Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಾಲಿಕುರ್ಚಿಯಲ್ಲೇ ಕುಳಿತು ಜಗತ್ತನ್ನೇ ಗೆದ್ದ ಕನ್ನಡತಿ! ಚಿತ್ರದುರ್ಗದ ಪಲ್ಲವಿ ಯಶೋಗಾಥೆ ಪ್ರತಿಯೊಬ್ಬರಿಗೂ ಸ್ಫೂರ್ತಿ

---Advertisement---

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 28  : ವಿಧಿಯ ಕ್ರೂರ ಆಟಕ್ಕೆ ಎದೆಗುಂದದೆ, ಅಪಘಾತದ ನೋವನ್ನೇ ಮೆಟ್ಟಿಲು ಮಾಡಿಕೊಂಡು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಅಪ್ರತಿಮ ಪ್ರತಿಭೆ ಪಲ್ಲವಿ. ಜಪಾನ್‌ನ ಐಚಿ-ನಗೋಯಾದಲ್ಲಿ ಇದೇ ಅಕ್ಟೋಬರ್ 16 ರಿಂದ 23 ರವರೆಗೆ ನಡೆದ 2026ರ ಏಷ್ಯನ್ ಪ್ಯಾರಾ ಗೇಮ್ಸ್ನ ಮಹಿಳೆಯರ ಡಬಲ್ಸ್ ವೀಲ್ಚೇರ್ ಬ್ಯಾಡ್ಮಿಂಟನ್ನಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಭಾರತದ ಕ್ರೀಡಾ ಇತಿಹಾಸದಲ್ಲೇ ಸುವರ್ಣ ಅಧ್ಯಾಯ ಬರೆದಿದ್ದಾರೆ. ಕೇರಳದ ಆಲ್ಫಿಯಾ ಜೇಮ್ಸ್ ಜೊತೆಗೂಡಿ ಭಾರತಕ್ಕೆ ಚೊಚ್ಚಲ ಗಾಲಿಕುರ್ಚಿ ಬ್ಯಾಡ್ಮಿಂಟನ್ ಪದಕ ತಂದುಕೊಟ್ಟಿರುವ ಪಲ್ಲವಿ ಕಾಲುವೆಹಳ್ಳಿ ಮಂಜುನಾಥ ಅವರ ಈ ಯಶೋಗಾಥೆ ಪ್ರತಿಯೊಬ್ಬರಿಗೂ ರೋಮಾಂಚನ ಉಂಟುಮಾಡುವಂತದ್ದು.     (ಪಲ್ಲವಿ ಅವರ ಸಂಪರ್ಕ ಸಂಖ್ಯೆ :  87227 07922 )

ಬಾಲ್ಯದಲ್ಲೇ ಅಪ್ಪಳಿಸಿದ ವಿಧಿಯ ಕ್ರೂರ ಆಘಾತ :

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದ ಮಂಜುನಾಥ ಕೆ.ವಿ ಮತ್ತು ಶಾಂತಾ ಟಿ ದಂಪತಿಯ ಮಗಳಾಗಿ 1993ರ ಡಿಸೆಂಬರ್ 7ರಂದು ಜನಿಸಿದ ಪಲ್ಲವಿ ಅವರ ಬಾಲ್ಯ ಸುಖಕರವಾಗಿರಲಿಲ್ಲ. ಕೇವಲ ಮೂರನೇ ವಯಸ್ಸಿನಲ್ಲಿದ್ದಾಗ ನಡೆದ ಟ್ರ್ಯಾಕ್ಟರ್ ಅಪಘಾತ ಅವರ ಬೆನ್ನುಹುರಿಗೆ ತೀವ್ರ ಪೆಟ್ಟು ಮಾಡಿತು. ಇದರಿಂದಾಗಿ ಸೊಂಟದಿಂದ ಕೆಳಭಾಗದ ಸ್ವಾಧೀನ ಕಳೆದುಕೊಂಡ ಆ ಪುಟ್ಟ ಬಾಲಕಿ, ಸುಮಾರು 15 ವರ್ಷಗಳ ಕಾಲ ಗಾಲಿಕುರ್ಚಿಯೂ ಇಲ್ಲದೆ ಬರೋಬ್ಬರಿ 19 ವರ್ಷಗಳ ಕಾಲ ನೆಲದ ಮೇಲೆಯೇ ತೆವಳುತ್ತಾ ಬದುಕಬೇಕಾದ ದುಸ್ಥಿತಿ ಎದುರಾಯಿತು.

