Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮೂರು ನಮ್ಮ ಹೆಮ್ಮೆ : ಚಿತ್ರದುರ್ಗ : ದಂಡಿನ ಕುರುಬರಹಟ್ಟಿ ಪರಿಚಯ

---Advertisement---

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ದಂಡಿನ ಕುರುಬರಹಟ್ಟಿ ಗ್ರಾಮವು ದೊಡ್ಡಸಿದ್ದವನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 9
ಕಿಲೋಮೀಟರ್ ದೂರ ಪೂರ್ವಕ್ಕೆ , ಚಿತ್ರದುರ್ಗ-ಚಳ್ಳಕೆರೆ ಮಾರ್ಗದಲ್ಲಿ ದಂಡಿನ ಕುರುಬರಹಟ್ಟಿ ಗೇಟ್ನಿಂದ ದಕ್ಷಿಣಕ್ಕೆ ಒಂದು ಕಿಲೋಮೀಟರ್ ದೂರದಲ್ಲಿದೆ. ಗ್ರಾಮದ ಹಳೆಗ್ರಾಮ ನಿವೇಶನವು ಗ್ರಾಮದಿಂದ ಪೂರ್ವಕ್ಕೆ ಒಂದು ಕಿಲೋಮೀಟರ್ ದೂರದ ಉಪ್ಪುಹಳ್ಳ ಪ್ರದೇಶದಲ್ಲಿದೆ. ಈಗ ಹಳೆಗ್ರಾಮವು ಬೇಚರಾಕ್ ಆಗಿದೆ. ಹಳೆ ಗ್ರಾಮ ನಿವೇಶನದಲ್ಲಿ ಈಗ ನಂದಿಸ್ತಂಭ, ವೀರಮಾಸ್ತಿಗಲ್ಲು, ಗಜಲಕ್ಷ್ಮಿ ಶಿಲ್ಪ ಹಾಗೂ ಭಗ್ನಾವಶೇಷಗಳನ್ನು ಕಾಣಬಹುದಾಗಿದೆ.

ಹೆಸರಿನ ಮೂಲ :
ಹಿಂದೆ ಈ ಗ್ರಾಮದ ಪ್ರದೇಶದಲ್ಲಿ ಸೈನಿಕರ ದಂಡು ಚಿತ್ರದುರ್ಗದ ಕಾವಲಿಗಾಗಿ ಸದಾ ಕಾಲ ಉಳಿದಿರುತ್ತಿತ್ತು. ಪೂರ್ವದ ಭಾಗದಿಂದ ಚಿತ್ರದುರ್ಗದ ಆಕ್ರಮಣವನ್ನು ತಡೆಯಲು ಸದಾಕಾಲ ದಂಡು ನಿಂತಿತ್ತು. ಗ್ರಾಮದ ಪಶ್ಚಿಮಕ್ಕೆ ಇರುವ ಗುಡ್ಡ ಸಾಲುಗಳ ಬಳಿಯಿಂದ ಹರಿದು ಬರುವ ಹಳ್ಳವು ಗ್ರಾಮದ ಮೂಲಕ ಸಾಗಿ ಮುಂದೆ ಉಪ್ಪುಹಳ್ಳಕ್ಕೆ ಸೇರಿ ಮುಂದೆ ಹಿರೇಮಧುರೆ ಕೆರೆಗೆ ತಲುಪುತ್ತದೆ. ಈ ಕಾರಣಕ್ಕೆ ಗ್ರಾಮದಲ್ಲಿ ಸದಾಕಾಲ ನೀರಿನ ಹರಿವಿನ ಪ್ರದೇಶವಿದ್ದಿತು ಹಾಗೂ ವಿಶಾಲ ಸಮತಟ್ಟು ಭೌಗೋಳಿಕ ಭೂ ಪ್ರದೇಶವು ಸೈನಿಕರ ದಂಡು ಉಳಿಯಲು ಪ್ರಶಸ್ತವಾಗಿ ಇದ್ದ ಜಾಗವಾಗಿತ್ತು,
ಜೊತೆಗೆ ಕುರುಬರೇ ಇಲ್ಲಿ ಹಿಂದೆ ಬಹುಸಂಖ್ಯಾತರಾಗಿ ನೆಲೆಸಿದ ಕಾರಣಕ್ಕೆ ಇದು ಕುರುಬರಹಟ್ಟಿಯಾಗಿದೆ. ಇವೆರಡೂ ಪದಗಳು ಸಂಯೋಜನೆಗೊಂಡು ದಂಡಿನ ಕುರುಬರಹಟ್ಟಿಯಾಗಿದೆ. ಹಿಂದೆ ಚಿತ್ರದುರ್ಗವನ್ನು ಮುತ್ತಿಗೆ ಹಾಕಲು ಬಂದ ಹೈದರಾಲಿ ಸೈನಿಕರು ತಿಂಗಳುಗಟ್ಟಲೆ ಇದೇ ಪ್ರದೇಶದಲ್ಲಿ ಬೀಡು ಬಿಟ್ಟಿದ್ದರೆಂಬ ಮಾಹಿತಿ ಲಭ್ಯವಾಗುತ್ತದೆ.

