Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಂಗಳೂರು | ಸಾಹಿತಿ ಶರತ್ ಚಂದ್ರ ಚಟರ್ಜಿಯವರ 150 ನೇ ಜನ್ಮದಿನಾಚರಣೆ

---Advertisement---

ಸುದ್ದಿಒನ್, ಬೆಂಗಳೂರು, ಸೆಪ್ಟೆಂಬರ್. 30 : “1937ರಿಂದ ಶರತರ ಕೃತಿಗಳ ಕನ್ನಡ ಅನುವಾದ ಪ್ರಾರಂಭವಾಯಿತು. ‌ಸುಮಾರು 80 ಕೃತಿಗಳು ಕನ್ನಡಕ್ಕೆ ಬಂದಿವೆ. ನಾನು ಶರತರ ಹೆಣ್ಣಿನ ಸ್ಥಾನಮಾನ, ಪಥೇರ್ ದಾಬಿ ಮತ್ತು ಶೇಷ ಪ್ರಶ್ನೆ ಕಾದಂಬರಿಗಳನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ. ಹೆಣ್ಣಿನ ಸ್ಥಾನಮಾನ ಕೃತಿ ನಾನು ಮಾತ್ರ ಕನ್ನಡಕ್ಕೆ ಅನುವಾದಿಸಿದ್ದೇನೆ ಎನ್ನುವ ಅಭಿಮಾನ ನನಗಿದೆ. ಈ ಕೃತಿ ಅವರ ಎಲ್ಲಾ ಕಾದಂಬರಿಗಳಿಗೆ ಅಡಿಪಾಯವನ್ನು ಹಾಕಿ ಕೊಡುತ್ತದೆ. ಸುಮಾರು 120 ಪುಟದ ಈ ಚಿಕ್ಕ ಪುಸ್ತಕ ಸುಮಾರು 12 ಸಾವಿರ ಪುಸ್ತಕಗಳಿಗೆ ಸಮನಾದ ಚಿಂತನೆಯನ್ನು ಹೊಂದಿದೆ ಎಂದು ಹಿರಿಯ ಸಾಹಿತಿಗಳು ಹಾಗೂ ಸಾಮಾಜಿಕ ಹೋರಾಟಗಾರರಾದ ಶ್ರೀ ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.

ಧರ್ಮಾತೀತ ಮಾನವತಾವಾದಿ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ 150ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ AIMSS ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುರುಷ ಸಮಾಜ ಹೆಣ್ಣಿನಿಂದ ಎಲ್ಲವನ್ನು ಪಡೆದುಕೊಂಡು, ಅದೇ ಹೆಣ್ಣನ್ನು ಸಲೀಸಾಗಿ ದುರುಪಯೋಗ ಮಾಡಿಕೊಂಡಿದೆ. ಶಾಸ್ತ್ರಗಳನ್ನು ಬರೆದವರೆಲ್ಲಾ ಪುರುಷರೇ ಆದುದ್ದರಿಂದ ಹೆಣ್ಣನ್ನು ಹೇಗೆ ಹೆರಿಗೆಗೆ ಮಾತ್ರ ಸೀಮಿತ ಮಾಡಿದರು ಎಂಬುದನ್ನು ಶರತರು ತೋರಿಸಿಕೊಡುತ್ತಾ ಸತೀತ್ವವನ್ನು ಪ್ರಶ್ನಿಸಿ, ನಾರೀತ್ವವನ್ನು ಎತ್ತಿಹಿಡಿದರು. ಗಂಡ ದುಷ್ಟ-ವ್ಯಭಿಚಾರಿಯಾಗಿದ್ದರು ಅವನನ್ನು ಪ್ರಶ್ನಿಸಬೇಡ ಎನ್ನುವ ಎಲ್ಲಾ ಧರ್ಮಗಳು ಸ್ತ್ರೀಯರ ಶತ್ರುಗಳು ಎಂದು ಹೇಳುತ್ತಾ, ಸ್ತ್ರೀ-ಪುರುಷರ ನಡುವೆ ಒಂದು ಪವಿತ್ರ ಸಂಬಂಧ ಇರಬೇಕೆಂದು ಶರತರು ಅಪೇಕ್ಷ ಪಟ್ಟರು.