ಬದುಕಿನ ದಿಕ್ಕು ಬದಲಿಸಿದ ಪುನರ್ವಸತಿ ಕೇಂದ್ರ :

ಸತತ ಹೋರಾಟದ ನಡುವೆ ಪಲ್ಲವಿ ಅವರಿಗೆ ಎಪಿಡಿ ಪುನರ್ವಸತಿ ಕೇಂದ್ರ ಹೊಸ ಆಶಾಕಿರಣವಾಗಿ ಕಂಡಿತು. ಅಲ್ಲಿ ಫ್ಯಾಷನ್ ಡಿಸೈನಿಂಗ್ ಕಲಿತು, ಡಾಟಾ ಎಂಟ್ರಿ ಆಪರೇಟರ್ ಆಗಿ ಬದುಕು ಕಟ್ಟಿಕೊಳ್ಳಲು ಆರಂಭಿಸಿದ ಅವರು, ಕ್ರೀಡಾ ಜಗತ್ತಿನೆಡೆಗೆ ಆಕರ್ಷಿತರಾದರು. ಬ್ಯಾಡ್ಮಿಂಟನ್ ರ್ಯಾಕೆಟ್ ಹಿಡಿದು ಅಭ್ಯಾಸ ಆರಂಭಿಸಿದ ಇವರಿಗೆ ಆರಂಭದಲ್ಲಿ ಮೈಸೂರಿನ ತರಬೇತುದಾರ ಆನಂದ್ ಮಾರ್ಗದರ್ಶನ ನೀಡಿದರು. ಬಳಿಕ ಬೆಂಗಳೂರಿನಲ್ಲಿ ನೆಲೆಸಿರುವ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಮೂಲದ ವಿನಾಯಕ ಅವರ ಮಾರ್ಗದರ್ಶನದಲ್ಲಿ ‘ವಿನಾಯಕ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ’ಯಲ್ಲಿ ಕಠಿಣ ಅಭ್ಯಾಸ ಮುಂದುವರಿಸಿದರು. ಸದ್ಯ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಸಂಸ್ಥೆಯ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ ಪಲ್ಲವಿ, ವಿಶ್ವದ ಟಾಪ್ 11 ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

ತರಬೇತುದಾರ ಆನಂದ್ ಅವರ ಮಾರ್ಗದರ್ಶನ

ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಐತಿಹಾಸಿಕ ಪದಕದ ಬೇಟೆ :

ಐಚಿ-ನಗೋಯಾದಲ್ಲಿ ನಡೆದ 2026ರ ಏಷ್ಯನ್ ಪ್ಯಾರಾ ಗೇಮ್ಸ್ನ ಡಬ್ಲ್ಯೂಎಚ್1-2 ವಿಭಾಗದಲ್ಲಿ ಆಲ್ಫಿಯಾ ಜೇಮ್ಸ್ ಜೊತೆಗೂಡಿ ಕಣಕ್ಕಿಳಿದ ಪಲ್ಲವಿ, ಅದ್ಭುತ ಪ್ರದರ್ಶನ ತೋರಿ ಕಂಚಿನ ಪದಕ ಗೆದ್ದುಕೊಂಡರು. ಇದು ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಇತಿಹಾಸದಲ್ಲೇ ವೀಲ್ಚೇರ್ ವಿಭಾಗದಲ್ಲಿ ದಾಖಲಾದ ಮೊದಲ ಅಂತಾರಾಷ್ಟ್ರೀಯ ಪದಕವಾಗಿದೆ. ಇವರ ಈ ಅಪ್ರತಿಮ ಸಾಧನೆಯನ್ನು ಕರ್ನಾಟಕದ ಉಪಮುಖ್ಯ ಮಂತ್ರಿ ಡಾ. ಜಿ. ಪರಮೇಶ್ವರ್, ಕೇರಳ ವಿಪಕ್ಷ ನಾಯಕ ವಿ.ಡಿ. ಸತೀಶನ್ ಸೇರಿದಂತೆ ದೇಶದ ಗಣ್ಯರು ಕೊಂಡಾಡಿದ್ದಾರೆ.

