ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ಚಿತ್ರದುರ್ಗ ಜಿಲ್ಲೆಯಲ್ಲಿರುವ ಜೋಗಿಮಟ್ಟಿ ಅರಣ್ಯ ಪ್ರದೇಶವು ಹಲವು ಕೌತುಕಗಳ ಆಗರವಾಗಿದೆ. ಇಲ್ಲಿರುವ ಹತ್ತಾರು ಸ್ಥಳಗಳಲ್ಲಿ ನೈಸರ್ಗಿಕವಾಗಿ ಇಂದಿಗೂ ನೀರು ವಸರುವ ಸ್ಥಳಗಳಿವೆ. ಇವನ್ನು ಸ್ಥಳೀಯರು ವಜ್ರ ಎಂದು ಕರೆಯುತ್ತಾರೆ.ಇಂತಹ ಒಂದು ಸ್ಥಳವೇ ಭೂತಪ್ಪನ ವಜ್ರ. ಇಲ್ಲಿರುವ ಭೂತಪ್ಪ ಸ್ವಾಮಿ ದೇವಾಲಯದಿಂದ ಈ ಹೆಸರು ಬಂದಿದೆ. ಭೂತಪ್ಪನ ವಜ್ರ ಸ್ಥಳವು ಜೋಗಿಮಟ್ಟಿಯ ಗುಡ್ಡ ಸಾಲುಗಳಲ್ಲಿ ಬರುವ ಒಂದು ಧಾರ್ಮಿಕ ಕ್ಷೇತ್ರವಾಗಿದೆ.
ಈ ಸ್ಥಳವು ಚಿತ್ರದುರ್ಗ-ಇಂಗಳ್ ದಾಳ್- ಕುರುಮರಡಿಕೆರೆ- ಭೂತಪ್ಪನ ವಜ್ರ ಮಾರ್ಗದಲ್ಲಿ ಚಿತ್ರದುರ್ಗದಿಂದ 16 ಕಿಲೋಮೀಟರ್ ದೂರ ಹಾಗೂ ಕುರುಮರಡಿಕೆರೆಯಿಂದ ವಾಯುವ್ಯಕ್ಕೆ ಮೂರು ಕಿಲೋಮೀಟರ್ ದೂರವಿದೆ.
ಭೂತಪ್ಪನ ವಜ್ರವು ಐತಿಹಾಸಿಕ ,ಧಾರ್ಮಿಕ , ಆಧ್ಯಾತ್ಮಿಕ ಸ್ಥಳವಾಗಿದೆ. ಯಾವುದೋ ಮಲೆನಾಡು, ಪಶ್ಚಿಮ ಘಟ್ಟದ ತಾಣದಂತೆ ಕಾಣುವ ಇಲ್ಲಿ ಪರಿಸರವು ಮಳೆಯ ನಂತರ ಹಸಿರಿನ ವೈಭವ ಶುರುವಾಗಿ ಹಿಂಗಾರು ಮಳೆಗೆ ಮತ್ತಷ್ಟು ಹಸಿರಿನಿಂದ ಹಿಗ್ಗುತ್ತದೆ. ಈ ಅರಣ್ಯವು ಬಯಲು ಸೀಮೆಯ ಉಷ್ಣವಲಯದ ಕಾಡುಗಳಾಗಿವೆ.
ಕುರುಚಲು ಕಾಡು ಗಿಡಗಳಿರುವ ಅರಣ್ಯ ಇದಾಗಿದೆ. ಅರಣ್ಯ ಇಲಾಖೆಯು ಇದನ್ನು ಸಂರಕ್ಷಿತ ತಾಣ ಮಾಡಿರುವುದರಿಂದ ಇಲ್ಲಿ ಮಾನವನ ಹಸ್ತಕ್ಷೇಪ ಅಷ್ಟಾಗಿ ಇಲ್ಲ.
