ಚಿತ್ರದುರ್ಗ. ಜೂ.02: ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಲೋಪವಾಗದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸರಬರಾಜು ಸಿದ್ಧತೆ ಕುರಿತ ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಗಾರು ಹಂಗಾಮಿನಲ್ಲಿ ರೈತರಿಗೆ ವಿತರಿಸುವ ಬಿತ್ತನೆ ಬೀಜಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಕೃಷಿ ಇಲಾಖೆಯಿಂದ ವಿತರಿಸುವ ಬೀಜಗಳು ಮಾತ್ರವಲ್ಲದೆ, ಖಾಸಗಿ ಡೀಲರ್ಗಳ ಬಳಿ ಲಭ್ಯವಿರುವ ಬೀಜಗಳ ಗುಣಮಟ್ಟದ ಮೇಲೂ ನಿಗಾ ಇಡಬೇಕು. ಕಡ್ಡಾಯವಾಗಿ ಮೊಳಕೆ ಒಡೆಯುವ ಸಾಮಥ್ರ್ಯದ ಪರೀಕ್ಷೆ ನಡೆಸಿದ ಬಳಿಕವೇ ಬಿತ್ತನೆ ಬೀಜಗಳನ್ನು ಪೂರೈಸಬೇಕು ಎಂದು ನಿರ್ದೇಶನ ನೀಡಿದರು.
ಖಾಸಗಿ ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಹಾಗೂ ಲೂಸ್ ಸೀಡ್ಸ್ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ಕಳಪೆ ಬೀಜಗಳಿಂದ ರೈತರಿಗೆ ನಷ್ಟ ಉಂಟಾಗದಂತೆ ತಡೆಯಲು ಜಾಗೃತರಾಗಿರಬೇಕು. ಈ ಹಿಂದೆ ಕಳಪೆ ಬೀಜ ಮಾರಾಟದ ಕುರಿತು ದೂರುಗಳು ಬಂದಿದ್ದು, ಈ ಬಾರಿ ಅಂತಹ ಯಾವುದೇ ದೂರುಗಳಿಗೆ ಆಸ್ಪದ ನೀಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲೆಯ ಯಾವ ತಾಲೂಕಿನಲ್ಲಿ ಎಷ್ಟು ಪ್ರಮಾಣದ ಬಿತ್ತನೆ ಬೀಜಗಳು ಖಾಸಗಿಯವರಿಂದ ಮತ್ತು ಇಲಾಖೆಯಿಂದ ವಿತರಣೆಯಾಗುತ್ತಿವೆ. ರೈತರು ಹೊರಗಿನಿಂದ ಯಾವೆಲ್ಲಾ ಬೀಜಗಳನ್ನು ತರುತ್ತಿದ್ದಾರೆ ಎಂಬ ನಿಖರವಾದ ಅಂಕಿ-ಅಂಶಗಳ ದಾಖಲೆಯನ್ನು ಕೃಷಿ ಅಧಿಕಾರಿಗಳು ಹೊಂದಿರಬೇಕು. ಫಸಲು ಬಾರದಿದ್ದಾಗ ರೈತರು ಆಕ್ಷೇಪಣೆ ಎತ್ತಿದರೆ, ಸೂಕ್ತ ತಾಂತ್ರಿಕ ವಿವರಣೆ ನೀಡಲು ಈ ಡೇಟಾ ಸಹಕಾರಿಯಾಗಲಿದೆ. ಇದು ತಾಲ್ಲೂಕು ಕೃಷಿ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.
