ಚಿತ್ರದುರ್ಗ. ಜುಲೈ.05: ಕೋಟ್ಪಾ-2003ರ ಕಾಯ್ದೆಯ ಕುರಿತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಹೊಳಲ್ಕೆರೆ ತಾಲ್ಲೂಕಿನ ನಗರ ಪ್ರದೇಶಗಳಲ್ಲಿ ಮತ್ತು ರಾಮಗಿರಿ ಗ್ರಾಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ತಂಬಾಕು ತನಿಖಾ ತಂಡವು ತಂಬಾಕು ಉತ್ಪನ್ನಗಳ ಮಾರಾಟಗಾರರ ಅಂಗಡಿಗಳಿಗೆ ಶುಕ್ರವಾರ ದಾಳಿ ಮಾಡಿ ದಂಡ ವಿಧಿಸಿದೆ.
ಯುವಜನತೆಯು ಅತೀ ಹೆಚ್ಚಾಗಿ ತಂಬಾಕಿನ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಾಗಿ ಯುವಕರೇ ಬಲಿಯಾಗುತ್ತಿದ್ದಾರೆ ಎಂದು ಯುವಕರಿಗೆ ಮತ್ತು ಅಂಗಡಿ ಮಾಲೀಕರಿಗೆ ತಿಳಿಸುತ್ತಾ ತಂಬಾಕು ಕಾರ್ಯಾಚರಣೆ ನಡೆಸಿದರು.
ಸಾರ್ವಜನಿಕರಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ, ಪಾನ್ ಮಸಾಲ, ತಂಬಾಕು ಜಗಿದು ಉಗಿಯದಂತೆ ಎಚ್ಚರಿಸಿ ಜಾಗೃತಿ ಮೂಡಿಸಲಾಯಿತು. ಸಂಬಂಧಪಟ್ಟ ಸೆಕ್ಷನ್-4, 6ಎ ಮತ್ತು 6ಬಿ ಬೋರ್ಡ್ಗಳನ್ನು ಹಾಕಲು ಸೂಚಿಸಲಾಯಿತು ಮತ್ತು ಸೆಕ್ಷನ್-4 ಅಡಿಯಲ್ಲಿ 25 ಕೇಸುಗಳನ್ನು ದಾಖಲಿಸಿ ರೂ. 2350 ದಂಡವನ್ನು, ಸೆಕ್ಷನ್-6ಎ ಅಡಿಯಲ್ಲಿ 08 ಕೇಸುಗಳನ್ನು ದಾಖಲಿಸಿ ರೂ. 750 ದಂಡವನ್ನು ಮತ್ತು ಸೆಕ್ಷನ್-6ಬಿ ಅಡಿಯಲ್ಲಿ 1 ಕೇಸುಗಳನ್ನು ದಾಖಲಿಸಿ ರೂ. 100 ದಂಡವನ್ನು ವಸೂಲಿ ಮಾಡಲಾಯಿತು.
ತಂಬಾಕು ದಾಳಿಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ತನಿಖಾ ತಂಡದ ಅಧಿಕಾರಿಗಳಾದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ವಿಶ್ವ, ಜಿಲ್ಲಾ ಸರ್ವೇಕ್ಷಣಾ ಘಟಕದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಹೆಚ್.ಮಂಜುನಾಥ್, ಹೊಳಲ್ಕೆರೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಕೆ.ರಂಗನಾಥ್, ರಾಮಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗೋಪಾಲನಾಯ್ಕ ಇದ್ದರು.















