ಸುದ್ದಿಒನ್,ಬೆಂಗಳೂರು,ಮೇ.25: ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಯಶಸ್ವಿ ಆರಂಭಕ್ಕಾಗಿ ಅತ್ಯಂತ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ಈ ಅಧಿಕೃತ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದರನ್ವಯ, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಸಕಾಲದಲ್ಲಿ ಶಾಲಾ ಪ್ರಾರಂಭೋತ್ಸವ, ದಾಖಲಾತಿ ಆಂದೋಲನ, ಸೇತುಬಂಧ ಮತ್ತು ಅಧಿಕಾರಿಗಳಿಂದ ‘ಮಿಂಚಿನ ಸಂಚಾರ’ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಶಾಲಾ ಆರಂಭ ಹಾಗೂ ಪೂರ್ವ ಸಿದ್ಧತೆಗಳು
ಮೇ 28ರೊಳಗೆ ಸಂಪೂರ್ಣ ಸ್ವಚ್ಛತೆ: ಶಾಲಾ ಪ್ರಾರಂಭೋತ್ಸವಕ್ಕೂ ಮುನ್ನ, ಅಂದರೆ ಮೇ 28ರೊಳಗೆ ಶಾಲೆಯ ಸಂಪೂರ್ಣ ಆವರಣವನ್ನು ಸ್ವಚ್ಛಗೊಳಿಸಬೇಕು. ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲಸೌಕರ್ಯಗಳು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇತ್ತೀಚಿನ ಮಳೆಯಿಂದಾಗಿ ಶಾಲಾ ಕಟ್ಟಡ, ಶೌಚಾಲಯ ಅಥವಾ ವಿದ್ಯುತ್ ತಂತಿಗಳಿಂದ ಯಾವುದೇ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿದ್ದರೆ, ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ತಕ್ಷಣವೇ ಅದನ್ನು ತೆರವುಗೊಳಿಸಲು ಸೂಚಿಸಲಾಗಿದೆ.
ಮುಂಬರುವ ಶೈಕ್ಷಣಿಕ ವರ್ಷದ ಅಗತ್ಯ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಲು ಎಲ್ಲಾ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಮೇ 29 ರಂದು ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕು. ಈ ದಿನದಂದು ಎಸ್ಡಿಎಂಸಿ (SDMC) ಸಭೆ ನಡೆಸುವುದು, ಶಾಲಾ ವೇಳಾಪಟ್ಟಿ, ವಾರ್ಷಿಕ ಕ್ರಿಯಾ ಯೋಜನೆ ಹಾಗೂ ಶಾಲಾ ಪಂಚಾಂಗವನ್ನು ಸಿದ್ಧಪಡಿಸಿಕೊಳ್ಳಲು ಆದೇಶಿಸಲಾಗಿದೆ.
ಜೂನ್ 1 ರಿಂದ ದಾಖಲಾತಿ ಆರಂಭ
ವಿದ್ಯಾರ್ಥಿಗಳ ಶಾಲಾ ಪ್ರವೇಶಾತಿ ಮತ್ತು ದಾಖಲಾತಿ ಪ್ರಕ್ರಿಯೆಯು ಜೂನ್ 1 ರಿಂದ ಶಾಲಾ ಪ್ರಾರಂಭೋತ್ಸವದೊಂದಿಗೆ ಅಧಿಕೃತವಾಗಿ ಆರಂಭವಾಗಲಿದ್ದು, ಜೂನ್ 30 ರೊಳಗೆ ಮುಕ್ತಾಯಗೊಳಿಸಲು ಗಡುವು ನೀಡಲಾಗಿದೆ.
2. ಶಾಲಾ ಹಬ್ಬ ಮತ್ತು ಸೌಲಭ್ಯಗಳ ವಿತರಣೆ
ವಿಶೇಷ ಸ್ವಾಗತ ಹಾಗೂ ಸಿಹಿಯೂಟ: ಶಾಲಾ ಪ್ರಾರಂಭೋತ್ಸವವನ್ನು ಕೇವಲ ಯಾಂತ್ರಿಕ ಪ್ರಕ್ರಿಯೆಯಾಗಿಸದೆ, ಇಡೀ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಹಬ್ಬದಂತೆ ಅತ್ಯಂತ ಉತ್ಸಾಹದಿಂದ ಆಚರಿಸಬೇಕು. ಮೊದಲ ದಿನವೇ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯಡಿ ರುಚಿಯಾದ ಸಿಹಿಯೂಟವನ್ನು ಉಣಬಡಿಸಬೇಕು.
