ದೆಹಲಿ. ಆಗಸ್ಟ್.5 : ಸೈಬರ್ ವಂಚನೆ ಹಾಗೂ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನಗಳನ್ನು ನೀಡಿದೆ. ಈ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ನಾಲ್ಕು ವಾರಗಳ ಒಳಗಾಗಿ ಎಲ್ಲಾ ಬ್ಯಾಂಕುಗಳಿಗೆ ಅನ್ವಯವಾಗುವಂತೆ ಏಕರೂಪದ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (SOP) ಸಿದ್ಧಪಡಿಸಿ ಹೊರಡಿಸುವಂತೆ ರಿಸರ್ವ್ ಬ್ಯಾಂಕ್‌ಗೆ (RBI) ಆದೇಶಿಸಿದೆ.
ಮ್ಯೂಲ್ ಖಾತೆಗಳು, ಅಕ್ರಮ ಹಣ ವರ್ಗಾವಣೆ ಮತ್ತು ಸೈಬರ್ ವಂಚನೆಗೆ ಒಳಗಾದ ಬ್ಯಾಂಕ್ ಖಾತೆಗಳನ್ನು ನಿಯಂತ್ರಿಸುವುದು ಈ SOPಯ ಮುಖ್ಯ ಉದ್ದೇಶವಾಗಿದೆ. ಯಾವುದೇ ಬ್ಯಾಂಕ್ ಖಾತೆಯು ಸೈಬರ್ ವಂಚನೆಗೆ ಒಳಗಾಗಿರುವುದು ಕಂಡುಬಂದ ತಕ್ಷಣ, ಆ ಖಾತೆಯಿಂದ ಹಣ ಹಿಂಪಡೆಯುವ ಅಥವಾ ವರ್ಗಾಯಿಸುವ ಡೆಬಿಟ್ ವಹಿವಾಟುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಕೋರ್ಟ್ ಹೇಳಿದೆ. ಇದರಿಂದ ಸಂತ್ರಸ್ತರ ಹಣ ಸುರಕ್ಷಿತವಾಗಿ ಉಳಿಯಲು ಸಾಧ್ಯವಾಗುತ್ತದೆ. ಇದರೊಂದಿಗೆ, ವಂಚನೆಗೆ ಒಳಗಾದವರು ಸುಲಭವಾಗಿ ದೂರು ದಾಖಲಿಸಲು ಮತ್ತು ಅವರ ಹಣವನ್ನು ಹಿಂತಿರುಗಿಸಲು ಸರಳ ವ್ಯವಸ್ಥೆಯನ್ನು ರೂಪಿಸುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ.

ದೇಶದ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಪೊಲೀಸ್ ಸಂಸ್ಥೆಗಳು ಶೀಘ್ರವೇ ಸೈಬರ್ ದೂರು ಪರಿಹಾರ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ರಾಜ್ಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು ಸ್ಥಾಪಿಸದ ರಾಜ್ಯಗಳು ನಾಲ್ಕು ವಾರಗಳೊಳಗೆ ಅದನ್ನು ಪೂರ್ಣಗೊಳಿಸಬೇಕು ಹಾಗೂ ‘ಇ-ಝೀರೋ ಎಫ್‌ಐಆರ್’ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆದೇಶಿಸಿದೆ. ಬ್ಯಾಂಕ್ ಖಾತೆಗಳು ಫ್ರೀಜ್ ಆದ ಪ್ರಕರಣಗಳಲ್ಲಿ ಸಂತ್ರಸ್ತರು ಮೊದಲು ಈ ದೂರು ಪರಿಹಾರ ವ್ಯವಸ್ಥೆಯನ್ನೇ ಬಳಸಿಕೊಳ್ಳುವಂತೆ ಹೈಕೋರ್ಟ್‌ಗಳು ಸೂಕ್ತ ಸಲಹೆ ನೀಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಸೈಬರ್ ವಂಚನೆಯಲ್ಲಿ ಬ್ಯಾಂಕುಗಳ ಜವಾಬ್ದಾರಿ ಹಾಗೂ ಸಂತ್ರಸ್ತರಿಗೆ ನಷ್ಟ ಪರಿಹಾರ ಒದಗಿಸುವ ಕುರಿತು ಪರಿಶೀಲಿಸಲು ಸಚಿವಾಲಯಗಳ ನಡುವಿನ ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ನ್ಯಾಯಾಲಯ ಸೂಚಿಸಿದೆ. ಸೈಬರ್ ಅಪರಾಧಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಫ್ರೀಜ್ ಆಗಿರುವ ಖಾತೆಗಳ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸುವುದು ಅಗತ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.