ಹತ್ತಾರು ಕಿ.ಮೀ.ಚಾಚಿರುವ ಗಿರಿಸಾಲುಗಳು ಮಲೆನಾಡಿನ ಸ್ಥಳಗಳಂತೆ ಕಾಣಬಹುದು. ಕಣ್ಣಿಗೆ ಸುಂದರ ಚಿತ್ರಣ, ಮನಸ್ಸಿಗೆ ಆನಂದ ಉಂಟುಮಾಡುತ್ತದೆ. ಇದರ ಆಗ್ನೇಯ ದಿಕ್ಕಿಗೆ ಜೋಗಿಮಟ್ಟಿಯ ವೀಕ್ಷಣಾಲಯವಿದೆ. ಇಲ್ಲಿಗೆ ತಲುಪಲು ಕುರುಮರಡಿಕೆರೆ ಗ್ರಾಮದಿಂದ ಹೋಗಬೇಕು. ಕುರುಮರಡಿಕೆರೆವರೆಗೂ ಟಾರ್ ರಸ್ತೆಯಿದ್ದು ಮುಂದೆ ಭೂತಪ್ಪನ ವಜ್ರಕ್ಕೆ ಸಂಪೂರ್ಣ ಕಲ್ಲು ಮಣ್ಣಿನಿಂದ ಕೂಡಿರುವ ಕಚ್ಚಾ ಕಾಡಿನ ರಸ್ತೆ ಇದೆ. ದ್ವಿಚಕ್ರ, ಲಘುವಾಹನ ಮಾತ್ರ ಸಾಗಬಹುದಾದ ದಾರಿಯಿದೆ.ಸಂಪೂರ್ಣ ಅರಣ್ಯಪ್ರದೇಶದಲ್ಲಿ ಬೆಟ್ಟ-ಗುಡ್ಡಗಳ ನಡುವೆ ಸಾಗುವಾಗ ಹಳ್ಳವನ್ನು ದಾಟಿ ಮುಂದೆ ಹೋಗಬೇಕು. ವಾಹನದಲ್ಲಿ ಹೋಗುವುದು ಸಾಧ್ಯವಿದ್ದರೂ ನಾವು ನಡೆದುಕೊಂಡು ಹೋದರೆ ಪ್ರಕೃತಿಯ ಸೌಂದರ್ಯ ಸವಿಯಬಹುದು. ಅದರಲ್ಲೂ 1-2 ಜನರು ಹೋಗುವ ಬದಲು 4-5 ಜನರ ತಂಡದಲ್ಲಿ ಹೋಗುವುದು ಅತ್ಯುತ್ತಮ. ಈ ತಾಣವು ಪರಿಸರ ಪ್ರೇಮಿಗಳಿಗೆ ಹಾಗೂ ಭಕ್ತಾಧಿಗಳಿಗೆ ಅಚ್ಚುಮೆಚ್ಚಿನ ಜಾಗವಾಗಿದೆ. ಬಹಳಷ್ಟು ಜನರಿಗೆ ಅಪರಿಚಿತವಾಗಿರುವ ಈ ಸುಂದರ ತಾಣ ಇಲ್ಲಿನ ಸ್ಥಳೀಯರು, ಭೂತಪ್ಪನ ಭಕ್ತರು ಹಾಗೂ ಕೆಲವರಿಗೆ ಮಾತ್ರ ಪರಿಚಯವಿದೆ. ಹಾಗಾಗಿ ಇಲ್ಲಿಗೆ ಸುತ್ತಮುತ್ತಲ ಗ್ರಾಮಗಳ ಜನರು ಹಾಗೂ ಭಕ್ತರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕಾಲ್ನಡಿಗೆಯಲ್ಲಿ ನಿಸರ್ಗದ ನೈಜ ಸೌಂದರ್ಯವನ್ನು ಸವಿಯಬಹುದು .ಅರಣ್ಯ ಇಲಾಖೆಯ ಸುಪರ್ದಿನಲ್ಲಿ ಇರುವ ಕಾರಣಕ್ಕೆ ಇಲ್ಲಿ ಟಾರ್ ರಸ್ತೆಯನ್ನು ಮಾಡುವಂತಿಲ್ಲ. ಹಾಗಾಗಿ ಇರುವ ಕಚ್ಚಾ ಮಣ್ಣು ಕಲ್ಲುಗಳ ರಸ್ತೆಯಲ್ಲಿ ನಾವು ಸಾಗಬೇಕು.