ಈ ಸಮಾಜ ಎಲ್ಲಾ ವರ್ಗದ ಮಹಿಳೆಯರು ಮತ್ತು ವಿಧವೆಯರನ್ನು ಎಂತಹ ಹೀನಾಯ ಪರಿಸ್ಥಿತಿಗೆ ತಳ್ಳಿತ್ತು ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ಸಮಕಾಲಿನರನ್ನು ಮೀರಿಸಿದಂತಹ ವಿಚಾರವನ್ನು ಮಂಡಿಸಿ ಈ ಕೃತಿಯನ್ನು ಬರೆದರು. ಇದು ಅವರ ಪಾಂಡಿತ್ಯಪೂರ್ಣ, ವಿವೇಕಪೂರ್ಣ ಮತ್ತು ಸ್ತ್ರೀಪರ ಕಳಕಳಿಯನ್ನು ತೋರಿಸುತ್ತದೆ. ಮಹಿಳೆಯರಿಗೆ ಸಿಗಲೇಬೇಕಾದ ಗೌರವ, ಪ್ರತಿಷ್ಠೆ ಮತ್ತು ಮಹತ್ವದ ಬಗ್ಗೆ ಅವರಲ್ಲಿ ಅಪಾರವಾದ ಆಸಕ್ತಿಯಿತ್ತು. ಪ್ರಪಂಚದ ಬಹುಪಾಲು ದೇಶಗಳಲ್ಲಿ, ವಿವಿಧ ಕಾಲಗಳಲ್ಲಿ ಹೆಣ್ಣಿನ ಕುರಿತು ಐತಿಹಾಸಿಕವಾಗಿ, ಪಾರಂಪರಿಕವಾಗಿ ಮತ್ತು ಚಾರಿತ್ರಿಕವಾಗಿ ಇರುವ ಧೋರಣೆಗಳನ್ನು ವೈಚಾರಿಕ ನೆಲೆಯಲ್ಲಿ ಅಧ್ಯಯನ ಮಾಡಿದ್ದರು. ಹೆಣ್ಣಿನ ಸ್ಥಾನಮಾನ ಬರೆಯಲು ಅವರು ರಾಮಾಯಣ, ಮಹಾಭಾರತ, ವೇದ ಉಪನಿಷತ್, ಮನುಸ್ಮೃತಿ, ಖುರಾನ್, ಬೈಬಲ್ ಜೊತೆಗೆ ಇಂಗ್ಲಿಷ್ ಹೆನ್ರಿ, ಗ್ರಾಹಾಂ ಸ್ಮಿತ್ ರ ಸಿದ್ಧಾಂತಗಳನ್ನೂ ಅಭ್ಯಸಿಸಿ ಈ ಸಿದ್ಧಾಂತಗಳು ಹೆಣ್ಣಿನ ಬಗ್ಗೆ ಎಷ್ಟು ಕೀಳಾಗಿ ಮಾತಾಡಿವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

150 ವರ್ಷಗಳ ನಂತರವೂ ಹೆಣ್ಣಿನ ಬಗೆಗಿನ ತಾತ್ಸಾರ ಭಾವನೆ ಹಾಗೆಯೇ ಉಳಿದಿದೆ. ಬಾಯಿ ಮಾತಿಗೆ ಹೆಣ್ಣಿನ ಆದ್ಯತೆಯ ಬಗ್ಗೆ ಮಾತನಾಡುವ ಸಮಾಜ, ಸರ್ಕಾರದಲ್ಲಿ ಈಗಲೂ ಪುರುಷರದೇ ಪ್ರಾಬಲ್ಯ ಇದೆ. ಪುರುಷರ ಈ ಪ್ರಾಬಲ್ಯವನ್ನು ಹೇಗೆ ಎದುರಿಸಬೇಕು ಎಂಬುದನ್ನು ಅವರ ಸಾಹಿತ್ಯವನ್ನು ಓದಿ ನಾವು ಇನ್ನು ಮುಂದೆ ಪ್ರತಿಭಟಿಸಬೇಕಾಗುತ್ತದೆ. ಶಿಕ್ಷಣ – ವಿಚಾರ – ಸ್ವಾವಲಂಬಿ ಬದುಕಿನ ಮೂಲಕ ಹೆಣ್ಣು-ಗಂಡಿನ ಸಮಾನತೆಯನ್ನು ಹೆಣ್ಣುಮಕ್ಕಳೇ ತರಬೇಕು. ಪುರುಷರು ಈ ಕೆಲಸ ಮಾಡುವುದಿಲ್ಲ. ಗಂಡು ಮತ್ತು ಇಡೀ ಸಮಾಜವನ್ನೊಳಗೊಂಡು ತಾನೂ ಬೆಳೆಯಬೇಕೆಂಬ ಸದ್ಭಾವನೆ ಹೆಣ್ಣಿನಲ್ಲಿ ಇರುವುದರಿಂದ ಆಕೆಯೇ ಈ ಮಹತ್ವತ ಮುಂದುವರಿಕೆಯ ಕಾರ್ಯವನ್ನು ಮಾಡಬೇಕಾಗಿದೆ. ಆಗ ಮಾತ್ರ ನಾವು ಶರತರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ.

