ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಚಿತ್ರದುರ್ಗ ನಗರದ ಕೋಟೆಯ ಆಗ್ನೇಯ ದಿಕ್ಕಿನ ಮುಖ್ಯ ಪ್ರವೇಶ ದ್ವಾರವೇ ನರಸಿಂಹನ ಬಾಗಿಲು.ಪಾಳೇಯಗಾರರ ಆರಾಧ್ಯ ದೈವ ಶ್ರೀ ಅಹೋಬಲ ನರಸಿಂಹ ಸ್ವಾಮಿ ಹೆಸರನ್ನು ಇಡಲಾಗಿದೆ. ಇದನ್ನು ಲಾಲ್ ಕೋಟೆ ಬಾಗಿಲು ಎಂದೂ ಕರೆಯುತ್ತಾರೆ. ಇದು ಕೋಟೆಯ ಮೊದಲ ಸುತ್ತಿನ ದಕ್ಷಿಣ ದಿಕ್ಕಿನ ಮಹಾದ್ವಾರವಾಗಿದೆ. ಇದನ್ನು ತಲುಪಲು ಕೋಟೆಯ ಹತ್ತಿರದ ಪ್ರವಾಸೋದ್ಯಮ ಇಲಾಖೆ ಕಚೇರಿ ಬಳಿಯ ರಸ್ತೆ/ಕರುವರ್ತಿ ಈಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಹೋಗಬೇಕು.

17-18 ನೇ ಶತಮಾನದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.
ಇದರ ಒಳಗೆ 2 ಜೋಡಿ ಬತೇರಿಗಳಿದ್ದು ಅವುಗಳನ್ನು ಅಕ್ಕ ತಂಗಿ ಬತೇರಿಗಳೆಂದು ಕರೆಯುತ್ತಾರೆ. ಬಾಗಿಲಿನ ಒಳಭಾಗದಲ್ಲಿ ವಿಶಾಲವಾದ ಚೌಕಾಕಾರದ ಅಂಕಣವಿದೆ. ಇದರ ಹೊರಗೆ ಅಗಳು ಪ್ರದೇಶವಿದ್ದು, ಆಳವಾದ ಕಂದಕವಿದೆ.ಹಿಂದೆ ಇದರ ಮೇಲೆ ತೂಗು ಸೇತುವೆ ಇದ್ದ ಕುರುಹುಗಳಿವೆ.ಶತ್ರುಗಳು ಸೇತುವೆ ದಾಟಿದರೆ ಹಗ್ಗ ಕತ್ತರಿಸಿ ಕಂದಕದಲ್ಲಿ ಬೀಳಿಸಿ ದುಷ್ಟ ಪ್ರಾಣಿಗಳಿಗೆ ಸಿಗುವಂತೆ ಮಾಡುತ್ತಿದ್ದರು. ಬತೇರಿಗಳ ಮೇಲೆ ಪಹರೆ ಗೃಹಗಳಿದ್ದು ಇಂದಿಗೂ ಸುಸ್ಥಿತಿಯಲ್ಲಿದೆ. ಇದರ ಮೇಲ್ಛಾವಣಿ ಸಂಪೂರ್ಣ ಇಟ್ಟಿಗೆ ಹಾಗೂ ಗಾರೆಯಿಂದ ನಿರ್ಮಿಸಲಾಗಿದೆ.
ಸುತ್ತಲೂ ಸಂಪೂರ್ಣ ಶಿಲಾಮಯವಾದ ಗೋಡೆಗಳು ಇದನ್ನು ಆವರಿಸಿ ಮುಂದುವರೆದಿದೆ.
ಇದರ ಎಡಭಾಗದಲ್ಲಿ ಬತೇರಿಗಳಿದ್ದು,ಕೋಟೆಗೆ ಸಂಪರ್ಕಿಸುತ್ತವೆ. ಕೋಟೆಯ ಹೊರಸುತ್ತಿನ (ಮೊದಲನೇ ಸುತ್ತು) ಪ್ರಮುಖ ದ್ವಾರವಾದ ನರಸಿಂಹನ ಬಾಗಿಲು ಹಿಂದೆ ಚಿತ್ರದುರ್ಗದ ಪ್ರವೇಶಕ್ಕೆ ಪ್ರಮುಖ ದ್ವಾರವಾಗಿತ್ತು.