ಅಂತಾರಾಷ್ಟ್ರೀಯ ವೇದಿಕೆಯಲ್ಲಿ 28 ಪದಕಗಳ ಮೆರವಣಿಗೆ :

ಹಳ್ಳಿಯ ಹಿನ್ನೆಲೆಯಿಂದ ಬಂದ ಈ ಪ್ರತಿಭೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬರೋಬ್ಬರಿ 28 ಪದಕಗಳನ್ನು ಬಾಚಿಕೊಂಡಿದ್ದಾರೆ. 2023ರ ಉಗಾಂಡ ಪ್ಯಾರಾ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಚೊಚ್ಚಲ ಚಿನ್ನ ಗೆದ್ದು ಶುಭಾರಂಭ ಮಾಡಿದ ಇವರು, ಅದೇ ವರ್ಷ ವಿಶ್ವ ಎಬಿಲಿಟಿ ಗೇಮ್ಸ್ ಡಬಲ್ಸ್ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. 2024ರ ಇಂಡೋನೇಷ್ಯಾ ಟೂರ್ನಿಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ನಲ್ಲಿ ಚಿನ್ನ ಮತ್ತು ಮಿಕ್ಸೆಡ್ನಲ್ಲಿ ಕಂಚು ಗೆದ್ದರು. 2025ರ ಬಹರೇನ್ ಪಂದ್ಯಾವಳಿಯಲ್ಲಿ ಸಿಂಗಲ್ಸ್ ಚಿನ್ನ, ಡಬಲ್ಸ್ ಬೆಳ್ಳಿ ಹಾಗೂ ಮಿಕ್ಸೆಡ್ ಕಂಚು ಜಯಿಸಿದರೆ, ಈಜಿಪ್ಟ್ನಲ್ಲಿ ನಡೆದ ಕೂಟದಲ್ಲಿ ಡಬಲ್ಸ್ ಚಿನ್ನದೊಂದಿಗೆ ಸಿಂಗಲ್ಸ್ ಮತ್ತು ಮಿಕ್ಸೆಡ್ನಲ್ಲಿ ಕಂಚು ಪಡೆದರು. 2026ರ ಫ್ರಾನ್ಸ್ ಟೂರ್ನಿಯಲ್ಲಿ ಮಿಕ್ಸೆಡ್ ಡಬಲ್ಸ್ ಬೆಳ್ಳಿ, ಬ್ರಿಟಿಷ್ ಕೂಟದಲ್ಲಿ ಎರಡು ಕಂಚು ಹಾಗೂ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಜಾಗತಿಕ ಮಟ್ಟದಲ್ಲಿ ಅಬ್ಬರಿಸಿದ್ದಾರೆ.

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಪ್ರತಿಮ ದರ್ಬಾರ್ :

ರಾಷ್ಟ್ರೀಯ ಮಟ್ಟದಲ್ಲೂ ಪಲ್ಲವಿ ಅವರ ಸಾಧನೆಯ ಓಟ ಮುಂದುವರಿದಿದ್ದು, ಒಟ್ಟು 11 ಪದಕಗಳು ಇವರ ಮುಡಿಗೇರಿವೆ. ಖೇಲೋ ಇಂಡಿಯಾ ಗೇಮ್ಸ್ನ 2024 ಮತ್ತು 2025ರ ಆವೃತ್ತಿಗಳಲ್ಲಿ ಸತತವಾಗಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. 2026ರ 7ನೇ ನ್ಯಾಷನಲ್ಸ್ ಚಾಂಪಿಯನ್ಶಿಪ್ನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಬಂಗಾರದ ಪದಕ ಬೇಟೆಯಾಡಿದ್ದಾರೆ. ಕರ್ನಾಟಕ ರಾಜ್ಯಮಟ್ಟದ ಚಾಂಪಿಯನ್ಶಿಪ್ನಲ್ಲಿ ಸತತ ಮೂರು ಬಾರಿ ಚಿನ್ನ ಗೆದ್ದು ರಾಜ್ಯದ ನಂಬರ್ ಒನ್ ಆಟಗಾರ್ತಿಯಾಗಿ ಮೆರೆದಿದ್ದಾರೆ.

ನೆಲದ ಮೇಲೆ ತೆವಳುತ್ತಿದ್ದ ಹಳ್ಳಿಯ ಹೆಣ್ಣುಮಗಳು ಇಂದು ಒಟ್ಟು 44ಕ್ಕೂ ಹೆಚ್ಚು ಪದಕಗಳನ್ನು ಕೊರಳಿಗೆ ಏರಿಸಿಕೊಂಡು ಜಗತ್ತೇ ತಿರುಗಿ ನೋಡುವಂತೆ ಬೆಳೆದು ನಿಂತಿರುವುದು ಕನ್ನಡಿಗರಿಗೆ ಮಾತ್ರವಲ್ಲದೆ ಇಡೀ ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now