ನಂತರ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯುರೋ ಸದಸ್ಯರಾದ ಕಾಮ್ರೇಡ್ ಕೆ. ರಾಧಾಕೃಷ್ಣ ಅವರು “ನಮ್ಮ ಶಿಕ್ಷಕರಾದ ಕಾಮ್ರೇಡ್ ಶಿವದಾಸ್ ಘೋಷ್ ನಮಗೆ ಶರತರ ಸಾಹಿತ್ಯದ ಮಹತ್ವವನ್ನು ಅರ್ಥೈಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಒಂದೆಡೆ ಬ್ರಿಟಿಷ್ ಪ್ರಾಬಲ್ಯ, ಇನ್ನೊಂದೆಡೆ ಊಳಿಗಮಾನ್ಯ ವಿಚಾರಗಳ ವಿರುದ್ಧ ಹೋರಾಟ ನಡೆಯುತ್ತಿತ್ತು. ಅಂತಹ ಸಮಯದಲ್ಲಿ ಮೂಡಿಬಂದ ವ್ಯಕ್ತಿತ್ವ ಶರತ್ ಚಂದ್ರರು. ಅವರು ಸಂಧಾನತೀತ ಪಂಥದ ಅಗ್ರಗಣ್ಯ ಸಾಹಿತಿಯಾಗಿದ್ದರು. ಗಾಂಧಿಯವರ ಸಂಧಾನಪರ ಪಂಥದ ನಿಲುವುಗಳ ವಿರುದ್ಧ ನೇತಾಜಿ, ಚಿತ್ತರಂಜನ್ ದಾಸ್, ಆಜಾದ್, ಭಗತ್ ಸಿಂಗ್ ಸೇರಿದಂತೆ ಮೊದಲಾದ ಕ್ರಾಂತಿಕಾರಿಗಳು ವೈಚಾರಿಕ ವ್ಯತ್ಯಾಸ ಹೊಂದಿದ್ದರು. ಇಲ್ಲಿ ಶರತರು ಶಸ್ತ್ರಸಜ್ಜಿತ ಹೋರಾಟದ ಪರವಾಗಿದ್ದರು, ಕ್ರಾಂತಿಕಾರಿಗಳ ಜೊತೆ ನಿಂತರು.

