ಬೆಂಗಳೂರು.ಜುಲೈ.11: ರಾಜ್ಯದ ಅನ್ನದಾತರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರೈತರಿಂದ ಖರೀದಿಸಲಾಗಿದ್ದ ರಾಗಿ ಮತ್ತು ಜೋಳದ ಬಾಕಿ ಮೊತ್ತದಲ್ಲಿ ರಾಜ್ಯ ಸರ್ಕಾರವು ಶುಕ್ರವಾರ ಭರ್ಜರಿ 600 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಹಣವು ನೇರವಾಗಿ ರೈತರ ಬ್ಯಾಂಕ್ ಖಾತೆಗಳನ್ನು ತಲುಪಲಿದೆ.
ಸರ್ಕಾರವು ಏಪ್ರಿಲ್ 16ರವರೆಗೆ ರೈತರಿಂದ ಪಡೆದುಕೊಂಡಿದ್ದ ರಾಗಿ ಹಾಗೂ ಏಪ್ರಿಲ್ 23ರ ವರೆಗೆ ಖರೀದಿಸಿದ್ದ ಜೋಳದ ಮೊತ್ತವನ್ನು ಈಗ ಪಾವತಿಸಿದೆ. ಜಿಲ್ಲಾವಾರು ಲೆಕ್ಕಾಚಾರ ನೋಡುವುದಾದರೆ, ಜೋಳ ಮಾರಾಟ ಮಾಡಿದ್ದ ರಾಯಚೂರು ಜಿಲ್ಲೆಯ 4,842 ರೈತರಿಗೆ 89 ಕೋಟಿ ರೂ. ಹಾಗೂ ಬಳ್ಳಾರಿ ಜಿಲ್ಲೆಯ 3,926 ರೈತರಿಗೆ 73 ಕೋಟಿ ರೂ. ಜಮೆಯಾಗಿದೆ.
ಇನ್ನು ರಾಗಿ ಬೆಳೆಗಾರರ ಪೈಕಿ ಹಾಸನ ಜಿಲ್ಲೆಯ 7,758 ರೈತರಿಗೆ 86 ಕೋಟಿ ರೂ., ತುಮಕೂರಿನ 7,190 ರೈತರಿಗೆ 78 ಕೋಟಿ ರೂ., ಮೈಸೂರಿನ 4,616 ರೈತರಿಗೆ 50 ಕೋಟಿ ರೂ., ಚಿಕ್ಕಮಗಳೂರಿನ 3,425 ರೈತರಿಗೆ 41 ಕೋಟಿ ರೂ. ಹಾಗೂ ಚಿತ್ರದುರ್ಗದ 2,322 ರೈತರಿಗೆ 27 ಕೋಟಿ ರೂ. ಸೇರಿದಂತೆ ಒಟ್ಟು 15 ಜಿಲ್ಲೆಗಳ 38,388 ರಾಗಿ ಬೆಳೆಗಾರರ ಖಾತೆಗೆ 436 ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ.
ಆದಾಗ್ಯೂ, ರೈತರಿಗೆ ಸಿಗಬೇಕಾದ ಸಂಪೂರ್ಣ ಹಣ ಇನ್ನೂ ಪಾವತಿಯಾಗಿಲ್ಲ. ರಾಗಿ ಮಾರಾಟಗಾರರಿಗೆ ಇನ್ನು 700 ಕೋಟಿ ರೂ. ಹಾಗೂ ಜೋಳ ಮಾರಾಟಗಾರರಿಗೆ 400 ಕೋಟಿ ರೂ. ಸೇರಿದಂತೆ ಒಟ್ಟು 1,100 ಕೋಟಿ ರೂಪಾಯಿಗಳ ಬಾಕಿ ಮೊತ್ತವನ್ನು ಸರ್ಕಾರ ಇನ್ನುಳಿಸಿಕೊಂಡಿದ್ದು, ಇದನ್ನು ಕೂಡ ಶೀಘ್ರದಲ್ಲೇ ಬಿಡುಗಡೆ ಮಾಡಬೇಕಿದೆ.







