ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 28 : ತಾಲ್ಲೂಕಿನ ಸಿರಿಗೆರೆಯ ಮೈಸೂರು ಬಸವಯ್ಯ ವಸತಿ ಪದವಿಪೂರ್ವ ಕಾಲೇಜಿನ ಕ್ರೀಡಾಪಟುಗಳು 2026-27ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ದಿನಾಂಕ 22-10-2026 ಮತ್ತು 24-10-2026 ರಂದು ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕಾಲೇಜಿನ ಒಟ್ಟು 23 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.
ಕ್ರೀಡಾ ಸಾಧನೆ :
ವಾಲಿಬಾಲ್ ಬಾಲಕರ ವಿಭಾಗ : ಅನಿಲ್ ಕುಮಾರ್ ಮತ್ತು ತಂಡದವರು ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ತಂಡದ 6 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಾಲಿಬಾಲ್ ಬಾಲಕಿಯರ ವಿಭಾಗ : ನೇತ್ರಾವತಿ ಮತ್ತು ತಂಡದವರು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನದೊಂದಿಗೆ ತಂಡದ 6 ವಿದ್ಯಾರ್ಥಿಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಖೋ-ಖೋ: ಬಾಲಕ ಮತ್ತು ಬಾಲಕಿಯರ ಖೋ-ಖೋ ಕ್ರೀಡೆಯಿಂದ ಒಟ್ಟು 4 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ಆಟಗಳು:
ಬಾಲಕರ ವಿಭಾಗದ 4×400 ಮೀಟರ್ ರಿಲೇಯಲ್ಲಿ ಮನು ಯಾದವ್, ಲಿಖಿತ್ ಕುಮಾರ್, ಚಿರಂಜೀವಿ ಮತ್ತು ಪವನ್ ಕುಮಾರ್ – ಪ್ರಥಮ ಸ್ಥಾನ ಮತ್ತು ಬಾಲಕಿಯರ ವಿಭಾಗದ 400 ಮೀಟರ್ ಹರ್ಡಲ್ಸ್ ನಲ್ಲಿ ಸಿಂಧೂ – ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪೂಜ್ಯ ಶ್ರೀಗಳಿಂದ ಆಶೀರ್ವಾದ ಮತ್ತು ಅಭಿನಂದನೆ:
ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸಾಧಕ ಕ್ರೀಡಾಪಟುಗಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, “ಕ್ರೀಡೆಯು ಕೇವಲ ಶಾರೀರಿಕ ಕಸರತ್ತಲ್ಲ; ಅದು ವ್ಯಕ್ತಿತ್ವದಲ್ಲಿ ಶಿಸ್ತು, ನಿರಂತರ ಏಕಾಗ್ರತೆ ಹಾಗೂ ಮಾನಸಿಕ ದೃಢತೆಯನ್ನು ರೂಪಿಸುವ ಶ್ರೇಷ್ಠ ಮಾಧ್ಯಮ. ಗೆಲುವು-ಸೋಲಿಗಿಂತ ಕ್ರೀಡಾಂಗಣದಲ್ಲಿ ತೋರುವ ಶ್ರದ್ಧೆ ಮತ್ತು ನಿಯಮಬದ್ಧತೆ ಪ್ರಮುಖ. ಜಿಲ್ಲಾ ಮಟ್ಟದ ಯಶಸ್ಸು ನಿಮ್ಮ ಗುರಿಯ ಮೊದಲ ಹೆಜ್ಜೆಯಷ್ಟೇ. ರಾಜ್ಯ ಮಟ್ಟದ ಸ್ಪರ್ಧೆಯಲ್ಲೂ ಸಂಪೂರ್ಣ ಆತ್ಮವಿಶ್ವಾಸ, ಕಠಿಣ ಅಭ್ಯಾಸದಿಂದ ರಾಜ್ಯ ಮಟ್ಟದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ವಿದ್ಯಾಸಂಸ್ಥೆಗೆ ಹಾಗೂ ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತನ್ನಿ” ಎಂದು ಹಾರೈಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎ ಬಿ ಮಂಜುನಾಥ್ ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರಾದ ಜಗದೀಶ ಎನ್ , ಕ್ರೀಡೆಗೆ ಪ್ರೋತ್ಸಾಹಿಸಿದ ಎಲ್ಲಾ ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ವಿಜೇತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.












