ಧಾರವಾಡ; ಇಂದು ಧಾರವಾಡದಿಂದ ಮಹಾದಾಯಿ ಹೋರಾಟಕ್ಕೆ ರೈತರು ಚಾಲನೆ ನೀಡಿದ್ದಾರೆ. ಕಡಾಪ ಮೈದಾನದಿಂದ ರ್ಯಾಲಿ ಆರಂಭವಾಗಿದೆ. ನಗರದ ಪ್ರಮುಖ ಬೀದಿಗಳಲ್ಲಿ ರೈತರ ರ್ಯಾಲಿ ಮೆರವಣಿಗೆ ಹೊರಟು, ಜಿಲ್ಲಾಧಿಕಾರಿ ಕಚೇರಿಯನ್ನ ತಲುಪಿದೆ. ಉತ್ತರ ಕರ್ನಾಟಕದ ಹಲವು ಭಾಗದ ರೈತರು, ಹೋರಾಟಗಾರರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲ ಜ್ಯೂಬಿಲಿ ಸರ್ಕಲ್ ಸಂಪೂರ್ಣ ಬಂದ್ ಆಗಿದೆ.
ಜೊತೆಗೆ ಜ್ಯುಬಿಲಿ ಸರ್ಕಲ್ ನಲ್ಲಿ ವಾಹನ ಸಂಚಾರವನ್ನ ತಡೆಯಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಹೋರಾಟ ನಿನ್ನೆ ಮೊನ್ನೆಯದಲ್ಲ. ಸುಮಾರು ನಾಲ್ಕು ದಶಕಗಳಿಂದ ನಡೆಯುತ್ತಿದೆ. ಕಳಸಾ ಬಂಡೂರಿ ಯೋಜನೆ ನದಿ ನೀರು ಗೋವಾ ಗಡಿಯಿಂದ ಕರ್ನಾಟಕಕ್ಕೆ ತರಬೇಕು. ಈ ಸಂಬಂಧ ನಾಲ್ಕು ದಶಕಗಳಿಂದಾನೂ ಹೋರಾಟ ನಡೆಯುತ್ತಿದೆ. ಆದರೆ ಇವತ್ತಿನ ತನಕ ಒಂದೇ ಒಂದು ಹನಿ ನೀರು ಮಾತ್ರ ಬಂದಿಲ್ಲ.

ಮಹಾದಾಯಿ ಕಳಸ ಬಂಡೂರು ಹೋರಾಟ ದಶಕಗಳಿಂದ ನಡೆಯುತ್ತಿದ್ದರೂ 2015ರ ಜುಲೈ 15ರಿಂದ ತೀವ್ರಗೊಂಡಿತ್ತು. ಬಂಡಾಯ ಭೂಮಿ ಎನಿಸಿದ ನರಗುಂದದಲ್ಲಿ ಅಂದು ಆರಂಭಗೊಂಡ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಈ ನಿರಂತರ ಆಂದೋಲನದಲ್ಲಿ ಭಾಗವಹಿಸಿದವರು ಪೊಲೀಸರ ಲಾಠಿ ಏಟು ಸಹಿತ ತಿಂದಿದ್ದಾರೆ. ಮನೆ ಕಡೆಯ ಕೆಲಸ ಕಾರ್ಯ, ಕಾರ್ಯಕ್ರಮಗಳನ್ನು ಮರೆತು ಹೋರಾಟದಲ್ಲಿ ಭಾಗವಹಿಸಿದ್ದರು.ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ನೀರು ಹಂಚಿಕೆ ವಿವಾದಗನ್ನು ಪರಿಹರಿಸಲು ರಾಜ್ಯ ನದಿ ನೀರು ವಿವಾದ ಕಾಯ್ದೆ 1956ರ ಸೆಕ್ಷನ್ 4ರ ಅನ್ವಯ ಮಹದಾಯಿ ನ್ಯಾಯಮಂಡಳಿ ಸ್ಥಾಪಿಸಲಾಗಿದೆ. ನ್ಯಾಯಮಂಡಳಿಯು 2018ರ ಅಗಸ್ಟ್ನಲ್ಲಿ ವರದಿ ಸಲ್ಲಿಸಿದೆ. ಈ ವರದಿಯ ಬಗ್ಗೆ 2020ರ ಫೆಬ್ರವರಿ 20 ರಂದು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಮಹದಾಯಿ ನೀರು ಇನ್ನೂವರೆಗೂ ಬಂದಿಲ್ಲ.



