ಒಂದು ಕಾಲಘಟ್ಟದಲ್ಲಿ ಧರ್ಮಗಳು ಅನ್ಯಾಯದ ವಿರುದ್ಧ ಬಂಡಾಯದ ಅಸ್ತ್ರವಾಗಿ ಹುಟ್ಟಿಕೊಂಡವು. ನ್ಯಾಯ-ಸತ್ಯದ ಪರ ಧ್ವನಿ ಎತ್ತಿದ್ದ ರಾಮಾಯಣ, ಮಹಾಭಾರತದಂತಹ ಶ್ರೇಷ್ಠ ಪುರಾಣಗಳು ಇಂದು ಅರ್ಥಹೀನವಾಗಿವೆ. ಧರ್ಮ ಶೋಷಕರ ಕೈಯಲ್ಲಿ ಅನ್ಯಾಯದ ಅಸ್ತ್ರವಾಗಿದೆ. ಇವುಗಳ ಇತಿಮಿತಿಗಳನ್ನು ತೋರಿಸುತ್ತ, ಮಾನವತಾವಾದಿ ಮೌಲ್ಯಗಳನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋದವರು ಶರತ್ ಚಂದ್ರರು. ವರ್ಗವಿಭಜಿತ, ತಾರತಮ್ಯದಿಂದ ಕೂಡಿದ ಸಮಾಜ ಹೆಣ್ಣುಮಕ್ಕಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂಬುದನ್ನು ಶರತರು ಮನಗಂಡಿದ್ದರು. ಸಣ್ಣ ಮನಸ್ಸು ಮೂಡಿಬರಲು ಮುಖ್ಯ ಕಾರಣ ಉತ್ಪಾದಕ ವ್ಯವಸ್ಥೆ. ಹೆಣ್ಣನ್ನು ಅಡುಗೆ ಮನೆಗೆ ಸೀಮಿತ ಮಾಡಿ ಅವಳ ವಿಚಾರವ್ಯಾಪ್ತಿಯನ್ನು, ಮನಸ್ಥಿತಿಯನ್ನು ಸಣ್ಣದಾಗಿಸಿದ ಇದೇ ಪುರುಷ ಪ್ರಧಾನ ಸಮಾಜ ಮತ್ತೆ ಅವಳನ್ನೇ ಗೇಲಿ ಮಾಡುತ್ತದೆ. ಇದರ ವಿರುದ್ಧ ಶರತ್ ಧ್ವನಿ ಎತ್ತಿದರು. ಅವರ ಮಹಿಳಾ ಪರ ಸಾಹಿತ್ಯ ವಿಧವೆ, ವೇಶ್ಯೆಯರ ವ್ಯಕ್ತಿತ್ವವನ್ನು ಎತ್ತಿ ಹಿಡಿದಿದೆ. ವಿಜ್ಞಾನ ಸತ್ಯವನ್ನು ತೋರಿಸಿಕೊಡುತ್ತದೆ, ಸಾಹಿತ್ಯ ಭಾವ ರಸವನ್ನು ಉತ್ಪತ್ತಿ ಮಾಡುತ್ತದೆ. ಕಾನೂನು ಮಾಡದ ಕಾರ್ಯವನ್ನು ಶರತರ ಸಾಹಿತ್ಯ ಮಾಡಿತು. ವಿಧವಾ ವಿವಾಹದ ಪರವಾಗಿ ಓದುಗರಲ್ಲಿ ತಳಮಳ ಸೃಷ್ಟಿಮಾಡಿ, ಮನಸ್ಸನ್ನು ಪರಿವರ್ತಿಸಿತು. ಅವರ ಬರವಣಿಗೆಯ ತಿರುಳು ಶ್ರೇಷ್ಠ, ರಸ ಪ್ರಧಾನ. ನೈತಿಕ ಮಾತೃತ್ವ ಪ್ರೇಮವನ್ನು ತಮ್ಮ ಕೃತಿಗಳಲ್ಲಿ ಚಿತ್ರಿಸಿ ಆ ಸದ್ಭಾವನೆಗಳನ್ನು, ಮಹಾನ್ ಗುಣಗಳನ್ನು ಇಡೀ ಸಮಾಜಕ್ಕೆ ಮಾದರಿಯಾಗಿಸಿದ್ದಾರೆ.

 

