Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ದೇಶ ಬಿಟ್ಟು ತೊಲಗಿ ಚಳುವಳಿ : ಚಿತ್ರದುರ್ಗದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 10 : ಬಹುರಾಷ್ಟ್ರೀಯ ಕಂಪನಿಗಳನ್ನು ಭಾರತದಿಂದ ತೊಲಗಿಸುವುದಕ್ಕಾಗಿ ದೇಶಾದ್ಯಂತ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಚಳುವಳಿಗೆ ಬೆಂಬಲಿಸಿ ವಿವಿಧ ಸಂಘಟನೆಗಳು ಗಾಂಧಿ ವೃತ್ತದಲ್ಲಿ ಒಂದು ಗಂಟೆಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಪರಿಣಾಮ ಪ್ರವಾಸಿ ಮಂದಿರದ ಮುಂಭಾಗದಿಂದ ಗಾಂಧಿ ಸರ್ಕಲ್‍ವರೆಗೂ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು.

 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಯುಕ್ತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ವಿದೇಶಿ ಕಂಪನಿಗಳು, ಕಾರ್ಪೊರೇಟರ್‍ಗಳು, ಬಂಡವಾಳ ಶಾಹಿಗಳು ನಮ್ಮ ದೇಶದ ರೈತರು ಕಾರ್ಮಿಕರ ಮೇಲೆ ಸವಾರಿ ಮಾಡುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದ ಕಾರಣ ಸಾಲದ ಸುಳಿಗೆ ಸಿಲುಕಿರುವ ರೈತ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾನೆ. ನರೇಗಾ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಜಿರಾಮ್‍ಜಿ ಎಂದು ಬದಲಾವಣೆ ಮಾಡಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಬಡವರಿಗೆ ಕೆಲಸ ಸಿಗುತ್ತಿಲ್ಲ ಎಂದು ಕೇಂದ್ರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

 

ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಕಾಯಿದೆಗಳಿಗೆ ತಿದ್ದುಪಡಿ ತಂದಿರುವುದರಿಂದ ದಿನಕ್ಕೆ ಎಂಟು ಗಂಟೆಗಳ ಕಾಲ ದುಡಿಯುತ್ತಿರುವ ಕಾರ್ಮಿಕರು ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡಬೇಕಿದೆ. ಮಹಿಳೆಯರು ರಾತ್ರಿ ಪಾಳೆಯದಲ್ಲಿ ಕೆಲಸ ಮಾಡಬೇಕೆಂಬ ಷರತ್ತು ವಿಧಿಸಿದೆ. ಕೈಗಾರಿಕಾ ನ್ಯಾಯಲಯದ ಬದಲಿಗೆ ಕಾರ್ಮಿಕ ನ್ಯಾಯಾಲಯ ಗುತ್ತಿಗೆ ನೌಕರಿಯನ್ನು ಬಿಟ್ಟರೆ ಇನ್ನು ಮುಂದೆ ಯಾರಿಗೂ ಖಾಯಂ ಕೆಲಸವಿಲ್ಲ. ಇವು ಕಾರ್ಮಿಕರಿಗೆ ಮರಣ ಶಾಸಕನವಾಗಿ ಪರಿಣಮಿಸಿದೆ. ರೈತರಿಗೆ ಅತ್ಯವಶ್ಯಕವಾಗಿರುವ ಬೀಜ, ರಸಗೊಬ್ಬರ, ಕೀಟನಾಶಕಗಳಿಗೆ ಸಿಂಪಡಿಸುವ ಔಷಧಿಗಳ ಮೇಲೂ ಕೇಂದ್ರ ಸರ್ಕಾರ ಲಗ್ಗೆಯಿಟ್ಟಿರುವುರಿಂದ ರೈತ ಹೈರಾಣಾಗಿದ್ದಾನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು, ಕಾರ್ಮಿಕರ ಹಿತ ಕಾಯುವ ಕಾಯಿದೆಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಗಾಂಧಿಜಿ ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸಿದ ಭಾಗವಾಗಿ ಈಗ ಕಾರ್ಪೊರೇಟ್ ಕಂಪನಿಗಳನ್ನು ದೇಶದಿಂದ ಓಡಿಸುವ ಚಳುವಳಿ ಆರಂಭವಾಗಿದೆ. ಸಾವಿರಾರು ಬಹುರಾಷ್ಟ್ರೀಯ ಕಂಪನಿಗಳು ನಮ್ಮ ದೇಶಕ್ಕೆ ಕಾಲಿಟ್ಟಿವೆ. ಕೇಂದ್ರ ಸರ್ಕಾರ ಜನ ವಿರೋಧಿ ಹಾಗೂ ರೈತ ವಿರೋಧಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