ಈ ಬಾರಿ ಮುಂಗಾರು ಮತ್ತು ಪೂರ್ವ ಮುಂಗಾರು ಎರಡೂ ಹಂಗಾಮುಗಳಿಗೆ ಸಂಬಂಧಿಸಿದಂತೆ ಕೆ-ಕಿಸಾನ್ ತಂತ್ರಾಂಶದ ಆ್ಯಪ್ ಮೂಲಕವೇ ಬೀಜ ವಿತರಣೆ ಪ್ರಕ್ರಿಯೆ ನಡೆಯಲಿದ್ದು, ಆರಂಭದಲ್ಲಿ ತಾಂತ್ರಿಕ ಗೊಂದಲಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆ್ಯಪ್ ಡೌನ್ಲೋಡ್, ನೋಂದಣಿ, ಭೂಮಿ ದಾಖಲೆಗಳ ಅಪ್ಲೋಡ್ ವಿಷಯದಲ್ಲಿ ರೈತರಿಗೆ ಯಾವುದೇ ಗೊಂದಲಗಳಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮುಂಚಿತವಾಗಿಯೇ ಸೂಕ್ತ ಮಾರ್ಗದರ್ಶನ ನೀಡಬೇಕು. ನಿಯಮಾವಳಿಗಳ ಪ್ರಕಾರ ಪ್ರತಿಯೊಬ್ಬ ರೈತರ ಬೇಡಿಕೆಯನ್ನು ಆ್ಯಪ್ನಲ್ಲಿ ಸರಿಯಾಗಿ ನೋಂದಾಯಿಸಿಕೊಂಡು ವಿತರಣೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಕೃತಕ ಅಭಾವ ಸೃಷ್ಠಿಯಾಗದಂತೆ ಜಾಗ್ರತೆ ವಹಿಸಬೇಕು. ರೈತರಲ್ಲಿ ಅನಗತ್ಯ ಭೀತಿ ಉಂಟುಮಾಡಿ ದಾಸ್ತಾನು ಮಾಡಿಕೊಳ್ಳುವ ಪರಿಸ್ಥಿತಿ ಬರಬಾರದು. ಸ್ಥಳೀಯವಾಗಿ ಯಾವುದೇ ರೀತಿಯ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಮುಂಗಾರು ಆರಂಭವಾಗುವ ಮುನ್ನವೇ ಕಡ್ಡಾಯವಾಗಿ ಪೂರ್ವಸಿದ್ಧತಾ ಸಭೆಗಳನ್ನು ನಡೆಸಬೇಕು. ರಸಗೊಬ್ಬರ ವಿತರಕರು ನಿಗದಿತ ದರದಲ್ಲಿಯೇ ಗೊಬ್ಬರ ಪೂರೈಸುತ್ತಿದ್ದಾರೆಯೇ, ನಿಗದಿಪಡಿಸಿದ ಗುರಿ ತಲುಪಿಸಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದು ತಹಶೀಲ್ದಾರ್ಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು 189 ಗ್ರಾಮ ಪಂಚಾಯಿತಿಗಳು, 22 ಹೋಬಳಿಗಳು ಹಾಗೂ 1,009 ಗ್ರಾಮಗಳಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಪೂರ್ವ ಮುಂಗಾರಿನಲ್ಲಿ ಸುಮಾರು 25,000 ದಿಂದ 30,000 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳ ಬಿತ್ತನೆಯಾಗುವ ನಿರೀಕ್ಷೆ ಇದೆ. ಜಿಲ್ಲೆಯ ಮತ್ತೊಂದು ಪ್ರಮುಖ ಬೆಳೆಯಾದ ಮೆಕ್ಕೆಜೋಳವನ್ನು ಸುಮಾರು 95,000 ದಿಂದ 1,00,000 ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ಶೇಂಗಾ ಬೆಳೆಯನ್ನು ಸುಮಾರು 95,000 ದಿಂದ 1,15,000 ಹೆಕ್ಟೇರ್ ಪ್ರದೇಶದವರೆಗೆ ಬಿತ್ತನೆ ಮಾಡಲು ಉದ್ದೇಶಿಸಲಾಗಿದೆ. ಇನ್ನು ರಾಗಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿರುವುದರಿಂದ ಕಳೆದ ವರ್ಷ 58,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ಬಾರಿ ರಾಗಿ ಬಿತ್ತನೆ ಪ್ರದೇಶ ಮತ್ತಷ್ಟು ಹೆಚ್ಚಾಗುವ ಸಂಭವವಿವಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 3,01,562 ರೈತರಿದ್ದು, ಈ ಪೈಕಿ ಪರಿಶಿಷ್ಟ ಜಾತಿಯ 47,395 ರೈತರು, ಪರಿಶಿಷ್ಟ ಪಂಗಡದ 47,765 ರೈತರು ಹಾಗೂ ಸಾಮಾನ್ಯ ವರ್ಗದ 2,06,402 ರೈತರಿದ್ದಾರೆ. ಚಿತ್ರದುರ್ಗ ಜಿಲ್ಲೆಯು ಕೇಂದ್ರ ಒಣ ವಲಯಕ್ಕೆ ಒಳಪಡಲಿದ್ದು, ಇಲ್ಲಿನ ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳು ಅತ್ಯಂತ ಒಣ ಹವಮಾನ ಹೊಂದಿರುವ ಪ್ರದೇಶಗಳಾಗಿವೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 540 ಮಿ.ಮೀ ಆಗಿದೆ. ತಾಲ್ಲೂಕುವಾರು ವಾಡಿಕೆ ಮಳೆ ವಿವರಗಳನ್ನು ಗಮನಿಸಿದರೆ ಚಳ್ಳಕೆರೆಯಲ್ಲಿ 484 ಮಿ.ಮೀ, ಹೊಳಲ್ಕೆರೆಯಲ್ಲಿ 722 ಮಿ.ಮೀ, ಹಿರಿಯೂರಿನಲ್ಲಿ 578 ಮಿ.ಮೀ, ಹೊಸದುರ್ಗದಲ್ಲಿ 648 ಮಿ.ಮೀ, ಚಿತ್ರದುರ್ಗದಲ್ಲಿ 665 ಮಿ.ಮೀ ಹಾಗೂ ಮೊಳಕಾಲ್ಮೂರಿನಲ್ಲಿ 545 ಮಿ.ಮೀ ವಾಡಿಕೆ ಮಳೆಯಾಗಬೇಕಿದೆ.
