ಬೆಂಗಳೂರು: ಭೀಮನ ಅಮಾವಾಸ್ಯೆ ಎಂದರೆ ಕನ್ನಡಿಗರಿಗೆ 26 ವರ್ಷಗಳ ಹಿಂದಿನ ಆ ಕರಾಳ ಘಟನೆಯ ನೆನಪು ಮತ್ತೆ ಮೂಡುತ್ತದೆ. 2000ರ ಜುಲೈ 30ರಂದು, ಭೀಮನ ಅಮಾವಾಸ್ಯೆಯ ದಿನ ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಗಾಜನೂರಿನಲ್ಲಿರುವ ಅವರ ನಿವಾಸದಿಂದ ಅಪಹರಿಸಿದ್ದ. ನಂತರ ಬರೋಬ್ಬರಿ 108 ದಿನಗಳ ಕಾಲ ಅವರನ್ನು ಕಾಡಿನಲ್ಲಿ ತನ್ನ ವಶದಲ್ಲಿಟ್ಟುಕೊಂಡಿದ್ದ ವೀರಪ್ಪನ್, ಅಂತಿಮವಾಗಿ ರಾಜ್‌ಕುಮಾರ್ ಅವರನ್ನು ಬಿಡುಗಡೆ ಮಾಡಿದ್ದ.ಈ 108 ದಿನಗಳು ರಾಜ್‌ಕುಮಾರ್ ಕುಟುಂಬ ಮಾತ್ರವಲ್ಲದೆ, ಇಡೀ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಜನರಲ್ಲಿ ಆತಂಕ ಮತ್ತು ನೋವನ್ನು ಸೃಷ್ಟಿಸಿತ್ತು. ಸರ್ಕಾರ ರಾಜ್‌ಕುಮಾರ್ ಅವರನ್ನು ಸುರಕ್ಷಿತವಾಗಿ ಕರೆತರಲು ನಿರಂತರ ಪ್ರಯತ್ನ ನಡೆಸಿತ್ತು.
ವರದಿಗಳ ಪ್ರಕಾರ, ವೀರಪ್ಪನ್‌ನ ಮೊದಲ ಗುರಿ ಡಾ. ರಾಜ್‌ಕುಮಾರ್ ಆಗಿರಲಿಲ್ಲ. ತಮಿಳು ನಟ ರಜನಿಕಾಂತ್ ಅವರನ್ನು ಅಪಹರಿಸುವ ಯೋಜನೆ ರೂಪಿಸಿದ್ದ ಎನ್ನಲಾಗಿತ್ತು. ಆದರೆ ಭದ್ರತಾ ಕಾರಣಗಳಿಂದ ಆ ಯೋಜನೆ ಕೈಬಿಡಲಾಯಿತು.ನಂತರ ಅಂದಿನ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಪುತ್ರ ಸ್ಟಾಲಿನ್ ಅವರನ್ನು ಅಪಹರಿಸುವ ಬಗ್ಗೆಯೂ ಚಿಂತನೆ ನಡೆಸಿದ್ದ ಎನ್ನಲಾಗಿದೆ. ಆದರೆ ಅವರ ಸುತ್ತಲಿದ್ದ ಬಿಗಿ ಭದ್ರತೆಯಿಂದಾಗಿ ಆ ಯೋಜನೆಯೂ ಕೈಗೂಡಲಿಲ್ಲ.
ಕೊನೆಗೆ ವೀರಪ್ಪನ್‌ನ ಗಮನ ಡಾ. ರಾಜ್‌ಕುಮಾರ್ ಅವರತ್ತ ತಿರುಗಿತು. ವೀರಪ್ಪನ್‌ನ ಅಡಗುತಾಣದಿಂದ ದೊಡ್ಡ ಗಾಜನೂರಿನಲ್ಲಿದ್ದ ರಾಜ್‌ಕುಮಾರ್ ಅವರ ಮನೆ ಹೆಚ್ಚು ದೂರದಲ್ಲಿರಲಿಲ್ಲ. ಹೀಗಾಗಿ ಅಪಹರಣಕ್ಕೆ ಇದು ಸುಲಭ ಗುರಿ ಎಂದು ಆತ ಭಾವಿಸಿದ್ದ ಎನ್ನಲಾಗಿದೆ.
ತಮ್ಮ ಊರಿನಲ್ಲಿ ಕೊರೆಸಿದ್ದ ಬೋರ್‌ವೆಲ್‌ನಲ್ಲಿ ನೀರು ಬಂದಿರುವ ಸಂತಸದಲ್ಲಿ ಡಾ. ರಾಜ್‌ಕುಮಾರ್ ದೊಡ್ಡ ಗಾಜನೂರಿಗೆ ತೆರಳಿದ್ದರು. ಜುಲೈ 30ರ ರಾತ್ರಿ ಊಟ ಮುಗಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಬಂದೂಕು ಹಿಡಿದ ವೀರಪ್ಪನ್ ಸಹಚರರು ಮನೆಗೆ ನುಗ್ಗಿದ್ದರು.ಆ ಸಂದರ್ಭದಲ್ಲಿ ಮನೆಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್, ಅಳಿಯ ಗೋವಿಂದರಾಜು, ಸಹಾಯಕ ನಾಗಪ್ಪ, ಸಂಬಂಧಿ ನಾಗೇಶ್, ಚಾಲಕ ಸೇರಿದಂತೆ ಕೆಲವರು ಇದ್ದರು.
