ಬೆಂಗಳೂರು.ಜುಲೈ.10: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಭವದ ದಸರಾ ಆಚರಣೆಗೆ ಸಿದ್ಧತೆಗಳು ಅಧಿಕೃತವಾಗಿ ಆರಂಭಗೊಂಡಿವೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ʻನಾಡಹಬ್ಬ ದಸರಾ – 2026ʼ ಆಚರಣೆ ಕುರಿತು ಉನ್ನತ ಮಟ್ಟದ ಪೂರ್ವಭಾವಿ ಸಭೆ ಜರುಗಿತು.
ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಅಕ್ಟೋಬರ್ 11ರಂದು ಬೆಳಗ್ಗೆ 10:50ಕ್ಕೆ ದಸರಾ ಮಹೋತ್ಸವಕ್ಕೆ ಅದ್ಧೂರಿ ಉದ್ಘಾಟನೆ ನೆರವೇರಲಿದ್ದು, ಅಕ್ಟೋಬರ್ 21ರಂದು ಸಂಜೆ 4:10ಕ್ಕೆ ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಹಾಗೂ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಲಿದೆ ಎಂದು ಅಧಿಕೃತವಾಗಿ ಘೋಷಿಸಿದರು.
ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪ್ರಮುಖ ಸೂಚನೆಗಳು
ನಾಡಹಬ್ಬವನ್ನು ದೇಶ-ವಿದೇಶಗಳಲ್ಲಿ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹೋತ್ಸವವಾಗಿ, ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದರು. ಮೈಸೂರು ದಸರಾ ಐತಿಹಾಸಿಕ ಮತ್ತು ಪಾರಂಪರಿಕ ಉತ್ಸವವಾಗಿದ್ದು, ಅದರ ಘನತೆಗೆ ಯಾವುದೇ ಧಕ್ಕೆಯಾಗದಂತೆ ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಅಳವಡಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ತಿಳಿಸಿದರು. ರಾಜ್ಯದಲ್ಲಿ ‘ಶಕ್ತಿ’ ಯೋಜನೆ ಜಾರಿಯಾದ ಬಳಿಕ ಮಹಿಳೆಯರು ಸೇರಿದಂತೆ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಮೂಲಸೌಕರ್ಯ ಮತ್ತು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಷ್ಟ್ರಮಟ್ಟದ ಖ್ಯಾತಿಯ ಗಾಯಕರು, ಸಂಗೀತಗಾರರು ಹಾಗೂ ಕಲಾವಿದರನ್ನು ಆಹ್ವಾನಿಸಿ ಜನರಿಗೆ ಅತ್ಯುತ್ತಮ ಸಾಂಸ್ಕೃತಿಕ ರಸದೌತಣ ನೀಡುವ ಪರಂಪರೆಯನ್ನು ಈ ಬಾರಿಯೂ ಮುಂದುವರಿಸಿಕೊಂಡು ಹೋಗಬೇಕು ಎಂದ ಮುಖ್ಯಮಂತ್ರಿಗಳು, ದಸರಾ ಆಯೋಜನಾ ಸಮಿತಿಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಉತ್ಸವದ ಯಶಸ್ಸನ್ನೇ ಮುಖ್ಯ ಗುರಿಯನ್ನಾಗಿ ಮಾಡಿಕೊಂಡು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ರೂಪುಗೊಂಡ ಉತ್ತಮ ಸಂಪ್ರದಾಯಗಳು ಹಾಗೂ ವ್ಯವಸ್ಥೆಗಳನ್ನು ಯಥಾವತ್ತಾಗಿ ಮುಂದುವರಿಸಿಕೊಂಡು ಹೋಗಬೇಕು. ದಸರಾ ಆಯೋಜನೆ ಕುರಿತು ಸಾರ್ವಜನಿಕ ವಲಯದಲ್ಲಿ ಬರುವ ಟೀಕೆ-ವಿಮರ್ಶೆಗಳಿಗೆ ಅತಿಯಾದ ಮಹತ್ವ ನೀಡದೆ, ಜನರ ನಿರೀಕ್ಷೆಗೆ ತಕ್ಕಂತೆ ಅತ್ಯುತ್ತಮ ಉತ್ಸವ ಆಯೋಜಿಸುವುದರತ್ತ ಸಂಪೂರ್ಣ ಗಮನಹರಿಸಬೇಕು ಮತ್ತು ಸರ್ಕಾರದ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯ ಹಾಗೂ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ʻನಾಡಹಬ್ಬ ದಸರಾ – 2026ʼ ಆಚರಿಸುವ ಸಂಬಂಧ ಉನ್ನತ ಮಟ್ಟದ ಪೂರ್ವಭಾವಿ ಸಭೆ ನಡೆಸಿ, ನಾಡಹಬ್ಬ ದಸರಾವನ್ನು ದೇಶ-ವಿದೇಶಗಳಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹೋತ್ಸವವಾಗಿ, ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಈ ಕೆಳಗಿನ ಸೂಚನೆಗಳನ್ನು ನೀಡಲಾಯಿತು.
– ಮೈಸೂರು ದಸರಾ ಐತಿಹಾಸಿಕ… pic.twitter.com/Bl01uhEOFb
— DK Shivakumar (@DKShivakumar) July 10, 2026
ಈ ಉನ್ನತ ಮಟ್ಟದ ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ, ಸಚಿವರುಗಳಾದ ಶ್ರೀ ಕೆ.ಜೆ ಜಾರ್ಜ್, ಶ್ರೀ ಪ್ರಿಯಾಂಕ್ ಖರ್ಗೆ, ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರುಗಳಾದ ಶ್ರೀ ಹೆಚ್.ಸಿ ಮಹದೇವಪ್ಪ, ಶ್ರೀ ಕೆ. ವೆಂಕಟೇಶ್, ಮೈಸೂರು ಸಂಸದರಾದ ಶ್ರೀ ಯದುವೀರ್ ಒಡೆಯರ್, ಮಾಜಿ ಸಚಿವರಾದ ಶ್ರೀ ಜಿ.ಟಿ ದೇವೇಗೌಡ ಉಪಸ್ಥಿತರಿದ್ದರು. ಶಾಸಕರುಗಳಾದ ಶ್ರೀ ತನ್ವೀರ್ ಸೇಠ್, ಶ್ರೀ ಅನಿಲ್ ಚಿಕ್ಕಮಾದು, ರಮೇಶ್ ಬಂಡಿಸಿದ್ದೇಗೌಡ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿ ದಸರಾ ಸಿದ್ಧತೆಗಳ ಕುರಿತು ಚರ್ಚಿಸಿದರು.