ಜನವರಿ 1 ರಿಂದ ಮೇ 1 ರವರೆಗಿನ ಮಳೆ ವಿವರಗಳನ್ನು ಪರಿಶೀಲಿಸಿದಾಗ, ಚಳ್ಳಕೆರೆ ತಾಲ್ಲೂಕಿನಲ್ಲಿ ಈ ಅವಧಿಯಲ್ಲಿ 102 ಮಿ.ಮೀ ವಾಡಿಕೆ ಮಳೆಗೆ ಬದಲಾಗಿ 113 ಮಿ.ಮೀ ಮಳೆಯಾಗಿದ್ದು, ಶೇ. 10 ರಷ್ಟು ಹೆಚ್ಚಿನ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 127 ವಾಡಿಕೆ ಮಳೆಗೆ ಬದಲಾಗಿ 113 ವಾಸ್ತವಿಕ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 126 ವಾಡಿಕೆ ಮಳೆಗೆ ಬದಲಾಗಿ 73 ಮಿ.ಮೀ ವಾಸ್ತವಿಕ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 132 ವಾಡಿಕೆ ಮಳೆಗೆ ಬದಲಾಗಿ 86 ವಾಸ್ತವಿಕ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 135 ವಾಡಿಕೆ ಮಳೆಗೆ ಬದಲಾಗಿ 100 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 102 ಮಿ.ಮೀ ವಾಡಿಕೆ ಮಳೆಗೆ ಬದಲಾಗಿ 100 ಮಿ.ಮೀ ಮಳೆಯಾಗಿದೆ. ಜಿಲ್ಲೆಯಾದ್ಯಂತ ಈಗಾಗಲೇ ಭೂಮಿ ಸಿದ್ಧತೆ ಚಟುವಟಿಕೆಗಳು ಚುರುಕಿನಿಂದ ಸಾಗುತ್ತಿದ್ದು, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕುಗಳಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಹಿರಿಯೂರು ಭಾಗದಲ್ಲೂ ಇತ್ತೀಚೆಗೆ ಉತ್ತಮ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಹವಾಮಾನಕ್ಕೆ ಹೊಂದಿಕೊಳ್ಳುವಂತೆ 130 ರಿಂದ 140 ದಿನಗಳ ಅವಧಿಯ ತೊಗರಿ ತಳಿಗಳನ್ನು ಪರಿಚಯಿಸಲಾಗಿದ್ದು, ಈ ವರ್ಷವೂ ಇದನ್ನು ಮುಂದುವರಿಸಲಾಗುವುದು. ಶೇಂಗಾ ಬೆಳೆಯು 120 ದಿನಗಳ ಅವಧಿಯದ್ದಾಗಿದ್ದು, ತೊಗರಿ ಬೆಳೆಯು 130-140 ದಿನಗಳ ಅವಧಿಯನ್ನು ಹೊಂದಿರುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಬಾಬು, ಕೃಷಿ ಇಲಾಖೆ ಚಿತ್ರದುರ್ಗ ವಿಭಾಗ ಉಪನಿರ್ದೇಶಕ ಕೆ.ಎಸ್.ಶಿವಕುಮಾರ್ ಸೇರಿದಂತೆ ತಹಶೀಲ್ದಾರ್ಗಳು ಹಾಗೂ ಸಹಾಯಕ ಕೃಷಿ ನಿರ್ದೇಶಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















