Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೃತನ ತಾಯಿ ಪ್ರತಿಕೂಲ ಸಾಕ್ಷಿಯೇ? ದರ್ಶನ್‌ ಪ್ರಕರಣದಲ್ಲಿ ಹೈಕೋರ್ಟ್‌ ಮಹತ್ವದ ಪ್ರಶ್ನೆ

---Advertisement---

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ದಿನದಿಂದ ದಿನಕ್ಕೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ಮೃತ ರೇಣುಕಾಸ್ವಾಮಿ ಅವರ ತಾಯಿ ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಿ ಪಾಟೀಸವಾಲಿಗೆ ಅವಕಾಶ ನೀಡುವಂತೆ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದೆ. ಅರ್ಜಿಗೆ ಸಂಬಂಧಿಸಿದ ಆದೇಶವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಕಾಯ್ದಿರಿಸಿದ್ದಾರೆ.

ಇಂದು (ಆಗಸ್ಟ್‌ 12) ನಡೆದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಪರ ಎಸ್‌ಪಿಪಿ ಪ್ರಸನ್ನ ಕುಮಾರ್‌ ವಾದ ಮಂಡಿಸಿದರು. ರೇಣುಕಾಸ್ವಾಮಿ ಅವರ ಮೊಬೈಲ್‌ನಿಂದ ಅವರ ತಾಯಿಯ ಮೊಬೈಲ್‌ಗೆ ಜೂನ್‌ 8, 2024ರಂದು ಎರಡು ಕರೆಗಳು ಬಂದಿರುವ ದಾಖಲೆಗಳಿವೆ. ಒಂದು ಕರೆ 27 ಸೆಕೆಂಡ್‌ ಹಾಗೂ ಮತ್ತೊಂದು 47 ಸೆಕೆಂಡ್‌ಗಳ ಕಾಲ ನಡೆದಿರುವುದು ದಾಖಲೆಗಳಿಂದ ತಿಳಿದುಬರುತ್ತದೆ ಎಂದು ವಾದಿಸಿದರು.ಆದರೆ ರತ್ನಪ್ರಭಾ ಅವರು ತಮ್ಮ ಹೇಳಿಕೆಯಲ್ಲಿ ರೇಣುಕಾಸ್ವಾಮಿ ಅವರಿಂದ ಯಾವುದೇ ಕರೆ ಬಂದಿಲ್ಲ ಎಂದು ತಿಳಿಸಿದ್ದಾರೆ. ದಾಖಲೆಗಳಲ್ಲಿರುವ ಮಾಹಿತಿಗೆ ವಿರುದ್ಧವಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಿ ಪಾಟೀಸವಾಲು ನಡೆಸಲು ಅವಕಾಶ ನೀಡಬೇಕು ಎಂದು ಪ್ರಾಸಿಕ್ಯೂಷನ್‌ ಮನವಿ ಮಾಡಿದೆ.

ಪ್ರಾಸಿಕ್ಯೂಷನ್‌ ವಾದಕ್ಕೆ ಪ್ರತಿಯಾಗಿ ದರ್ಶನ್‌ ಪರ ಹಿರಿಯ ವಕೀಲ ಹಷ್ಮತ್‌ ಪಾಷಾ ವಾದ ಮಂಡಿಸಿದರು. ರತ್ನಪ್ರಭಾ ಅವರು ಪ್ರತಿಕೂಲ ಸಾಕ್ಷಿಯಲ್ಲ. ಮುಖ್ಯ ವಿಚಾರಣೆಯಲ್ಲಿ ಅವರು ಪ್ರಾಸಿಕ್ಯೂಷನ್‌ ಪರವೇ ಹೇಳಿಕೆ ನೀಡಿದ್ದಾರೆ. ಪಾಟೀಸವಾಲಿನ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಮರು ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಯಾವುದೇ ಸ್ಪಷ್ಟನೆ ಕೇಳಿಲ್ಲ. ಹೀಗಾಗಿ ಮತ್ತೆ ಪಾಟೀಸವಾಲಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, “ಇದು ಯಾರೋ ಅಪರಿಚಿತ ವ್ಯಕ್ತಿ ನೀಡಿರುವ ಹೇಳಿಕೆಯಲ್ಲ; ಮೃತನ ತಾಯಿ ನೀಡಿರುವ ಹೇಳಿಕೆ. ಅವರನ್ನು ಪ್ರತಿಕೂಲ ಸಾಕ್ಷಿಯೆಂದು ಪರಿಗಣಿಸಬೇಕೇ?” ಎಂದು ಪ್ರಶ್ನಿಸಿದರು.ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಕಾಯ್ದಿರಿಸಿದೆ.

ಇದೇ ವೇಳೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ದರ್ಶನ್‌ ಆಪ್ತ ಪ್ರದೋಶ್‌ ಅವರನ್ನು ಮಾಫಿ ಸಾಕ್ಷಿ ಅಥವಾ ಅಪ್ರೂವರ್‌ ಆಗಿ ಪರಿಗಣಿಸುವ ಪ್ರಕ್ರಿಯೆ ಮುಂದುವರಿದಿದ್ದು, ಆಗಸ್ಟ್‌ 18ರಂದು ಅವರು ತಮ್ಮ ಹೇಳಿಕೆಯನ್ನು ದಾಖಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೆ, ಪ್ರಕರಣದ ಮುಂದಿನ ಕೆಲವು ಸಾಕ್ಷಿಗಳ ವಿಚಾರಣೆ ವೇಳೆ ನಟ ದರ್ಶನ್‌ ಖುದ್ದು ನ್ಯಾಯಾಲಯಕ್ಕೆ ಹಾಜರಾಗಲು ಅನುಮತಿ ನೀಡುವಂತೆ ಅವರ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯೂ ನಡೆಯಬೇಕಿದೆ.ಪ್ರಕರಣದ 12ನೇ ಆರೋಪಿಯೊಬ್ಬರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯೂ ಶೀಘ್ರದಲ್ಲೇ ನಡೆಯುವ ಸಾಧ್ಯತೆಯಿದೆ. ಹೀಗಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯದ ವಿಚಾರಣೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now