ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 : ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಇಂದು (ಸೆ. 28, ಸೋಮವಾರ) ನಗರದ ಚಂದ್ರವಳ್ಳಿ ಕೆರೆ ಹತ್ತಿರ ಹಾಗೂ ತಾಲೂಕಿನ ಗಂಜಿಗಟ್ಟೆ ವಿದ್ಯಾರ್ಥಿಗಳೊಂದಿಗೆ ‘ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ’ (ಎಐಡಿಎಸ್ಓ) ನೇತೃತ್ವದಲ್ಲಿ ಆಚರಿಸಲಾಯಿತು.
ಬೆಳಿಗ್ಗೆ ವಾಯುವಿಹಾರಕ್ಕೆ ಬಂದಿದ್ದ ಸಾರ್ವಜನಿಕರು ಅತ್ಯಂತ ಗೌರವದಿಂದ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಶಾಲಾ-ಕಾಲೇಜುಗಳಲ್ಲಿ ಹಾಗೂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಭಗತ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.
ಈ ವೇಳೆ ಎಐಡಿಎಸ್ಓ ಜಿಲ್ಲಾ ಸಂಚಾಲಕರಾದ ಕೆ. ಈರಣ್ಣ ಅವರು ಮಾತನಾಡಿ, “ಭಗತ್ ಸಿಂಗ್ ಎಂದರೆ ಇಂದಿಗೂ ಎಲ್ಲರ ಮನದಲ್ಲಿ ಮಿಡಿಯುತ್ತಿರುವ ನವಚೇತನ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ನಡೆದಾಗ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಕೊನೆಯ ಉಸಿರಿರುವವರೆಗೆ ಹೋರಾಡುವೆ ಎಂದು ಅವರು ಪಣತೊಟ್ಟಿದ್ದರು. ಅದರಂತೆ 23ನೇ ವಯಸ್ಸಿನಲ್ಲೇ ಕೊನೆಯ ಉಸಿರಿರುವವರೆಗೂ ಹೋರಾಡಿ, ನಗುನಗುತ್ತಾ ಗಲ್ಲುಗಂಬವೇರಿದ ಧೀರ ಹುತಾತ್ಮ ಭಗತ್ ಸಿಂಗ್” ಎಂದು ಸ್ಮರಿಸಿದರು.
“ರಾಜಿ ರಹಿತ ಕ್ರಾಂತಿಕಾರಿ ವಿಚಾರಗಳನ್ನು ಇಟ್ಟುಕೊಂಡು ಸಮಾಜವಾದಿ ಭಾರತವನ್ನು ನಿರ್ಮಿಸಲು ಅವರು ಹೆಚ್.ಎಸ್.ಆರ್.ಎ (HSRA) ಸಂಘಟನೆಯನ್ನು ಮರುನಾಮಕರಣ ಮಾಡಿದರು. ಕೇವಲ ದೇಶಕ್ಕೆ ಸ್ವಾತಂತ್ರ್ಯ ಬಂದರೆ ಸಾಲದು, ಇಲ್ಲಿನ ಮೂಲಭೂತ ಸಮಸ್ಯೆಗಳಿಗೆಲ್ಲಾ ಪರಿಹಾರವೆಂದರೆ ಸಮಾಜವಾದಿ ಭಾರತದ ನಿರ್ಮಾಣ ಎಂಬುದನ್ನು ಪ್ರತಿಪಾದಿಸಿದರು. ಸಮಾಜವಾದಿ ವಿಚಾರಗಳನ್ನು ಎಲ್ಲೆಡೆ ಪ್ರಚುರಪಡಿಸಿದ ಅವರು, ಜೈಲಿನಲ್ಲಿದ್ದಾಗಲೂ ತಮ್ಮ ಅವಿರತ ಹೋರಾಟವನ್ನು ಬಿಡಲಿಲ್ಲ. ಜೈಲಿನಲ್ಲಿದ್ದಾಗ 300ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿ ಜ್ಞಾನದಾಹವನ್ನು ತಣಿಸಿಕೊಂಡಿದ್ದ ಅವರು, ಸ್ವಾತಂತ್ರ್ಯದ ನಂತರ ದೇಶದಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಹಾಗೂ ಬಡತನದಿಂದ ನರಳಬಾರದು ಎಂದು ಬಯಸಿದ್ದರು” ಎಂದರು.
ಮುಂದುವರಿದು ಮಾತನಾಡಿದ ಅವರು, “ದೇಶಕ್ಕೆ ಸ್ವಾತಂತ್ರ್ಯ ದೊರೆತು 79 ವರ್ಷಗಳು ಕಳೆದರೂ ನಮ್ಮ ದೇಶದಲ್ಲಿ ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಶಿಕ್ಷಣವನ್ನು ಖಾಸಗೀಕರಣಗೊಳಿಸಲು ಸರ್ಕಾರಗಳು ಮುಂದಾಗಿದ್ದು, ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ. ನಮ್ಮ ದೇಶದಲ್ಲಿ ಈ ರೀತಿಯ ಅಸಮಾನತೆ ತೊಲಗಿ, ಭಗತ್ ಸಿಂಗ್ ಅವರ ಕನಸಿನ ಸಮಾಜವಾದಿ ಭಾರತವನ್ನು ನಿರ್ಮಾಣ ಮಾಡಲು ನಾವೆಲ್ಲರೂ ಸಂಕಲ್ಪ ತೊಡಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರಾದ ಅನಿಲ್, ಸೋಮಶೇಖರ್ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.