ಮೊದಲ ದಿನವೇ ಸೌಲಭ್ಯಗಳ ಹಸ್ತಾಂತರ: ವಿದ್ಯಾವಿಕಾಸ ಯೋಜನೆಯಡಿ ನೀಡಲಾಗುವ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್ ಸೇರಿದಂತೆ ಎಲ್ಲಾ ಸೌಲಭ್ಯಗಳು ಶೈಕ್ಷಣಿಕ ವರ್ಷದ ಮೊದಲ ದಿನವೇ ಲಭ್ಯವಿರುವುದನ್ನು ಖಾತರಿಪಡಿಸಿಕೊಂಡು, ಮಕ್ಕಳಿಗೆ ವಿತರಿಸಬೇಕು.
3. ಡಿಜಿಟಲ್ ತಂತ್ರಜ್ಞಾನದ ಕಡ್ಡಾಯ ಬಳಕೆ
ಶಿಕ್ಷಕರಿಗೆ KAAMS ಹಾಜರಾತಿ: ಶಾಲಾ ಶಿಕ್ಷಣ ಇಲಾಖೆಯ ಖಾಯಂ ಶಿಕ್ಷಕರು, ಮುಖ್ಯ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ಹಾಜರಾತಿಯನ್ನು ನಿಖರವಾಗಿ ಗುರುತಿಸಲು ‘ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸನ್ ಮ್ಯಾನೇಜ್ಮೆಂಟ್ ಸಿಸ್ಟಮ್’ (KAAMS) ಮೊಬೈಲ್ ಅಪ್ಲಿಕೇಶನ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.
ವಿದ್ಯಾರ್ಥಿಗಳಿಗೆ AI ಆಧಾರಿತ ಹಾಜರಾತಿ: ‘ನಿರಂತರ’ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ AI-Based Student Facial Attendance Monitoring System ಅಪ್ಲಿಕೇಶನ್ ಮೂಲಕ ವಿದ್ಯಾರ್ಥಿಗಳ ಆನ್ಲೈನ್ ಹಾಜರಾತಿ ನಿರ್ವಹಿಸುವುದನ್ನು ಕಡ್ಡಾಯ ಮಾಡಲಾಗಿದೆ.
4. ದಾಖಲಾತಿ ಆಂದೋಲನ ಮತ್ತು ದ್ವಿಭಾಷಾ ಶಿಕ್ಷಣ
ಮನೆ ಮನೆ ಭೇಟಿ ಆಂದೋಲನ: ಶಾಲೆಯಿಂದ ಹೊರಗುಳಿದ, ಅಪೂರ್ಣ ಶಿಕ್ಷಣ ಪಡೆದ ಅಥವಾ ವಲಸೆ ಬಂದ 6 ರಿಂದ 14 ವರ್ಷದ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಕರೆತರಲು ಶಿಕ್ಷಕರು ಮತ್ತು ಎಸ್ಡಿಎಂಸಿ ಪದಾಧಿಕಾರಿಗಳು ಜಂಟಿಯಾಗಿ ಮನೆ ಮನೆಗೆ ಭೇಟಿ ನೀಡಿ ಪೋಷಕರ ಮನವೊಲಿಸಬೇಕು.
ದ್ವಿಭಾಷಾ (Bilingual) ಶಿಕ್ಷಣ: ಇಲಾಖೆಯಿಂದ ಪೂರ್ವಾನುಮತಿ ಪಡೆದಿರುವ ಶಾಲೆಗಳಲ್ಲಿ 2026-27ನೇ ಸಾಲಿನಲ್ಲಿ ಕಡ್ಡಾಯವಾಗಿ ಕನ್ನಡ-ಇಂಗ್ಲೀಷ್ ಹಾಗೂ ಉರ್ದು-ಇಂಗ್ಲೀಷ್ ದ್ವಿಭಾಷಾ ಬೋಧನಾ ಪದ್ಧತಿಯನ್ನು ಅನುಷ್ಠಾನಕ್ಕೆ ತರಲು ಸೂಚಿಸಲಾಗಿದೆ. ಇದರೊಂದಿಗೆ ಆಯ್ದ ಶಾಲೆಗಳಲ್ಲಿ ಎಲ್ಕೆಜಿ (LKG) ಮತ್ತು ಯುಕೆಜಿ (UKG) ತರಗತಿಗಳನ್ನು ಪ್ರಾರಂಭಿಸಲಾಗುವುದು.

