Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗದ ಧವಳಪ್ಪನ/ಧವಳಗಿರಿ ಗುಡ್ಡದ ಚಾರಣ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್ : ಚಿತ್ರದುರ್ಗ ನಗರದ ನೈರುತ್ಯ ದಿಕ್ಕಿನಲ್ಲಿರುವ ಚಂದ್ರವಳ್ಳಿಯ ದಕ್ಷಿಣದ ಕಡೆಗೆ ಛತ್ರಿಯಾಕಾರದ ಕಾಣುವ ದೊಡ್ಡ ಗುಡ್ಡವೇ ಧವಳಗಿರಿ/ಧವಳಪ್ಪನ ಗುಡ್ಡ. ಇದು 3285 ಅಡಿ ಎತ್ತರವಿದ್ದು, ತಾಲೂಕಿನಲ್ಲಿ 5 ನೇ ಎತ್ತರದ ಬೆಟ್ಟವಾಗಿದೆ. ಹಿಂದೆ ಇದೊಂದು ಪ್ರಮುಖ ಶೈವ ಕ್ಷೇತ್ರವಾಗಿತ್ತು.ಇಲ್ಲಿರುವ ಧವಳೇಶ್ವರ ಶಿವಲಿಂಗದಿಂದ ಈ ಗುಡ್ಡಕ್ಕೆ ಧವಳಪ್ಪನ ಗುಡ್ಡ ಎಂದು ಹೆಸರಾಗಿದೆ.

 

ಧವಳಪ್ಪನ ಗುಡ್ಡದ ಕೆಳಭಾಗದ ಶಾಸನದಲ್ಲಿ (14 ನೇ ಶತಮಾನ) ಶಿವಭಕ್ತರಲ್ಲದವರು ಹೋಗಬಾರದು ಎಂಬ ಸಾಲುಗಳಿದ್ದು,ದಕ್ಷಿಣದ ಪ್ರವೇಶ ದಾರಿಯಲ್ಲಿ ದ್ವಾರಪಾಲಕರ ಕೆತ್ತಿದ ಚಿತ್ರಗಳಿವೆ. ಬೆಟ್ಟದ ಮೇಲೆ ಗುಹೆಯೊಂದರಲ್ಲಿ ಲಿಂಗಗಳನ್ನು ಕಾಣಬಹುದು. ಬೆಟ್ಟದ ತುದಿಯಲ್ಲಿನ ಬಂಡೆಯ ಮೇಲೂ ಹತ್ತಾರು ಕೆತ್ತಿದ ಶಿವಲಿಂಗಗಳಿವೆ. ಇದರಿಂದ
ಹಿಂದೆ ಇದು ಶೈವಧರ್ಮದ ನೆಲೆಯಾಗಿತ್ತು ಎಂಬುದನ್ನು ಪುಷ್ಟಿ ನೀಡುತ್ತದೆ.1801-02 ರಲ್ಲಿ ಚಿತ್ರದುರ್ಗಕ್ಕೆ ಭೇಟಿ ನೀಡುವ ಬ್ರಿಟಿಷ್ ಸರ್ಕಾರದ ಪ್ರತಿನಿಧಿ ಫ್ರಾನ್ಸಿಸ್ ಬುಕಾನನ್ ನ ಪುಸ್ತಕದಲ್ಲಿ ಈ ಗುಡ್ಡದ ಬಗ್ಗೆ ಉಲ್ಲೇಖವಿದೆ.
ದಾರಿ: ಇದಕ್ಕೆ ಚಂದ್ರವಳ್ಳಿಯಿಂದ ಪ್ರವೇಶ ಪಡೆದು ಕೆರೆಯಿಂದ ಮುಂದೆ ಸಿಗುವ ಸಸ್ಯ ಕ್ಷೇತ್ರ-ಹಳ್ಳ ದಾಟಿ ಮುಂದಕ್ಕೆ ಕಾಲುದಾರಿಯಲ್ಲಿ ಗುಡ್ಡದ ಹಾದಿಯಲ್ಲಿ ಸಾಗಬೇಕು. ಇದಕ್ಕೆ 2 ಮಾರ್ಗದಲ್ಲಿ ಹೋಗಬಹುದು. ದಕ್ಷಿಣ ಹಾಗೂ ಉತ್ತರದ ದಾರಿಗಳು.

