ಕರ್ನಾಟಕ ರಾಜ್ಯ ಪೊಲೀಸ್ (KSP) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಮನವಿಯ ಮೇರೆಗೆ ಅರ್ಜಿಯಲ್ಲಿರುವ ದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಿಶೇಷ ಅವಕಾಶ ಕಲ್ಪಿಸಿದೆ. ಜುಲೈ 13ರವರೆಗೆ ಮಾತ್ರ ತಿದ್ದುಪಡಿಗೆ ಅವಕಾಶವಿದ್ದು, ಅಭ್ಯರ್ಥಿಗಳು ಈ ಅವಧಿಯೊಳಗೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಅಭ್ಯರ್ಥಿಗಳಿಗೆ ಒಮ್ಮೆ ಮಾತ್ರ ಅರ್ಜಿ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ಆದ್ದರಿಂದ ಎಲ್ಲ ಮಾಹಿತಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ತಿದ್ದುಪಡಿ ಮಾಡಬೇಕು. ತಿದ್ದುಪಡಿ ಪೂರ್ಣಗೊಂಡ ಬಳಿಕ ಅಂತಿಮ ಅರ್ಜಿಯ ಪ್ರಿಂಟ್‌ಔಟ್ ತೆಗೆದು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಕಡ್ಡಾಯ. ನಂತರ ಮತ್ತೊಮ್ಮೆ ತಿದ್ದುಪಡಿ ಮಾಡಲು ಯಾವುದೇ ಅವಕಾಶ ಇರುವುದಿಲ್ಲ.
ಅರ್ಜಿ ತಿದ್ದುಪಡಿ ಮಾಡುವ ವಿಧಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ಅರ್ಜಿ ತಿದ್ದುಪಡಿ ಮಾಡಬಹುದು.
ಹಂತ 1: ‘Edit Application for the Karnataka State Police’ ಆಯ್ಕೆಯ ಮೂಲಕ ಅರ್ಜಿಯನ್ನು ತಿದ್ದುಪಡಿ ಮಾಡಬೇಕು.
ಹಂತ 2: ಅಗತ್ಯವಿದ್ದರೆ ಹೊಸ ಭಾವಚಿತ್ರ (Photo), ಸಹಿ (Signature) ಹಾಗೂ ಇತರೆ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
ಹಂತ 3: ತಿದ್ದುಪಡಿಯಿಂದ ಹೆಚ್ಚುವರಿ ಅರ್ಜಿ ಶುಲ್ಕ ಅನ್ವಯಿಸಿದರೆ ಅದನ್ನು ಪಾವತಿಸಬೇಕು.
ಹಂತ 4: ಶುಲ್ಕ ಪಾವತಿ ಯಶಸ್ವಿಯಾಗಿದೆಯೇ ಎಂಬುದನ್ನು ‘Check Payment Status’ ಮೂಲಕ ಪರಿಶೀಲಿಸಬೇಕು.
ಹಂತ 5: ತಿದ್ದುಪಡಿ ಪೂರ್ಣಗೊಂಡ ಬಳಿಕ ಅಂತಿಮ ಅರ್ಜಿಯನ್ನು ಮುದ್ರಿಸಿ ಒಂದು ಪ್ರತಿಯನ್ನು ತಮ್ಮ ಬಳಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು.
ಲಾಗಿನ್ ಹೇಗೆ?
ಅಭ್ಯರ್ಥಿಗಳು ತಮ್ಮ Application Number ಹಾಗೂ Date of Birth (DOB) ಬಳಸಿ ಲಾಗಿನ್ ಮಾಡಬೇಕು. ದೃಢೀಕರಣಕ್ಕಾಗಿ ನೋಂದಾಯಿತ ಮೊಬೈಲ್ ಸಂಖ್ಯೆಗೆ WhatsApp OTP ಕಳುಹಿಸಲಾಗುತ್ತದೆ.
ಗಮನಿಸಬೇಕಾದ ಪ್ರಮುಖ ಅಂಶಗಳು
ಅರ್ಜಿ ತಿದ್ದುಪಡಿಗೆ ಒಮ್ಮೆ ಮಾತ್ರ ಅವಕಾಶ.
ಭಾವಚಿತ್ರ, ಸಹಿ ಸೇರಿದಂತೆ ಎಲ್ಲಾ ವಿವರಗಳನ್ನು ಒಂದೇ ಬಾರಿ ತಿದ್ದುಪಡಿ ಮಾಡಬೇಕು.
ಪ್ರವರ್ಗ (Category), ಮೀಸಲಾತಿ (Reservation) ಅಥವಾ ಇತರೆ ಅರ್ಹತಾ ವಿವರಗಳಲ್ಲಿ ಬದಲಾವಣೆ ಮಾಡಿದರೆ ಹೆಚ್ಚುವರಿ ಶುಲ್ಕ ಅನ್ವಯಿಸಿದಲ್ಲಿ ಅದರ ವ್ಯತ್ಯಾಸದ ಮೊತ್ತವನ್ನು ಕಡ್ಡಾಯವಾಗಿ ಪಾವತಿಸಬೇಕು.
ತಿದ್ದುಪಡಿ ಪೂರ್ಣಗೊಂಡ ಬಳಿಕ ಅಂತಿಮ ಅರ್ಜಿಯ ಪ್ರಿಂಟ್‌ಔಟ್‌ನ್ನು ಕಡ್ಡಾಯವಾಗಿ ಉಳಿಸಿಕೊಂಡಿರಬೇಕು. ಮುಂದಿನ ಹಂತದಲ್ಲಿ ಪ್ರಾಧಿಕಾರ ಸೂಚಿಸಿದಾಗ ಅದನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿ ತಿದ್ದುಪಡಿ ಮಾಡಲು ಕಾಯದೆ, ಕೊನೆಯ ದಿನಾಂಕಕ್ಕೂ ಮುನ್ನವೇ ಎಲ್ಲ ವಿವರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವುದು ಒಳಿತು.










