ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 01 : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಯ ಗ್ರಾಮದ ಹೊಲವೊಂದರಲ್ಲಿ ಉಳುಮೆ ಮಾಡುವಾಗ ಕಾಮಗೇತಿ ವಂಶಸ್ಥರ ಶಾಸನವೊಂದು ದೊರೆತಿದೆ. ಶಾಸನವು ಕರಿಕಲ್ಲಿನಲ್ಲಿ ಕೆತ್ತನೆಯಾಗಿದ್ದು 17 ಸಾಲುಗಳನ್ನು ಒಳಗೊಂಡಿದೆ ಲಿಪಿಕಾರ ಅಥವಾ ಖಂಡರಣೆಕಾರನ ಪ್ರಮಾದದಿಂದ ಶಾಸನದಲ್ಲಿ ವ್ಯಾಕರಣದೋಷ ಅಲ್ಲಲ್ಲಿ ನುಸುಳಿದೆ. ಕನ್ನಡ ಲಿಪಿ ಹಾಗೂ ಭಾಷೆಯಲ್ಲಿ ಇರುವ ಈ ಲಿಪಿಗಲ್ಲು ಕಾರ್ತಿಕ ಶುದ್ಧ 10 ಗುರುವಾರದಂದು ರಚನೆಯಾಗಿದ್ದು ಕಂಡುಬರುತ್ತದೆ. ಇಲ್ಲಿ ಶಕವರ್ಷ ಹಾಗೂ ಸಂವತ್ಸರವನ್ನು ಗುರುತಿಸುವ ಅಕ್ಷರಗಳು ಅಸ್ಪಷ್ಟವಾಗಿವೆ ಹಾಗಾಗಿ ಇಮ್ಮಡಿ ಚಿಕ್ಕಣ್ಣ ಅರಸನ ಆಳ್ವಿಕೆಯ ಕಾಲದಲ್ಲಿ ಶಾಸನ ರಚನೆಯಾಗಿದೆ ಎನ್ನಲಡ್ಡಿಯಿಲ್ಲ ಕಾಮಗೇತಿ ಇಮ್ಮಡಿ ಚಿಕ್ಕಣ್ಣ ಅರಸರ ಕಾಲ ಕ್ರಿ.ಶ 1575-86 ರ ಮಧ್ಯದ ಅವಧಿಯದ್ದು ಎಂದು ಗುರುತಿಸಬಹುದು.

ಕಾಮಗೇತಿ ಯಿಂಮಡಿಚಿಕಂಣನಾಯಕ ಅರಸನು ಆಳುತ್ತಿದ್ದಾಗ ಅವನ ಅಧೀನ ಅಧಿಕಾರಿಯಾದ ಲಕ್ಕಜೀಯನ ಮಗ ದೊಡ್ಡಗೌಡ ಜವಗೊಂಡನಹಳ್ಳಿಯಲ್ಲಿ ಕೆರೆಯೊಂದನ್ನು ಕಟ್ಟಿಸಿದನು. ತನ್ನ ಆಜ್ಞೆಯ ಮೇರೆಗೆ ಜನೋಪಕಾರ ನಿಮಿತ್ತ ಕೆರೆ ಕಟ್ಟಿಸಿದ ದೊಡ್ಡಗೌಡನಿಗೆ ಇಮ್ಮಡಿ ಚಿಕ್ಕಣ್ಣ ಅರಸನು ಉಂಬಳಿ ಭೂಮಿಯನ್ನು ಕೊಟ್ಟಿರುವುದು ಶಾಸನದ ಮುಖ್ಯ ಸಾರ.
ಶಾಸನದ ಕೊನೆಗೆ ಶಾಪಾಶಯವಿದ್ದು ದಾನ ಭೂಮಿಯನ್ನು ದೊಡ್ಡಗೌಡರ ಕುಟುಂಬದವರು ಸೂರ್ಯ, ಚಂದ್ರ ಇರುವವರೆಗೂ ಸುಖದಲ್ಲಿ ಉಂಡುಕೊಂಡು ಹೋಗತಕ್ಕದ್ದು. ಈ ಭೂಮಿಯನ್ನು ಯಾರಾದರೂ ಅಪಹರಿಸಿದರೆ ಕಾಶಿಯಲ್ಲಿ ಆಕಳನ್ನು ಕೊಂದ ಪಾಪಕ್ಕೆ ಹೋಗುವರು ಈ ಆಜ್ಞೆಯನ್ನು ತಪ್ಪಿದವರ ಬಾಯಿಯಲ್ಲಿ ಕತ್ತೆಯ ಗುಪ್ತಾಂಗ ಎಂಬ ಉಗ್ರ ಶಾಪಾಶಯ ಕೊನೆಯಲ್ಲಿ ಇದೆ ಶಾಸನವು ಅಲ್ಲಲ್ಲಿ ತ್ರುಟಿತವಾಗಿದ್ದು ಇನ್ನೂ ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸುವ ಅಗತ್ಯವಿದೆ. ಈ ಶಾಸನ ದೊರೆತ ಸ್ಥಳವನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕರಾದ ಪ್ರಹ್ಲಾದ್. ಜಿ ಪರಿವೀಕ್ಷಣೆ ನೆಡೆಸಿದರು.

ಈ ಸಂದರ್ಭದಲ್ಲಿ ಜವಗೊಂಡನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಮಹಾಂತೇಶ್, ಗ್ರಾಮದ ಮಖ್ಯಸ್ಥರಾದ ಜಿ. ಹನುಮಂತೇಗೌಡ, ಚಿತ್ರಲಿಂಗಪ್ಪಕೆ.ಹೆಚ್ ಹಾಗೂ ಗ್ರಾಮಸ್ಥರಿದ್ದರು. ಶಾಸನವನ್ನು ಚಿತ್ರದುರ್ಗದ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ರವಾನಿಸಲಾಯಿತು. ಈ ಶಾಸನವನ್ನು ಓದಿ ಸಹಕರಿಸಿದ ಡಾ. ರವಿಕುಮಾರ ಕೆ ನವಲಗುಂದ ಹಾಗೂ ಶಾಸನವನ್ನು ಸಂರಕ್ಷಿಸಲು ನರವಾದ ಗ್ರಾಮಸ್ಥರಿಗೆ ಹಾಗೂ ಇಲಾಖೆಯ ಸಿಬ್ಬಂದಿಗೆ ಧನ್ಯವಾದಗಳು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










