ಸುದ್ದಿಒನ್, ಚಿತ್ರದುರ್ಗ, ಜುಲೈ. 25 : ಕನ್ನಡನಾಡು ಕಲೆ ಸಂಸ್ಕೃತಿಯ ತವರೂರು. ಕಲೆ ಕಲಾವಿದರನ್ನು ಗೌರವಿಸುವ ಸಂಸ್ಕೃತಿ ನಮ್ಮದಾಗಿದೆ. ಕಲಾವಿದರು ಕಲೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಕಲೆಯಿಂದ ಕಲಾವಿದ ಶ್ರೀಮಂತ. ಇಂತಹ ಅತ್ಯುತ್ತಮ ಕಲಾವಿದರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿರುವುದು ಸಂತಸ ತಂದಿದೆ ಎಂದು ಡಾ. ಮಹೇಶ್ ತಿಳಿಸಿದರು.
ಸಿರಿಗೆರೆ ಸಮೀಪದ ಕಡ್ಲೆಗುದ್ದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಬಹುಮುಖಿ ಕಲಾ ಕೇಂದ್ರ ಚಿತ್ರದುರ್ಗ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಗೀತಗಾಯನ ಸಂಭ್ರಮ ಕಾರ್ಯಕ್ರಮವನ್ನು ಚರ್ಮವಾದ್ಯ ತಬಲ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳು ಮೊಬೈಲ್ ಮಾಯಾಲೋಕದಲ್ಲಿ ನಮ್ಮ ಜನಪದ ಕಲಾ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಚಲನಚಿತ್ರದ ಗೀತೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಗೀತೆಗಳು ವಿದ್ಯಾರ್ಥಿಗಳಿಗೆ ಹಾಡಲು ಬರುತ್ತಿಲ್ಲ. ಆದ್ದರಿಂದ ಇಂತಹ ಕಾಲಘಟ್ಟದಲ್ಲಿ ಹೆಸರಾಂತ ಕಲಾವಿದರನ್ನು ಕಡ್ಲೆಗುದ್ದು ಗ್ರಾಮಕ್ಕೆ ಆಹ್ವಾನಿಸಿ, ವಿದ್ಯಾರ್ಥಿಗಳಿಗೆ ಜಾನಪದ, ಭಾವಗೀತೆ, ರಂಗಗೀತೆ, ಬಯಲಾಟ ಗೀತೆ, ತತ್ವಪದಗಳನ್ನು ಪರಿಚಯಿಸುತ್ತಿರುವುದು ಹೆಮ್ಮೆಯ ಸಂಗತಿ. ನಾಡಿನ ಸಂಸ್ಕೃತಿ ಉಳಿಸಿ ಬೆಳೆಸುತ್ತಿರುವ ಕಾರ್ಯ ಅವಿಸ್ಮರಣೀಯ ಎಂದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಹರೀಶ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಪರಿಚಯ ಮಾಡುವುದು ಕಲೆ ಕಲಾವಿದರ ಜವಾಬ್ದಾರಿಯಾಗಿದೆ. ಪ್ರತಿಭಾನ್ವಿತ ಕಲಾವಿದರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ವಿದ್ಯಾರ್ಥಿಗಳಲ್ಲಿ ಪ್ರೇರಣೆಯನ್ನು ಉಂಟು ಮಾಡುವುದು ಬಹುಮುಖಿ ಕಲಾ ಕೇಂದ್ರದ ಮುಖ್ಯ ಆಶಯವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಮಧು ಅವರು ಮಾತನಾಡಿ ಬಹುಮುಖಿ ಕಲಾ ಕೇಂದ್ರವು ಸಮಾಜಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಕಡ್ಲೆಗುದ್ದು ಗ್ರಾಮದಲ್ಲಿ ಮಹೇಶ್ ಅವರ ಸಹಕಾರದೊಂದಿಗೆ ಕನ್ನಡ ಗೀತಗಾಯನ ಸಂಭ್ರಮ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ಅನಾವರಣಗೊಂಡಿದೆ. ಪ್ರತಿಭಾನ್ವಿತ ಸಂಗೀತ ಕಲಾವಿದರ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಲ್ಲಿ ಸುಪ್ತ ಪ್ರತಿಭೆಯನ್ನು ಹೊರ ತರಲು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕನ್ನಡ ಗೀತ ಗಾಯನ ಸಂಭ್ರಮ ಕಾರ್ಯಕ್ರಮದಲ್ಲಿ ನನ್ನಿಹಾಳ ಹನುಮಂತಪ್ಪ, ಜಯಣ್ಣ, ಚನ್ನಬಸಪ್ಪ, ಶ್ರೀನಿವಾಸಮೂರ್ತಿ ಸಂಗಡಿಗರು ಜನಪದ ಗೀತೆ ಭಾವಗೀತೆ, ಬಯಲಾಟ, ರಂಗಗೀತೆ ಹಾಗೂ ತತ್ವಪದಗಳನ್ನು ಹಾಡಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಹೊನ್ನಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮಣ್ಣ ಮುಖ್ಯ ಶಿಕ್ಷಕಿ ಉಷಾ, ಶಿಕ್ಷಕರಾದ ಮಂಜುನಾಥ್, ಕರಿಬಸಪ್ಪ, ಸುಲೋಚನ, ಪವಿತ್ರ, ರೇಖಾ, ಮಂಜಪ್ಪ, ನಟರಾಜ್, ನಾಗರಾಜ್ ಹಾಗೂ ಮಹಂತೇಶ್ ಹಾಜರಿದ್ದರು.










