕ ಮನರಂಜನೆ ಹಾಗೂ ಮಾಯಾಲೋಕದ ಹಿಂದೆ ಬೀಳುತ್ತಿದ್ದಾರೆ. ತಾಯಂದಿರು ಜೀಜಾಬಾಯಿಯಂತೆ ತಮ್ಮ ಮಕ್ಕಳಿಗೆ ಮಹಾ ಪುರುಷರ ಹಾಗೂ ವೀರ ವನಿತೆಯರ ಇತಿಹಾಸ ತಿಳಿಸಿಕೊಟ್ಟು, ಅವರನ್ನು ನಾಡಿನ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಮಾತನಾಡಿ, ಸ್ವಾಮಿನಿಷ್ಠೆ, ಧೈರ್ಯ, ಸಾಹಸ ಮತ್ತು ಅಪ್ರತಿಮ ಶೌರ್ಯದ ಪ್ರತೀಕ ಒನಕೆ ಓಬವ್ವ. ಒನಕೆ ಓಬವ್ವ ಅವರು ತಮ್ಮ ಕೈಯಿಂದ ಒನಕೆಯ ಮುಖಾಂತರ ಶತ್ರು ಸೈನ್ಯ ಎದುರಿಸಿದರು. ಅವರ ಧೈರ್ಯ, ಸಾಹಸ ಮತ್ತು ಸ್ವಾಮಿನಿಷ್ಠೆ ಇಡೀ ಜಗತ್ತಿಗೆ ಮಾರ್ಗದರ್ಶನವಾಗಿದೆ. ಇಂದಿನ ಮಹಿಳೆಯರು ಅವರ ಧೈರ್ಯ, ಸಾಹಸವನ್ನು ಮೈಗೂಡಿಸಿಕೊಂಡು ಹೆಚ್ಚು ಹೆಚ್ಚು ಉನ್ನತೀಕರಣದ ಕಡೆಗೆ ಹೋಗಬೇಕು ಹಾಗೂ ಧೈರ್ಯ ಹೊಂದಬೇಕು ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ ಮಾತನಾಡಿ, ವೀರ ವನಿತೆ ಒನಕೆ ಓಬವ್ವ ಅವರು ಯಾವುದೇ ಜಾತಿಗೆ ಸೀಮಿತವಾದ ನಾಯಕಿಯಲ್ಲ. ಅವರ ತ್ಯಾಗ ಮತ್ತು ಸಮಯಪ್ರಜ್ಞೆ ಇಡೀ ನಾಡಿಗೆ ಮಾದರಿ. ಒನಕೆ ಓಬವ್ವ ಅವರು ಸ್ವಾರ್ಥಕ್ಕಾಗಿ, ಯಾವುದೇ ಅಧಿಕಾರದ ಆಸೆಗೆ ಹೋರಾಟ ಮಾಡಿದವರಲ್ಲ. ಕೋಟೆ ಹಾಗೂ ನಾಡಿಗೆ ಆಪತ್ತು ಬಂದಾಗ, ಯಾವುದೇ ಶಸ್ತ್ರಾಭ್ಯಾಸವಿಲ್ಲದಿದ್ದರೂ ಕೇವಲ ಸಮಯಪ್ರಜ್ಞೆ ಮತ್ತು ದೇಶಭಕ್ತಿಯಿಂದ ಒನಕೆಯನ್ನು ಹಿಡಿದು ವೈರಿಗಳನ್ನು ಸಂಹರಿಸಿ ಕೋಟೆ ರಕ್ಷಿಸಿದ ಮಹಾಮಾತೆ ಎಂದು ಬಣ್ಣಿಸಿದರು.
ಹಿರಿಯೂರಿನ ಡಾ.ನವೀನ್ ಮಸ್ಕಲ್ ಅವರು ವೀರ ವನಿತೆ ಒನಕೆ ಓಬವ್ವ ಕುರಿತು ಉಪನ್ಯಾಸ ನೀಡಿದರು.

ಜಯಂತಿ ಅಂಗವಾಗಿ ಐತಿಹಾಸಿಕ ಕೋಟೆ ಮುಂಭಾಗದಿಂದ ಆನೆಬಾಗಿಲು, ಗಾಂಧಿವೃತ್ತ, ಓಬವ್ವ ವೃತ್ತ, ಮದಕರಿ ವೃತ್ತ ಮುಖಾಂತರ ತರಾಸು ರಂಗಮಂದಿರದವರೆಗೆ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಂಸ್ಥಾನ ಗುರುಪೀಠ ಟ್ರಸ್ಟ್ನ ಬಸವ ನಾಗೀದೇವ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ತಹಶೀಲ್ದಾರ್ ಬೀಬೀಫಾತಿಮಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಮುಖಂಡರಾದ ಎಸ್.ವಿ.ಗುರುಮೂರ್ತಿ, ವಿ.ಸೋಮಶೇಖರ್, ಹೆಚ್.ಶೇಷಪ್ಪ, ಎನ್.ಬಿ.ಭಾರ್ಗವಿ ದ್ರಾವಿಡ್, ಎಸ್.ಎನ್.ರವಿಕುಮಾರ್ ಸೇರಿದಂತೆ ಮತ್ತಿತರರು ಇದ್ದರು.