 

ರೈತ ಮುಖಂಡ ಆರ್.ಬಿ.ನಿಲಿಂಗಪ್ಪ ಮಾತನಾಡಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಬೇಕಾಗಿರುವ ಸಾಮಗ್ರಿಗಳು ತುಕ್ಕು ಹಿಡಿಯುತ್ತಿವೆ. ಕೇಂದ್ರ ಸರ್ಕಾರ 5300 ಕೋಟಿ ರೂ.ಗಳನ್ನು ಘೋಷಿಸಿದೆ. ಇದುವರೆವಿಗೂ ನಯಾ ಪೈಸೆಯೂ ಬಿಡುಗಡೆಯಾಗಿಲ್ಲ. ಕೆರೆಗಳಿಗೆ ನೀರು ತುಂಬಿಸಿ ಬರ ಪೀಡಿತ ಚಿತ್ರದುರ್ಗ ಜಿಲ್ಲೆಯ ರೈತರು ಕಾರ್ಮಿಕರು, ಬಡವರ ಬದುಕನ್ನು ಹಸನುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ ವಿದೇಶಿ ಕಂಪನಿಗಳನ್ನು ದೇಶದಿಂದ ಒದ್ದೋಡಿಸಲು ವಿವಿಧ ಸಂಘಟನೆಗಳು ಭಾರತಾದ್ಯಂತ ಚಳುವಳಿಗೆ ಇಳಿದಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಳು ರೈತ ಕಾರ್ಮಿಕ ವಿರೋಧಿ ನೀತಿ ಅನುಸರಿಬಾರದೆಂದರು.
ಸಂಯುಕ್ತ ಹೋರಾಟ ಕರ್ನಾಟಕ ಸಂಚಾಲಕ ಕುಮಾರ್ ಸಮತಳ ಮಾತನಾಡುತ್ತ ರೈತರು ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಬಿಡದಿ ಟೌನ್‍ಶಿಪ್‍ಗಾಗಿ ರೈತರ ಫಲವತ್ತಾದ ಭೂಮಿಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ಕೊಡುತ್ತಿಲ್ಲ. ಮನೆಯಿಲ್ಲದವರಿಗೆ ಮನೆಗಳನ್ನು ಕೊಡಬೇಕೆನ್ನುವುದು ನಮ್ಮ ಬಹುದಿನಗಳ ಬೇಡಿಕೆ ಎಂದರು.

 

ರೈತ ಮುಖಂಡರುಗಳಾದ ಧನಂಜಯ ಹಂಪಯ್ಯನಮಾಳಿಗೆ, ಹೊರಕೇರಪ್ಪ, ಡಿ.ಎಸ್.ಮಲ್ಲಿಕಾರ್ಜುನ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಸುರೇಶ್, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ, ಸಿಐಟಿಯು.ನ ಮಲಿಯಪ್ಪ, ತಿಪ್ಪೇಸ್ವಾಮಿ, ಅಖಂಡ ಕರ್ನಾಟಕ ರೈತ ಸಂಘದ ಶಾಂತಮ್ಮ, ಹನುಮಂತಪ್ಪ ಗೋನೂರು, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ ಸೇರಿದಂತೆ ಸಂಯುಕ್ತ ಕಿಸಾನ್ ಮೋರ್ಚಾ, ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ, ಸಂಯುಕ್ತ ಹೋರಾಟ ಕರ್ನಾಟಕದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now