ಬೆಂಗಳೂರು.ಆಗಸ್ಟ್.5: ಆಧುನಿಕ ಡಿಜಿಟಲ್ ಯುಗದಲ್ಲಿ ಮೊಬೈಲ್ ಸಿಮ್ ಕಾರ್ಡ್ಗಳು ಪ್ರತಿಯೊಬ್ಬರ ಜೀವನದ ಅತ್ಯಗತ್ಯ ಭಾಗವಾಗಿವೆ. ಆದರೆ, ಇದರೊಂದಿಗೆ ನಕಲಿ ದಾಖಲೆಗಳನ್ನು ಬಳಸಿ ಸಿಮ್ ಪಡೆಯುವ ಸೈಬರ್ ವಂಚನೆ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಹಲವು ಬಾರಿ ನಮ್ಮ ಅರಿವಿಲ್ಲದೆಯೇ ನಮ್ಮ ಹೆಸರಿನಲ್ಲಿ ಅಥವಾ ಗುರುತಿನ ಚೀಟಿಯನ್ನು ಬಳಸಿ ಬೇರೆಯವರು ಅಕ್ರಮವಾಗಿ ಸಿಮ್ ಕಾರ್ಡ್ಗಳನ್ನು ಬಳಸುತ್ತಿರುತ್ತಾರೆ.
ನಿಮ್ಮ ಹೆಸರಿನಲ್ಲಿ ಯಾರಾದರೂ ಅಪರಿಚಿತರು ಸಿಮ್ ಬಳಸುತ್ತಿದ್ದರೆ, ನೀವು ಗಂಭೀರ ಸೈಬರ್ ಅಪರಾಧ ಅಥವಾ ಕಾನೂನು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿರುತ್ತದೆ. ಇಂತಹ ವಂಚನೆಗಳಿಂದ ಸಾರ್ವಜನಿಕರನ್ನು ರಕ್ಷಿಸಲು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು (DoT) ವಿಶೇಷ ಆನ್ಲೈನ್ ಪೋರ್ಟಲ್ ಆರಂಭಿಸಿದೆ. ನಿಮ್ಮ ದಾಖಲೆಗಳಲ್ಲಿ ಎಷ್ಟು ಸಿಮ್ ಕಾರ್ಡ್ಗಳು ಸಕ್ರಿಯವಾಗಿವೆ ಮತ್ತು ಅವುಗಳನ್ನು ಮನೆಯಲ್ಲೇ ಕುಳಿತು ಬ್ಲಾಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

‘TAFCOP’ ಪೋರ್ಟಲ್ ಬಳಸುವ ಸರಳ ವಿಧಾನ

ವೆಬ್ಸೈಟ್ಗೆ ಭೇಟಿ ನೀಡಿ: ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಬ್ರೌಸರ್ನಲ್ಲಿ ದೂರಸಂಪರ್ಕ ಇಲಾಖೆಯ ಅಧಿಕೃತ ವೆಬ್ಸೈಟ್ (https://sancharsaathi.gov.in/) ಗೆ ಭೇಟಿ ನೀಡಿ.
ಸೇವೆಯನ್ನು ಆಯ್ಕೆಮಾಡಿ: ಹೋಮ್ಪೇಜ್ನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ‘Citizen Centric Services’ ವಿಭಾಗದಲ್ಲಿರುವ ‘Know Mobile Connections in your name’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಲಾಗಿನ್ ಪ್ರಕ್ರಿಯೆ: ತೆರೆದುಕೊಳ್ಳುವ ಪೇಜ್ನಲ್ಲಿ ನಿಮ್ಮ ಸಕ್ರಿಯ ಮೊಬೈಲ್ ಸಂಖ್ಯೆ ಮತ್ತು ಸ್ಕ್ರೀನ್ ಮೇಲಿರುವ ಕ್ಯಾಪ್ಚಾ ಕೋಡ್ ನಮೂದಿಸಿ ‘Validate Captcha’ ಕ್ಲಿಕ್ ಮಾಡಿ.

ಒಟಿಪಿ ನಮೂದಿಸಿ: ನಿಮ್ಮ ಮೊಬೈಲ್ಗೆ ಬರುವ 6 ಅಂಕಿಗಳ ಒಟಿಪಿ (OTP) ಯನ್ನು ನಮೂದಿಸಿ ಲಾಗಿನ್ ಆಗಿ. ಈಗ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಮೊಬೈಲ್ ಸಂಖ್ಯೆಗಳ ಪಟ್ಟಿ ಕಾಣಸಿಗುತ್ತದೆ.
ಅಪರಿಚಿತ ಸಂಖ್ಯೆಗಳನ್ನು ವರದಿ ಮಾಡುವುದು ಹೇಗೆ?
ಪಟ್ಟಿಯಲ್ಲಿರುವ ಪ್ರತಿಯೊಂದು ಸಂಖ್ಯೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಅದರಲ್ಲಿ ಯಾವುದೇ ಅಪರಿಚಿತ ಸಂಖ್ಯೆ ಅಥವಾ ನೀವು ಬಳಸದಿರುವ ಸಂಖ್ಯೆ ಕಂಡುಬಂದರೆ, ಆ ಸಂಖ್ಯೆಯ ಮುಂದೆ ಇರುವ ‘Not My Number’ ಅಥವಾ ‘Not Required’ ಆಯ್ಕೆಯನ್ನು ಆರಿಸಿ ದೂರು ದಾಖಲಿಸಿ.
ಸರ್ಕಾರ ಮತ್ತು ಟೆಲಿಕಾಂ ಕಂಪನಿಗಳ ಕ್ರಮ:
ನೀವು ಅಕ್ರಮ ಸಂಖ್ಯೆಯ ವಿರುದ್ಧ ದೂರು ನೀಡಿದ ತಕ್ಷಣ, ಸರ್ಕಾರದ ಸಿಸ್ಟಮ್ ಮತ್ತು ಸಂಬಂಧಪಟ್ಟ ಟೆಲಿಕಾಂ ಕಂಪನಿಗಳು ಆ ಸಂಖ್ಯೆಯ ಬಗ್ಗೆ ತನಿಖೆ ಆರಂಭಿಸುತ್ತವೆ. ತನಿಖೆಯಲ್ಲಿ ದೂರು ಸರಿಯಾಗಿದೆ ಎಂದು ಕಂಡುಬಂದಲ್ಲಿ, ಆ ನಕಲಿ ಸಿಮ್ ಕಾರ್ಡ್ ಅನ್ನು ಕೆಲವೇ ಗಂಟೆಗಳಲ್ಲಿ ಶಾಶ್ವತವಾಗಿ ಬ್ಲಾಕ್ ಮಾಡಲಾಗುತ್ತದೆ. ಇದರಿಂದ ನೀವು ಯಾವುದೇ ಸೈಬರ್ ವಂಚನೆ ಅಥವಾ ಕಾನೂನು ತೊಂದರೆಯಿಂದ ಸುರಕ್ಷಿತವಾಗಿರಬಹುದು.