ಕೆಲವೇ ನಿಮಿಷಗಳಲ್ಲಿ ವೀರಪ್ಪನ್ ಕೂಡ ಮನೆ ಪ್ರವೇಶಿಸಿ ರಾಜ್‌ಕುಮಾರ್ ಅವರನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದ್ದ.
ವೀರಪ್ಪನ್ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಒಂದು ಕ್ಯಾಸೆಟ್ ನೀಡಿ, ಅದನ್ನು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ತಲುಪಿಸುವಂತೆ ಸೂಚಿಸಿದ್ದ ಎನ್ನಲಾಗಿದೆ. ಜೊತೆಗೆ ರಾಜ್‌ಕುಮಾರ್ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದ.
ಪರಿಸ್ಥಿತಿಯ ಗಂಭೀರತೆ ಅರಿತ ಪಾರ್ವತಮ್ಮ ಅವರು ರಾಜ್‌ಕುಮಾರ್ ಅವರಿಗೆ ನೆರವಾಗಲೆಂದು ಗೋವಿಂದರಾಜು, ನಾಗಪ್ಪ ಹಾಗೂ ನಾಗೇಶ್ ಅವರನ್ನು ಅವರೊಂದಿಗೆ ಕಳುಹಿಸಿದ್ದರು.
ವೀರಪ್ಪನ್ ಚಾಲಕನನ್ನೂ ಕರೆದೊಯ್ಯಲು ಮುಂದಾಗಿದ್ದ. ಆದರೆ ಬೆಂಗಳೂರಿಗೆ ತೆರಳಲು ಚಾಲಕ ಅಗತ್ಯವಿದ್ದ ಹಿನ್ನೆಲೆಯಲ್ಲಿ ಪಾರ್ವತಮ್ಮ ಅವರ ಮನವಿಯ ಮೇರೆಗೆ ಚಾಲಕನನ್ನು ಅಲ್ಲಿಯೇ ಬಿಟ್ಟು ಹೋಗಿದ್ದ ಎನ್ನಲಾಗಿದೆ.ರಾಜ್‌ಕುಮಾರ್ ಅವರನ್ನು ಕರೆದೊಯ್ದ ಬಳಿಕ ಪಾರ್ವತಮ್ಮ ಅವರು ಚಾಲಕನೊಂದಿಗೆ ಗಾಜನೂರಿನಿಂದ ಬೆಂಗಳೂರಿನತ್ತ ಪ್ರಯಾಣ ಆರಂಭಿಸಿದರು. ಮಾರ್ಗಮಧ್ಯೆ ಮೈಸೂರಿನಲ್ಲಿದ್ದ ಪರಿಚಿತ ಜ್ಯೋತಿಷಿ ಬಾಷ್ಯಂಸ್ವಾಮಿ ಅವರ ಮನೆಗೆ ತೆರಳಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದರು.
ಅಲ್ಲಿಂದ ನೇರವಾಗಿ ಬೆಂಗಳೂರಿನಲ್ಲಿದ್ದ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿವಾಸಕ್ಕೆ ತೆರಳಿದರು. ಬೆಳಗಿನ ಜಾವ ಸುಮಾರು 3 ಗಂಟೆಗೆ ಸಿಎಂ ಅವರನ್ನು ಭೇಟಿ ಮಾಡಿ ನಡೆದ ಘಟನೆಯ ಸಂಪೂರ್ಣ ವಿವರ ನೀಡಿದರು. ವೀರಪ್ಪನ್ ನೀಡಿದ್ದ ಕ್ಯಾಸೆಟ್‌ನ್ನೂ ಹಸ್ತಾಂತರಿಸಿದರು.

ಕ್ಯಾಸೆಟ್ ಸ್ವೀಕರಿಸಿದ ಬಳಿಕ ಎಸ್.ಎಂ. ಕೃಷ್ಣ ಅವರು ಹಿರಿಯ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ತುರ್ತು ಸಭೆ ನಡೆಸಿದರು. ರಾಜ್‌ಕುಮಾರ್ ಅವರ ಸುರಕ್ಷಿತ ಬಿಡುಗಡೆಗಾಗಿ ಸರ್ಕಾರ ಸತತ ಪ್ರಯತ್ನಗಳನ್ನು ಆರಂಭಿಸಿತು.ಅಂತಿಮವಾಗಿ ಬರೋಬ್ಬರಿ 108 ದಿನಗಳ ಬಳಿಕ ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಬಿಡುಗಡೆ ಮಾಡಿದ್ದ.26 ವರ್ಷಗಳ ಬಳಿಕವೂ ಆ ಘಟನೆ ಕನ್ನಡಿಗರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಭೀಮನ ಅಮಾವಾಸ್ಯೆ ಬಂದಾಗಲೆಲ್ಲಾ ಡಾ. ರಾಜ್‌ಕುಮಾರ್ ಅವರ ಅಪಹರಣದ ಆ ಕರಾಳ ರಾತ್ರಿ ಮತ್ತು 108 ದಿನಗಳ ಆತಂಕದ ದಿನಗಳು ಮತ್ತೆ ನೆನಪಾಗುತ್ತವೆ.