 

ಭೌಗೋಳಿಕ ಲಕ್ಷಣ :
ಭೌಗೋಳಿಕವಾಗಿ ಗ್ರಾಮದ
ಸುತ್ತಮುತ್ತಲಿನ ಪ್ರದೇಶವು ಬಯಲು ಸೀಮೆಯ ವಿಶಾಲ ಮೈದಾನವಾಗಿದ್ದು, ಸಮತಟ್ಟು ಭೂ ಪ್ರದೇಶವೇ ಸುತ್ತಲೂ ಹರಡಿದೆ. ಪಶ್ಚಿಮಕ್ಕೆ ಮೆದಕೇರಿಪುರದ ಗುಡ್ಡ ಸಾಲುಗಳು ಕಂಡುಬರುತ್ತದೆ.

ವೀರಗಲ್ಲುಗಳು : ಗ್ರಾಮದ ಉಪ್ಪುಹಳ್ಳ ಪ್ರದೇಶದ ಬಳಿಯಲ್ಲಿ ವೀರಮಾಸ್ತಿಗಲ್ಲು ಹಾಗೂ ಗಜಲಕ್ಷ್ಮಿ ಶಿಲ್ಪಗಳು ಕಂಡುಬರುತ್ತವೆ. ಇದು ತುರುಕಾಳಗದಲ್ಲಿ ಹುತಾತ್ಮನಾದ ಯೋಧನದ್ದಾಗಿದೆ. ಇವು 12 -13 ನೇ ಶತಮಾನದ ಹೊಯ್ಸಳರ ಕಾಲಕ್ಕೆ ಸೇರಿದೆ ಎಂದು ಸಂಶೋಧಕರಾದ ಮಹೇಶ್ ಕುಂಚಿಗನಾಳ ಹೇಳುತ್ತಾರೆ. ಇವುಗಳನ್ನು ಸಂರಕ್ಷಣೆ ಮಾಡುವ ಅಗತ್ಯತೆ ಇರುತ್ತದೆ.

ದೇವಾಲಯ ಪರಿಚಯ:
1.ಗಡಿಚೋಡು ಮಾರಮ್ಮ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಈ ದೇವರ ಜಾತ್ರೆಯನ್ನು ಪ್ರತಿ ಐದು ವರ್ಷಕ್ಕೊಮ್ಮೆ ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಅಕ್ಕ ಪಕ್ಕದ ಊರು,ಗ್ರಾಮಗಳಿಂದಲೂ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ.
ದಂಡಿನವರೇ ಈ ದೇವರನ್ನು ಪ್ರತಿಷ್ಠಾಪಿಸಿದ್ದಾರೆ ಎನ್ನಲಾಗುತ್ತದೆ. ಆ ಕಾರಣಕ್ಕೆ ಈ ದೇವರಿಗೆ ದಂಡಿನಮಾರಮ್ಮ ಎನ್ನಲಾಗುತ್ತದೆ.
ಸುತ್ತಮುತ್ತಲಿನ ಗ್ರಾಮದ ಭಕ್ತರ ಮನೆಗೆ ಈ ದೇವರನ್ನು ಕರೆದೊಯ್ಯಲಾಗುತ್ತದೆ. ಇದರ ಎದುರು ಭಾಗದಲ್ಲಿ ಮಾತಂಗಿ ದೇವಿಯ ದೇವಸ್ಥಾನವಿದೆ.