5. ಸೇತುಬಂಧ ಶಿಕ್ಷಣ ಮತ್ತು ಪರೀಕ್ಷೆಗಳು
ಸೇತುಬಂಧ ತರಗತಿಗಳ ಅವಧಿ: ಶಾಲಾ ಪ್ರಾರಂಭದ ಮೊದಲ ದಿನದಿಂದಲೇ ಪಾಠ ಹಾಗೂ ಸೇತುಬಂಧ ಶಿಕ್ಷಣ ಆರಂಭವಾಗಲಿದೆ. ಇಲಾಖೆಯ ಮಾರ್ಗಸೂಚಿಯಂತೆ 1 ರಿಂದ 3ನೇ ತರಗತಿಗಳಿಗೆ 30 ದಿನಗಳು ಹಾಗೂ 4 ರಿಂದ 10ನೇ ತರಗತಿಗಳಿಗೆ ಕೇವಲ 15 ದಿನಗಳ ಕಾಲ ಮಾತ್ರ ಸೇತುಬಂಧ ಶಿಕ್ಷಣ ಇರಲಿದೆ.
SATS ತಂತ್ರಾಂಶದಲ್ಲಿ ದಾಖಲಾತಿ: ಮಕ್ಕಳ ಕಲಿಕಾ ಹಿನ್ನಡೆಯನ್ನು ವ್ಯವಸ್ಥಿತವಾಗಿ ಗುರುತಿಸಲು ನೈದಾನಿಕ ಪರೀಕ್ಷೆ, ಪೂರ್ವ ಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳನ್ನು ನಡೆಸಿ, ಅವುಗಳ ಫಲಿತಾಂಶವನ್ನು ‘ಸ್ಯಾಟ್ಸ್’ (SATS) ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.
6. ಅಧಿಕಾರಿಗಳಿಂದ ಅನಿರೀಕ್ಷಿತ ‘ಮಿಂಚಿನ ಸಂಚಾರ’ (Flying Visit)
ಶಾಲಾ ಶೈಕ್ಷಣಿಕ ಚಟುವಟಿಕೆಗಳ ಪೂರ್ವಸಿದ್ಧತೆ, ಮೂಲಸೌಕರ್ಯ, ಮಕ್ಕಳ ಸುರಕ್ಷತೆ ಮತ್ತು ಪ್ರಗತಿಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲು ಇಲಾಖೆಯು ‘ಮಿಂಚಿನ ಸಂಚಾರ’ ಮತ್ತು ‘ಶಾಲಾ ಸಂದರ್ಶನ ಸಪ್ತಾಹ’ವನ್ನು ಆಯೋಜಿಸಿದೆ.
ಸಿ.ಆರ್.ಪಿ ಯಿಂದ ಹಿಡಿದು ಡಿ.ಡಿ.ಪಿ.ಐ ವರೆಗಿನ ಉನ್ನತ ಅಧಿಕಾರಿಗಳ ತಂಡಗಳು ಅನಿರೀಕ್ಷಿತವಾಗಿ ಶಾಲೆಗಳಿಗೆ ಭೇಟಿ ನೀಡಲಿವೆ. ಇಲಾಖೆ ನಿಗದಿಪಡಿಸಿರುವ 25 ಪ್ರಮುಖ ಅಂಶಗಳ ಚೆಕ್ಲಿಸ್ಟ್ ಆಧಾರದ ಮೇಲೆ ಶಾಲೆಗಳನ್ನು ಶ್ರೇಣೀಕರಿಸಲಾಗುವುದು. ಒಂದು ವೇಳೆ ಯಾವುದೇ ಶಾಲೆಯಲ್ಲಿ 10 ಕ್ಕಿಂತ ಹೆಚ್ಚು ಅಂಶಗಳಲ್ಲಿ ‘ಸಾಧಾರಣ ಪ್ರಗತಿ’ ಕಂಡುಬಂದರೆ, ಅಂತಹ ಶಾಲೆಗಳನ್ನು ‘ಸುಧಾರಣೆಗೆ ಕ್ರಮವಹಿಸಬೇಕಾದ ಶಾಲೆಗಳು’ ಎಂದು ಪರಿಗಣಿಸಿ, ಇಲಾಖೆಯಿಂದ ನಿರಂತರ ಮೇಲ್ವಿಚಾರಣೆ ನಡೆಸಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















