ಬೆಂಗಳೂರು: ಶಬರಿಮಲೆಗೆ ಭಕ್ತರ ದಂಡು ಸಾಮಾನ್ಯವಾಗಿಯೇ ಈ ಸಮಯಕ್ಕೆ ಭಕ್ತರು ಶಬರಿಮಲೆಗೆ ಹೋಗ್ತಾರೆ. ಧರಿಸಿದ ಮಾಲೆಯನ್ನು ಬಿಟ್ಟು, ಅಯ್ಯಪ್ಪನ ಭಕ್ತಿಗೆ ಪಾತ್ರರಾಗುತ್ತಾರೆ. ಆದರೆ ಶಬರಿಮಲೆಯಲ್ಲಿ ಈಗಾಗಲೇ ಸುಮಾರು ಎರಡು ಲಕ್ಷಕ್ಕೂ ಅಧಿಕ ಭಕ್ತರು ಒಂದೇ ಜಾಗದಲ್ಲಿ ಸೇರಿದ್ದಾರೆ. ಇದರಿಂದ ಯಾವುದೇ ಸಮಸ್ಯೆಯಾಗದಂತೆ ಅಲ್ಲಿನ ಆಡಳಿತ ಮಂಡಳಿ ಕೂಡ ಗಮನ ಹರಿಸಿದೆ. ಇತ್ತ ಕರ್ನಾಟಕದಿಂದ ಹೋಗುವ ಭಕ್ತರ ಬಗ್ಗೆ ಕರ್ನಾಟಕದಲ್ಲಿ ಕಾಳಜಿ ವಹಿಸಲಾಗಿದೆ. ಹೀಗಾಗಿಯೇ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕೇರಳದ ಮುಖ್ಯಕಾರ್ಯದರ್ಶಿ ಡಾ.ಎ.ಜಯತಿಲಕ್ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದ ಯಾತ್ರಿಕರು ಹೆಚ್ಚಾಗಿ ಬಳಸುವ ಪ್ರವೇಶ ಮಾರ್ಗಗಳಲ್ಲಿ ವಿಶೇಷವಾಗಿ ಮಹತ್ವದ ದಿನಗಳಲ್ಲಿ ಹಡಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆ ಮಾಡುವುದು, ಅಗತ್ಯ ವೈದ್ಯಕೀಯ ನೆರವು, ತುರ್ತು ಪ್ರತಿಕ್ರಿಯೆ ಸೇವೆಗಳು ಮತ್ತು ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಆರೋಗ್ಯ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸುವುದು. ಯಾತ್ರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಹಾಗೂ ಸುರಕ್ಷತಾ ಕ್ರಮಗಳನ್ನು ವಿಶೇಷವಾಗಿ ಸೂಕ್ಷ್ಮ ಅಥವಾ ಹೆಚ್ಚಿನ ಸಾಂದ್ರತೆಯ ಸ್ಥಳಗಳಲ್ಲಿ ವ್ಯವಸ್ಥೆ ಮಾಡುವ ಬಗ್ಗೆ ಪತ್ರ ಬರೆಯಲಾಗಿದೆ.

ಕನ್ನಡ ಭಾಷೆ ಸೇರಿದಂತೆ ಬಹುಭಾಷೆಗಳ ಸಂವಹನ ಹೊಂದಿರುವ ಸಹಾಯ ಕೇಂದ್ರಗಳು ಅಥವಾ ಮಾಹಿತಿ ಕೇಂದ್ರಗಳ ಸ್ಥಾಪನೆ ಮಾಡುವುದು. ತುರ್ತು ಪರಿಸ್ಥಿತಿ ಅಥವಾ ವಿಶೇಷ ಅವಶ್ಯಕತೆಗಳ ಸಂದರ್ಭದಲ್ಲಿ ಕರ್ನಾಟಕದ ಅಧಿಕಾರಿಗಳೊಂದಿಗೆ ಸಮನ್ವಯವನ್ನು ಸಾಧಿಸಲು ಕೇರಳದಲ್ಲಿ ಸಂಪರ್ಕ ಕೇಂದ್ರವನ್ನು ಸ್ಥಾಪಿಸುವುದು. ಪ್ರತಿ ತೀರ್ಥಯಾತ್ರೆಯ ಋತುವಿನಲ್ಲಿ ಕೇರಳ ಸರ್ಕಾರವು ನೀಡುವ ನಿರಂತರ ಸಹಕಾರವನ್ನು ಕರ್ನಾಟಕ ಸರ್ಕಾರವು ಆತ್ಮೀಯವಾಗಿ ಗೌರವಿಸುತ್ತದೆ. ನಿಮ್ಮ ಬೆಂಬಲದೊಂದಿಗೆ, ಈ ವರ್ಷದ ತೀರ್ಥಯಾತ್ರೆಯು ಸುಗಮವಾಗಿ ಮುಂದುವರಿಯುತ್ತದೆ ಮತ್ತು ಎಲ್ಲಾ ಭಕ್ತರಿಗೆ ಸುರಕ್ಷಿತ ಮತ್ತು ಅರ್ಥಪೂರ್ಣ ಅನುಭವವನ್ನು ನೀಡುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.