2.ಆಂಜನೇಯ ಸ್ವಾಮಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿ ದಕ್ಷಿಣಾಭಿಮುಖವಾಗಿ ನಿರ್ಮಾಣ ಮಾಡಲಾಗಿರುವ ಈ ದೇವಾಲಯದ ಗರ್ಭಗೃಹದಲ್ಲಿ ಆಂಜನೇಯ ಸ್ವಾಮಿಯನ್ನು ಪೂಜಿಸಲಾಗುತ್ತದೆ.
ಗರ್ಭಗೃಹ, ಸಭಾಮಂಟಪಗಳಿರುವ ದೇವಾಲಯ ಇದಾಗಿದೆ.
ಪ್ರತಿ ವರ್ಷ ರಾಮನವಮಿಯ ಸಮಯದಲ್ಲಿ ರಥೋತ್ಸವ ನಡೆಸಲಾಗುತ್ತದೆ.

3. ಬೀರಲಿಂಗೇಶ್ವರಸ್ವಾಮಿ ದೇವಸ್ಥಾನ*
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಈ ದೇವರ ದೇವಾಲಯವನ್ನು ನಿರ್ಮಿಸಲಾಗಿದೆ.
ಇದರ ಹೊರಭಾಗದಲ್ಲಿ ಮುಷ್ಟೂರು ಲಿಂಗೇಶ್ವರ ದೇವಾಲಯವಿದೆ. ಮುಸ್ಟೂರು ಮಠದ ಮೂಲ ಮಠವು ಜಗಳೂರು ತಾಲೂಕು, ಮುಸ್ಟೂರು ಗ್ರಾಮದಲ್ಲಿದೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಇಲ್ಲಿ ಸಾಮೂಹಿಕ ಪರೇವು ಆಚರಣೆಯನ್ನು ನಡೆಸಲಾಗುತ್ತದೆ.
ಇದರ ಎದುರು ಭಾಗದಲ್ಲಿ ಸಿದ್ಧಾರೂಢ ಮಠವಿದೆ.

4.ದುರ್ಗಾಂಬಿಕಾ ದೇವಿ ದೇವಸ್ಥಾನ ಗ್ರಾಮದ ಮಧ್ಯ ಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

5.ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿ ಈ ದೇವಾಲಯವಿದ್ದು, ದೇವಾಲಯದ ಗರ್ಭಗೃಹದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ಗಂಗಮಾಳಮ್ಮ, ತುಳಸಿಮಾಳಮ್ಮ ದೇವರನ್ನು ಪೂಜಿಸಲಾಗುತ್ತದೆ. ಸಭಾಮಂಟಪದಲ್ಲಿ ಈ ದೇವರ ಉತ್ಸವ ಮೂರ್ತಿಗಳನ್ನು ಪೂಜಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಶಿವರಾತ್ರಿ ಸಮಯದಲ್ಲಿ ಗೊರವಪ್ಪಗಳಿಂದ ದೇವಾಲಯದ ಮುಂಭಾಗದಲ್ಲಿ ದೋಣಿ ಪೂಜೆಯನ್ನು ನೆರವೇರಿಸಲಾಗುತ್ತದೆ.
ಇದರ ಜೊತೆಗೆ ಗ್ರಾಮದಲ್ಲಿ ಗೌರಸಂದ್ರ ಮಾರಮ್ಮ ದೇವಾಲಯವಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...