1.ದಕ್ಷಿಣದ ದಾರಿ: ಇದು ದಕ್ಷಿಣ ಭಾಗದಿಂದ ಗುಡ್ಡಕ್ಕೆ ಏರುವ ದಾರಿಯಾಗಿದೆ. ಇದು ಅತ್ಯಂತ ಕಷ್ಟಕರವಾದ ಕಲ್ಲಿನ ಸೀಳು ಹಾದಿಯಲ್ಲಿ ಬಹಳ ಶ್ರಮಪಟ್ಟು ಹೋಗಬೇಕಾಗುತ್ತದೆ .ಹಿಂದಿನಿಂದಲೂ ಈ ದಾರಿ ಮಾತ್ರ ಇದ್ದಿತು.

2.ಉತ್ತರದ ದಾರಿ :ಇದು ಕಲ್ಲು ಮೆಟ್ಟಿಲಿನ ಸುಲಭದ ದಾರಿಯಾಗಿದೆ.
ಮೇಲ್ಭಾಗದ ತುದಿಯವರೆಗೂ ಮೆಟ್ಟಿಲು ಹಾಕಿದ್ದಾರೆ.


ಎಲ್ಲಿಯೂ ದಾರಿ ತಪ್ಪುವ ಸಾಧ್ಯತೆ ಇಲ್ಲ. ಕಾಲುದಾರಿಯಿಂದ ಮಾತ್ರವೇ ಇಲ್ಲಿಗೆ ತಲುಪಬೇಕು. ದೂರದಿಂದ ನೋಡಿದರೆ ಸಣ್ಣ ಕಲ್ಲಿನ ಗುಡ್ಡದಂತೆ ಕಂಡರೂ ಹತ್ತಿರಕ್ಕೆ ಹೋದಾಗ ಬೃಹತ್ ಬಂಡೆಯನ್ನು ನಾವು ಗಮನಿಸಬಹುದು.ಮೇಲ್ಭಾಗದಲ್ಲಿ ತಲುಪಿದಾಗ ಸುತ್ತಮುತ್ತಲಿನ ಚಿತ್ರದುರ್ಗ ನಗರ, ಚೇಳುಗುಡ್ಡ,,ಮಲ್ಲಾಪುರ ಕೆರೆ, ಜೋಗಿಮಟ್ಟಿ ಗಿರಿಸಾಲುಗಳು, ಹೊಳಲ್ಕೆರೆ ರಸ್ತೆ, ಭೀಮಸಮುದ್ರ ರಸ್ತೆಯ ಗ್ರಾಮಗಳು ನೋಡಬಹುದು. ಮೇಲಿನಿಂದ ಕಾಣುವ ಸುಂದರ ವಾತಾವರಣ ಕಣ್ಣಿಗೆ ಖುಷಿ, ಮನಸ್ಸಿಗೆ ಆನಂದ ತರುತ್ತದೆ. ಹತ್ತಿ ಬಂದ ಆಯಾಸ ಬೀಸುವ ತಂಪಾದ ಗಾಳಿಗೆ ಮರೆತು ಹೋಗುತ್ತದೆ.ಜೊತೆಗೆ ಹತ್ತಾರು ವಿವಿಧ ಜಾತಿಯ ಪಕ್ಷಿಗಳು, ಮೊಲ, ಕಾಡು ಕೋಳಿ, ನವಿಲು,ಮುಂಗುಸಿ, ಉಡ….ಚಾರಣ ಮಾಡುವಾಗ/ ಹತ್ತುವಾಗ ನೋಡಬಹುದು. ಇದಕ್ಕಾಗಿ ಬೆಳಗಿನ ಹೊತ್ತು ಹೋಗಬೇಕು. ಚಾರಣಕ್ಕೆ 3-4 ಜನರು ಹೋದರೆ ಅನುಕೂಲ. ಮರೆಯಲಾರದ ಸುಂದರ ನೆನಪು ಉಳಿಯುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...