Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

‘ಟಾಕ್ಸಿಕ್’ ವಿರುದ್ಧ ಅಣ್ಣಾಮಲೈ ಗರಂ; ಸೆನ್ಸಾರ್ ಮಂಡಳಿಗೂ ಕ್ಲಾಸ್

---Advertisement---

ನಾಲ್ಕು ವರ್ಷಗಳ ಬಳಿಕ ‘ಟಾಕ್ಸಿಕ್’ ಸಿನಿಮಾದ ಮೂಲಕ ಬೆಳ್ಳಿ ಪರದೆಗೆ ಮರಳಿರುವ ರಾಕಿಂಗ್ ಸ್ಟಾರ್ ಯಶ್‌ಗೆ ಸಿನಿಮಾ ಬಿಡುಗಡೆ ಬಳಿಕ ಮೆಚ್ಚುಗೆ ಜೊತೆಗೆ ಟೀಕೆಗಳೂ ಎದುರಾಗಿವೆ. ಇದೀಗ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿನ ಮಹಿಳೆಯರ ಚಿತ್ರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಲ್ಟಿಸ್ಟಾರ್ ಗ್ಯಾಂಗ್‌ಸ್ಟರ್ ಡ್ರಾಮಾ ಕಥಾಹಂದರ ಹೊಂದಿರುವ ‘ಟಾಕ್ಸಿಕ್’ನಲ್ಲಿ ಮಹಿಳಾ ಪಾತ್ರಗಳನ್ನು ಆಕ್ಷೇಪಾರ್ಹ ಹಾಗೂ ಲೈಂಗಿಕ ದೃಷ್ಟಿಕೋನದಲ್ಲಿ ತೋರಿಸಲಾಗಿದೆ ಎಂಬ ಟೀಕೆಗಳು ಈಗಾಗಲೇ ಕೇಳಿಬಂದಿದ್ದವು. ಇದೇ ವಿಚಾರವನ್ನು ಪ್ರಸ್ತಾಪಿಸಿರುವ ಅಣ್ಣಾಮಲೈ, ಸಿನಿಮಾದಲ್ಲಿ ಸ್ತ್ರೀ ವಿರೋಧಿ ಅಂಶಗಳು ಹೆಚ್ಚಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿನಿಮಾಗೆ ಪ್ರಮಾಣಪತ್ರ ನೀಡಿರುವ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ವಿರುದ್ಧವೂ ಅಣ್ಣಾಮಲೈ ಅಸಮಾಧಾನ ಹೊರಹಾಕಿದ್ದಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿನ ದೃಶ್ಯಗಳ ವಿಚಾರದಲ್ಲಿ ಸೆನ್ಸಾರ್ ಮಂಡಳಿ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಮಹಿಳೆಯರನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸುವ ಸಿನಿಮಾಗಳನ್ನು ಮಕ್ಕಳು ವೀಕ್ಷಿಸಿದರೆ, ಅವರ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಣ್ಣಾಮಲೈ ಆತಂಕ ವ್ಯಕ್ತಪಡಿಸಿದ್ದಾರೆ.

“ನಾವು ಶಾಲೆ-ಕಾಲೇಜುಗಳಿಗೆ ತೆರಳಿ ಮಹಿಳೆಯರ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಇಂತಹ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ ಅನುಮತಿ ನೀಡುತ್ತಿದೆ. ಸಿನಿಮಾಗಳಲ್ಲಿನ ಕೆಲವು ದೃಶ್ಯಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಮಹಿಳೆಯರಿಗೆ ಗೌರವ ನೀಡುವ ಸಂದೇಶವನ್ನು ಇಂತಹ ಸಿನಿಮಾಗಳು ನೀಡುತ್ತವೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಮೊದಲ ದಿನವೇ ₹104 ಕೋಟಿ ಗಳಿಸಿದೆ ಎಂಬ ವರದಿಗಳನ್ನು ಉಲ್ಲೇಖಿಸಿದ ಅಣ್ಣಾಮಲೈ, ದೊಡ್ಡ ಮಟ್ಟದಲ್ಲಿ ಜನರನ್ನು ತಲುಪುವ ಸಿನಿಮಾಗಳಲ್ಲಿ ಮಹಿಳೆಯರನ್ನು ಯಾವ ರೀತಿಯಲ್ಲಿ ಚಿತ್ರಿಸಲಾಗುತ್ತಿದೆ ಎಂಬುದರ ಬಗ್ಗೆ ಹೆಚ್ಚಿನ ಜವಾಬ್ದಾರಿ ಇರಬೇಕು ಎಂದು ಹೇಳಿದ್ದಾರೆ.ಇದೇ ವೇಳೆ, ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಸಿನಿಮಾದ ವಿರುದ್ಧ ಕೇಳಿಬಂದ ಟೀಕೆಗಳ ಕುರಿತು ನಟ ಯಶ್ ಪ್ರತಿಕ್ರಿಯಿಸಿದ್ದರು. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರನ್ನು ಬೆಂಬಲಿಸಿದ್ದ ಯಶ್, ಸಮಾಜ ಏನೇ ಹೇಳಿದರೂ ಪ್ರತಿಯೊಬ್ಬರಿಗೂ ತಮ್ಮದೇ ಆದ ದೃಷ್ಟಿಕೋನ ಮತ್ತು ಅಭಿಪ್ರಾಯವಿದೆ ಎಂದು ಹೇಳಿದ್ದರು.

ಮಹಿಳೆಯರು ಮತ್ತು ಯುವತಿಯರು ಯಾವುದೇ ಪರಿಸ್ಥಿತಿಯನ್ನು ಎದುರಿಸಿ, ತಮ್ಮ ಆಲೋಚನೆ ಮತ್ತು ದೃಷ್ಟಿಕೋನಗಳನ್ನು ವ್ಯಕ್ತಪಡಿಸಿ ಯಶಸ್ಸು ಸಾಧಿಸಬಲ್ಲರು ಎಂಬುದನ್ನು ಚಿತ್ರದ ನಿರ್ದೇಶಕಿ ತಮ್ಮ ಕೃತಿಯ ಮೂಲಕ ತೋರಿಸಿದ್ದಾರೆ ಎಂದು ಯಶ್ ಹೇಳಿದ್ದರು.
ಈ ನಡುವೆ ‘ಟಾಕ್ಸಿಕ್’ ಸಿನಿಮಾದಲ್ಲಿನ ಮಹಿಳಾ ಪಾತ್ರಗಳ ಚಿತ್ರಣದ ಕುರಿತು ಅಣ್ಣಾಮಲೈ ವ್ಯಕ್ತಪಡಿಸಿರುವ ಅಸಮಾಧಾನ ಇದೀಗ ಚರ್ಚೆಗೆ ಕಾರಣವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now