Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ: ಶಿಕ್ಷಣ ಇಲಾಖೆ ಸೂಚನೆ

---Advertisement---

ಬೆಂಗಳೂರು.ಆಗಸ್ಟ್.3: ರಾಜ್ಯದ ಶಾಲಾ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ಮತ್ತು ಅವರ ಕಲಿಕಾ ಪ್ರಗತಿಯನ್ನು ಕಣ್ಣಾರೆ ವೀಕ್ಷಿಸಲು ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ಮೌಲ್ಯಾಂಕನ ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸುವಂತೆ ಶಾಲಾ ಶಿಕ್ಷಣ ಆಯುಕ್ತರು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳ ಬುನಾದಿ ಕಲಿಕೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಕಲಿಕಾ ಚೇತರಿಕೆ, ಕಲಿಕಾ ಬಲವರ್ಧನೆ ಮತ್ತು ಸೇತುಬಂಧ ಕಾರ್ಯಕ್ರಮಗಳ ಅಡಿಯಲ್ಲಿ ಈ ಪರೀಕ್ಷೆಗಳನ್ನು ಆಯೋಜಿಸಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇಲಾಖೆ ನೀಡಿರುವ ಮಾಸಿಕ ಪಾಠ ಯೋಜನೆ ಹಾಗೂ ಚಟುವಟಿಕೆಗಳ ವೇಳಾಪಟ್ಟಿಗೆ ಅನುಗುಣವಾಗಿ ಶಿಕ್ಷಕರು ಪಾಠವಾರು ಮೌಲ್ಯಾಂಕನ ಪ್ರಕ್ರಿಯೆ ನಡೆಸಬೇಕಿದೆ.

ಪ್ರಾಥಮಿಕ ಹಂತದ ಅಂದರೆ 1 ರಿಂದ 5ನೇ ತರಗತಿಯ ಪರೀಕ್ಷೆಗಳನ್ನು ಒಟ್ಟು 15 ಅಂಕಗಳಿಗೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 10 ಅಂಕಗಳ ಲಿಖಿತ ಪರೀಕ್ಷೆ ಹಾಗೂ 5 ಅಂಕಗಳ ಮೌಖಿಕ ಪರೀಕ್ಷೆಗಳು ಇರಲಿವೆ. ಪ್ರಶ್ನೆಪತ್ರಿಕೆಯು ವಸ್ತುನಿಷ್ಠ ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರಲಿದೆ.

ಇನ್ನು 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕಾ ಫಲಗಳನ್ನು ಆಧರಿಸಿ 20 ಅಂಕಗಳ ವಸ್ತುನಿಷ್ಠ ಹಾಗೂ ವಿವರಣಾತ್ಮಕ ಪ್ರಶ್ನೆಗಳನ್ನೊಳಗೊಂಡ ಪರೀಕ್ಷೆ ನಡೆಸಲಾಗುತ್ತದೆ.

ಪ್ರೌಢಶಾಲಾ ಹಂತದ 8 ರಿಂದ 10ನೇ ತರಗತಿ ಮಕ್ಕಳಿಗೆ 20 ಅಂಕಗಳ ಬಹುಆಯ್ಕೆ (MCQ) ಮತ್ತು ವಿವರಣಾತ್ಮಕ ಮಾದರಿಯ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸಲಾಗುವುದು. ಈ ಹಂತದ ಮೌಲ್ಯಾಂಕನ ಫಲಿತಾಂಶವನ್ನು ಶಿಕ್ಷಕರು ಕಡ್ಡಾಯವಾಗಿ ಸ್ಯಾಟ್ಸ್ (SATS) ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.

ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಾಂಕನದ ವಿಶ್ಲೇಷಣಾ ವರದಿ ಆಧರಿಸಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಬೆಂಬಲ ನೀಡಲು ಸೂಚಿಸಲಾಗಿದೆ. ಈ ವರ್ಷದಿಂದ ಹೊಸದಾಗಿ ಜಾರಿಗೆ ತಂದಿರುವ ‘ಸಮಗ್ರ ಪ್ರಗತಿಪತ್ರ’ವನ್ನು ಸಿದ್ಧಪಡಿಸಿ, ಶಾಲಾ ಶೈಕ್ಷಣಿಕ ದಿನಾಚರಣೆ ಹಾಗೂ ಪೋಷಕರ ಸಭೆಗಳಲ್ಲಿ ಪ್ರದರ್ಶಿಸುವ ಮೂಲಕ ಮಗುವಿನ ಕಲಿಕಾ ಪ್ರಗತಿಯನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಲು ಶಿಕ್ಷಣ ಇಲಾಖೆ ಮಾರ್ಗದರ್ಶನ ನೀಡಿದೆ.

Join WhatsApp

Join Now

Join Telegram

Join Now