ಭೂತಪ್ಪನ ಮಂದಿರ:
ಇಲ್ಲಿರುವ ಭೂತಪ್ಪನ ಮಂದಿರವು ನಿಸರ್ಗದಲ್ಲಿ ದೇವರಿದ್ದಾನೆ ಎಂಬುದನ್ನು ನಿರೂಪಿಸುವಂತಿದೆ. ಇಲ್ಲಿಗೆ ಸಂಜೆ ಅಥವಾ ಬೆಳಿಗ್ಗೆಯ ಸಮಯ ಬಂದರೆ ಮತ್ತಷ್ಟು ಸುಂದರತೆ ನೋಡಬಹುದು.
ನೀರ ಝರಿ:
ಭೂತಪ್ಪನ ಮಂದಿರದ ಭಾಗದಲ್ಲಿ ಪುಟ್ಟ ಝರಿಯಿದ್ದು ಅದರ ನೀರು ಅತ್ಯಂತ ತಣ್ಣನೆಯ ಸಿಹಿ ನೀರಾಗಿದ್ದು ಚರ್ಮ ರೋಗಗಳನ್ನು ಗುಣಪಡಿಸುತ್ತದೆ ಎಂಬ ನಂಬಿಕೆ ಭಕ್ತರದು.
ಇದರ ಪಕ್ಕದಲ್ಲಿಯೇ ಗಂಗೆ ಬಾವಿ ಇದ್ದು ಇದು ಪುರಾತನಕಾಲದ್ದು ಎಂದು ಹೇಳಲಾಗುತ್ತದೆ. ಇಲ್ಲಿರುವ ಗಂಗೆಯು ಎಂತಹ ಬರಗಾಲದಲ್ಲೂ ಬತ್ತಿದ ನಿದರ್ಶನಗಳಿಲ್ಲವಂತೆ. ಗಂಗಾ ಕೊಳದಲ್ಲಿ ನೀರು ಸದಾ ಇದ್ದೇ ಇರುತ್ತದೆ. ಈ ಗಂಗೆ ಕೊಳಕ್ಕೆ ಪೂಜೆ ಮಾಡಿ ಬೇಡಿಕೊಂಡರೆ ಮನದ ಆಸೆ ಈಡೇರಿಸುವುದು ಎಂಬ ನಂಬಿಕೆ ಇಲ್ಲಿನ ಇಲ್ಲಿಗೆ ಭೇಟಿಕೊಡುವ ಭಕ್ತರದು. ಬಿರುಬೇಸಿಗೆಯಲ್ಲಿ ಬಿಸಿಲಿನ ಝಳ ಇಲ್ಲಿ ತಲುಪಲು ಸಾಧ್ಯವಿಲ್ಲದಷ್ಟು ದಟ್ಟವಾಗಿ ಮರ-ಗಿಡಗಳು ಚಾಚಿಕೊಂಡಿವೆ.
ಭಕ್ತರ ತಾಣ:
ಇಲ್ಲಿನ ಭೂತಪ್ಪ ದೇವರು ಇಷ್ಟಾರ್ಥಗಳನ್ನು ನೆರವೇರಿಸುವ ದೈವವೆಂದು ಭಕ್ತರು ನಂಬಿದ್ದಾರೆ. ಶ್ರಾವಣ ಮಾಸ ಹಾಗೂ ಕಾರ್ತಿಕ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆ ಪ್ರಾರ್ಥನೆ ನಡೆಯುತ್ತದೆ. ಬೆಳಿಗ್ಗೆ 7ರ ನಂತರ ಹೋಗಿ ಸಂಜೆ 6ರ ಒಳಗೆ ವಾಪಸ್ ಬರಬೇಕು.

