ಬಿಂದುವಿನ ಮಗ, ಪ್ರಾಯಶ್ಚಿತ, ವಿಪ್ರದಾಸ, ವೈಕುಂಠನ ಮೃತ್ಯುಪತ್ರ ಮೊದಲಾದವುಗಳಲ್ಲಿ ಈ ಗುಣಗಳನ್ನು ಕಾಣಬಹುದು. ಸತಿ ಸಾವಿತ್ರಿ, ದಮಯಂತಿಯರನ್ನು ಆದರ್ಶ ಎನ್ನುವ ಸತೀತ್ವ ಪರಿಕಲ್ಪನೆಯನ್ನು ಹೋರಾಡುತ್ತ, ಪ್ರಜಾತಾಂತ್ರಿಕ ಧೋರಣೆಯೊಂದಿಗೆ ನಾರೀತ್ವದ ಪರಿಕಲ್ಪನೆಯನ್ನು ಎತ್ತಿಹಿಡಿದರು. ಕಲೆ, ಸಾಹಿತ್ಯದಲ್ಲಿ ವಾಸ್ತವಿಕ ಪಾತ್ರಗಳನ್ನು ಚಿತ್ರಿಸಿದರು. ಶೇಷಪ್ರಶ್ನೆ ಯಲ್ಲಿ ಕಮಲೆ ಅದಕ್ಕೆ ಉತ್ತಮ ಉದಾಹರಣೆ. ಹಳೆಯ ನಂಬಿಕೆಗಳಿಗೆ, ಸಂಪ್ರದಾಯಗಳಿಗೆ ಸವಾಲು ಹಾಕುವ ವ್ಯಕ್ತಿತ್ವ ಅವಳದ್ದು. ‘ಪಥೇರ್ ದಾಬಿ’ಯಲ್ಲಿ ಸವ್ಯಸಾಚಿ ಅದ್ಭುತ ಕ್ರಾಂತಿಕಾರಿ ಪಾತ್ರ. ಅದು ಕ್ರಾಂತಿಕಾರಿಗಳಿಗೆ ಸ್ಫೂರ್ತಿದಾಯಕ ಕೃತಿಯಾಗಿತ್ತು. ಸ್ಪಷ್ಟವಾದ ಸೈದ್ಧಾಂತಿಕ ದೃಷ್ಟಿಕೋನದಿಂದಾಗಿ ಶರತರು ಇತಿಹಾಸದಲ್ಲಿ ಅದ್ಭುತ ಸಾಹಿತಿಯಾಗಿ ನಿಲ್ಲುತ್ತಾರೆ. ಅವರ ಮನಸ್ಸು ವಿಶಾಲವಾಗಿತ್ತು, ಅಂತರರಾಷ್ಟ್ರೀಯವಾದಿ ಯಾಗಿದ್ದರು.

ಒಟ್ಟಾರೆಯಾಗಿ ನೈತಿಕ ಮೌಲ್ಯಗಳು ಕಣ್ಮರೆಯಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ ಅವರ ಕಥೆ, ಕಾದಂಬರಿಗಳ ಸಂದೇಶ ಅತ್ಯಂತ ಪ್ರಸ್ತುತವಾಗಿದೆ. ಹಳೆಯ ಮೌಲ್ಯಗಳನ್ನು ಬುಡ ಸಮೇತ ಕಿತ್ತೊಗೆದು ಹೊಸ ವಿಚಾರ, ನೀತಿ, ನೈತಿಕ ಮೌಲ್ಯಗಳನ್ನು ಸಮಾಜದಲ್ಲಿ ಬೇರೂರಿಸಲು ಶರತ್ ಸಾಹಿತ್ಯ ಒಂದು ಅಸ್ತ್ರವಾಗಿದೆ” ಎಂದು ಹೇಳಿದರು.

ಎ.ಐ.ಎಂ.ಎಸ್.ಎಸ್ ನ ರಾಜ್ಯ ಅಧ್ಯಕ್ಷರಾದ ಶ್ರೀಮತಿ ಎಂ.ಎನ್. ಮಂಜುಳಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎ.ಐ.ಎಂ.ಎಸ್.ಎಸ್ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಸುಧಾ ಕಾಮತ್ ‘ಸ್ತ್ರೀಮುಕ್ತಿ ವಿಶೇಷ ಸಂಚಿಕೆ’ಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಎಸ್.ಯು. ಸಿ, ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕೆ. ಉಮಾ, ಹಂಪಿ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಶ್ರೀಯುತ ಮುರೆಗೆಪ್ಪರವರು, ಎ.ಐ.ಎಂ.ಎಸ್.ಎಸ್ ಅಖಿಲ ಭಾರತ ಉಪಾಧ್ಯಕ್ಷರಲ್ಲಿ ಒಬ್ಬರಾದ ಅಪರ್ಣ ಬಿ. ಆರ್ ಹಾಗೂ ಎ.ಐ.ಎಂ.ಎಸ್.ಎಸ್ ನ ರಾಜ್ಯ ಕಾರ್ಯದರ್ಶಿ ಶೋಭಾ ಎಸ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿನಿಯರು, ಮಹಿಳೆಯರು ಭಾಗವಹಿಸಿದ್ದರು. ಇದೆ ಸಂದರ್ಭದಲ್ಲಿ ಧಾರವಾಡ ಮತ್ತು ಹಾವೇರಿಯಲ್ಲಿ ಗಾಮೆರ್ಂಟ್ ಮಹಿಳೆಯರು ತಮ್ಮ ಪಿ ಎಫ್ ಹಣಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿ ಗೊತ್ತುವಳಿ ಮಂಡಿಸಿ, ಅನುಮೋದಿಸಲಾಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now