ದಾವಣಗೆರೆ: ಎಸ್ ಐಆರ್ ಗೆ ನೇಮಕಗೊಂಡಿದ್ದ ಬಿಎಲ್ ಒ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ಜರುಗಿದೆ.
ಚಿರಡೋಣಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಿ.ಆರ್. ರಾಜಪ್ಪ ಮೃತ ದುರ್ದೈವಿ. ಇವರನ್ನು ಇತ್ತೀಚೆಗೆ ಸರ್ಕಾರದ ಮಹತ್ವದ ‘ಎಸ್.ಐ.ಆರ್’ (SIR) ಸಮೀಕ್ಷಾ ಕಾರ್ಯಕ್ಕಾಗಿ ಬಿಎಲ್ ಒ ಆಗಿ ನಿಯೋಜಿಸಲಾಗಿತ್ತು. ಶುಕ್ರವಾರದಂದು ದಿನವಿಡೀ ಸಮೀಕ್ಷಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ರಾಜಪ್ಪ, ಸಂಜೆ ಕೆಲಸ ಮುಗಿಸಿ ಮನೆಗೆ ಮರಳಿದ್ದರು.
ಆದರೆ, ತಡರಾತ್ರಿ ಅವರಿಗೆ ದಿಢೀರನೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಚಿಕಿತ್ಸೆ ಕೊಡಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಬಸವಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕರ್ತವ್ಯ ನಿರತ ಅಧಿಕಾರಿಯ ಅಕಾಲಿಕ ಮರಣಕ್ಕೆ ಸ್ಥಳೀಯರು ಹಾಗೂ ಸಹೋದ್ಯೋಗಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.







