ಕಾಂತಾರ ಸಿನಿಮಾ ಇಡೀ ದೇಶದಾದ್ಯಂತ ಯಶಸ್ವಿ ಪ್ರದರ್ಶನ ಕಂಡಿತ್ತು. ಬಳಿಕ ಅದರ ಪ್ರೀಕ್ವೆಲ್ ಕೂಡ ಶುರು ಮಾಡಿದ್ರು. ಆದರೆ ಅದ್ಯಾಕೋ ಏನೋ ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಸಿನಿಮಾ ತಂಡಕ್ಕೆ ಕಾಡ್ತಾನೆ ಇದೆ. ಈಚೆಗಷ್ಟೇ ಸಿನಿಮಾದ ಜೂನಿಯರ್ ಆರ್ಟಿಸ್ಟ್ ಸಾವನ್ನಪ್ಪಿದ್ದಾರೆ. ಕೇರಳ ಮೂಲದ ಕಪಿಲ್ ಸೌಪರ್ಣಿಕಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ತನಿಖೆಗೆ ಒತ್ತಾಯ ಹಾಕಿದೆ.
ಇಲ್ಲಿ ಸಹ ಕಲಾವಿದನ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಮೃತರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದೆ. ಅಷ್ಟೇ ಅಲ್ಲದೆ ಸಿನಿಮಾ ಸೆಟ್ ಗಳಲ್ಲಿ ಕಲಾವಿದರು, ತಂತ್ರಜ್ಞರು, ಕಲಾವಿದರ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಇಂಡಿಯನ್ 2, ಸರ್ದಾರ್ 2 ಈಗ ಕಾಂತಾರ 1 ಸೆಟ್ ನಲ್ಲಿ ಆಗಿರುವ ಘಟನೆಗಳ ಬಗ್ಗೆ ಆತಂಕ ವ್ಯಕ್ತವಾಗಿದೆ. ಇಂತಹ ಘಟನೆಗಳು ನಡೆದಾಗ ನಿರ್ಮಾಣ ಸಂಸ್ಥೆಗಳು ಮುಚ್ಚಿ ಹಾಕುವ ಪ್ರಯತ್ನ ಮಾಡ್ತಾರೆ. ಹೀಗಾಗಿ ಸೂಕ್ತ ತನಿಖೆಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಂಬಾಳೆ ಕೂಡ ಮನವಿ ಮಾಡಿದೆ. ಎಂ.ಎಫ್. ಕಪಿಲ್ ಅವರ ನಿಧನಕ್ಕೆ ನಮ್ಮ ಆಗಾದವಾದ ಸಂತಾಪಗಳು. ಅವರ ಕುಟುಂಬಕ್ಕೆ ಮತ್ತು ಆತ್ಮೀಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮೆಲ್ಲರ ಸಹಾನುಭೂತಿ ಅವರೊಂದಿಗಿದೆ.


ಈ ಹಿನ್ನೆಲೆಯಲ್ಲಿ, ಈ ಘಟನೆ ಕಾಂತಾರ ಚಿತ್ರೀಕರಣದ ಸ್ಥಳದಲ್ಲಿ ಸಂಭವಿಸಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಆ ದಿನ ಯಾವುದೇ ಚಿತ್ರೀಕರಣ ನಿಗದಿಯಾಗಿರಲಿಲ್ಲ, ಮತ್ತು ಈ ಘಟನೆ ಅವರ ವೈಯಕ್ತಿಕ ಕಾರ್ಯಕ್ರಮದಲ್ಲಿ, ಚಲನಚಿತ್ರ ಸಂಬಂಧಿತ ಚಟುವಟಿಕೆಗಳ ವ್ಯಾಪ್ತಿಯ ಹೊರಗೆ ಸಂಭವಿಸಿದೆ. ದಯವಿಟ್ಟು ಈ ಘಟನೆಯನ್ನು ಕಾಂತಾರ ಚಿತ್ರ ಅಥವಾ ಅದರ ಸಿಬ್ಬಂದಿಯೊಂದಿಗೆ ಯಾವುದೇ ಸಂಬಂಧವನ್ನು ಕಲ್ಪಿಸಬಾರದು ಎಂದು ನಾವು ವಿನಂತಿಸುತ್ತೇವೆ ಎಂದು ಪತ್ರದ ಮೂಲಕ ಕೇಳಿಕೊಂಡಿದೆ.








