ಮೈಸೂರು: ಮಕ್ಕಳ ಭವಿಷ್ಯ ಉಜ್ವಲವಾಗಬೇಕು ಅಂದ್ರೆ ಅಲ್ಲಿ ಶಿಕ್ಷಣ ಬಹಳ ಮುಖ್ಯ. ಉತ್ತಮವಾದ ಶಿಕ್ಷಣ ಕೊಟ್ಟರೆ ಭವಿಷ್ಯವೂ ಉತ್ತಮವಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಶಿಕ್ಷಣಕ್ಕೆ ಹೆಚ್ವಿನ ಮಹತ್ವವನ್ನು ನೀಡಿದವರೆ. ಆದರೆ ಅವರ ತವರು ಜಿಲ್ಲೆಯಲ್ಲಿಯೇ ಶಿಕ್ಷಣದ ಕೊರತೆಯನ್ನ ಮಕ್ಕಳು ಎದುರಿಸುವಂತಾಗಿದೆ. ಅದಕ್ಕೆ ಕಾರಣ ಶಾಲೆಯಲ್ಲಿ ಶಿಕ್ಷಕರು ಇಲ್ಲದೆ ಇರುವುದು. ಜೂನ್, ಜುಲೈ ತಿಂಗಳಲ್ಲಿ ಶಿಕ್ಷಣ ಚಟುವಟಿಕೆಗಳು ಏರುಗತಿಯಲ್ಲಿ ಇರುತ್ತವೆ. ಈಗಷ್ಟೇ ಬೇಸಿಗೆ ರಜೆಯನ್ನ ಮುಗಿಸಿಕೊಂಡು ಮಕ್ಕಳು ಶಾಲೆಯತ್ತ ಬಂದು, ಪಾಠದತ್ತ ಗಮನ ಹರಿಸುತ್ತಿರುತ್ತವೆ. ಆದರೆ ಈ ಸಮಯದಲ್ಲಿಯೇ ಶಿಕ್ಷಕರಿಲ್ಲದ ಸಮಸ್ಯೆ ಕಾಡುತ್ತಿದೆ.
ವರುಣಾದ ಕೊಣನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಈ ಸಮಸ್ಯೆ ಕಾಡುತ್ತಿದೆ. ಒಂದು ಕಡೆ ಮೊದಲೇ ಶಿಕ್ಷಕರ ಕೊರತೆ, ಮತ್ತೊಂದು ಕಡೆ ಆಂಗ್ಲ ಮಾಧ್ಯಮ ಶಿಕ್ಷಕರನ್ನು ವರ್ಗಾವಣೆ ಮಾಡ್ತಾ ಇದ್ದಾರೆ. ಶಾಲೆ ಶುರುವಾಗಿ ಇಷ್ಟು ದಿನವಾದರೂ ಶಿಕ್ಷಕರನ್ನು ನೇಮಕ ಮಾಡಿಲ್ಲ, ಇರುವ ಶಿಕ್ಷಕರನ್ನು ವರ್ಗಾವಣೆ ಮಾಡ್ತಾ ಇದ್ದಾರೆ ಎಂದು ಮಕ್ಕಳು ರೊಚ್ಚಿಗೆದ್ದಿದ್ದಾರೆ. ಹೀಗಾಗಿ ತರಗತಿಯನ್ನು ಬಹಿಷ್ಕರಿಸಿ, ತಮ್ಮ ಪೋಷಕರೊಂದಿಗೆ ಪ್ರತಿಭಟನೆಗೆ ಇಳಿದಿದ್ದಾರೆ.

ಈ ಪ್ರತಿಭಟನೆಗೆ ಶಾಲಾಭಿವೃದ್ಧಿಯ ಸಮಿತಿಯ ಸದಸ್ಯರು ಕೂಡ ಸಾಥ್ ನೀಡಿದ್ದಾರೆ. ಹೆಚ್ಚುವರಿ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯ ಹಾಕಿದ್ದಾರೆ ಪೋಷಕರು. ಶಿಕ್ಷಣ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿದ್ದಾರೆ. 120 ಮಕ್ಕಳು ಇರುವ ಶಾಲೆಗೆ ಇರುವುದು ಮೂವರೇ ಶಿಕ್ಷಕರು. ಅಷ್ಟು ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುವುದಾದರೂ ಹೇಗೆ..? ಮಕ್ಕಳ ಭವಿಷ್ಯವಾದರೂ ಸರಿಯಾಗುವುದು ಹೇಗೆ ಎಂಬ ಪ್ರಶ್ನೆ ಪೋಷಕರದ್ದು. ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಈ ಸಮಸ್ಯೆಯನ್ನ ಬಗೆಹರಿಸುತ್ತಾರಾ ನೋಡಬೇಕಿದೆ.















