ಸುದ್ದಿಒನ್, ಚಿತ್ರದುರ್ಗ, ನವೆಂಬರ್. 16 : ಚಿತ್ರದುರ್ಗದಿಂದ ಸುಮಾರು 28 ಕಿ.ಮೀ ದೂರದಲ್ಲಿರುವ ಪ್ರಸ್ತುತ ಹೊಳಲ್ಕೆರೆ ತಾಲ್ಲೂಕಿಗೆ ಸೇರಿರುವ ರಂಗನಾಥಸ್ವಾಮಿ ದೇವಾಲಯದಲ್ಲಿ ಪಾಳೇಗಾರರ ಅವಧಿಯ ಅಪರೂಪದ ಶಾಸನ ಪತ್ತೆಯಾಗಿದೆ ಎಂದು ಸಂಶೋಧಕರಾದ ಡಾ.ಮಹೇಶ್ ಕುಂಚಿಗನಾಳು ತಿಳಿಸಿದ್ದಾರೆ.
ಖ್ಯಾತ ಸಂಶೋಧಕರಾದ ಡಾ.ಲಕ್ಷಣ್ ತೆಲಗಾವಿಯವರ ಸೂಚನೆಯ ಮೇರೆಗೆ ರಂಗನಾಥಸ್ವಾಮಿ ದೇವಾಲಯದಲ್ಲಿ ಕ್ಷೇತ್ರಕಾರ್ಯ ಕೈಗೊಂಡಾಗ ಈ ಶಾಸನ ಪತ್ತೆಯಾಗಿದೆ. ದೇವಾಲಯವನ್ನು ಹೊಂದಿಕೊಂಡಂತೆ ಆಹೋಬಲ ನರಸಿಂಹ ದೇವಾಲಯದ ಸಮೀಪದಲ್ಲಿ ಪ್ರಬುದ್ಧರವರ ಕಣ್ಣಿಗೆ ಶಾಸನ ಕಾಣಿಸಿದೆ. ತಕ್ಷಣವೇ ಡಾ.ಮಹೇಶ್ ಕುಂಚಿಗನಾಳು ರವರ ಗಮನಕ್ಕೆ ತಂದಿದ್ದಾರೆ. ಪರಿಶೀಲಿಸಿದ ಡಾ.ಮಹೇಶ್ರವರು ವಿಜಯನಗರ ಪತನದ ನಂತರದ ಪಾಳೇಯಗಾರರ ಅವಧಿಗೆ ಸಂಬಂಧಪಟ್ಟದೆಂದು ಧೃಢಪಡಿಸಿದ್ದಾರೆ.
ಡಾ.ಮಹೇಶ್ ಕುಂಚಿಗನಾಳು ರವರು ನೀಡಿರುವ ಮಾಹಿತಿ ಪ್ರಕಾರ ಹೊರಕೇರೆ ರಂಗನಾಥಸ್ವಾಮಿ ದೇವಾಲಯವು ವಿವಿಧ ಅರಸರುಗಳ ಕಾಲದಲ್ಲಿ ಅಭಿವೃದ್ದಿಯಾಗುತ್ತ ಬಂದಿದೆ. ಪಾಳೇಯಗಾರರ ಆಡಳಿತ ಪೂರ್ವದಲ್ಲೇ ದೇವಾಲಯ ನಿರ್ಮಾಣವಾಗಿದೆ. ಗರ್ಭಗುಡಿಯ ಮುಂದೆ ಇರುವ ಕಂಬಗಳು ಹೊಯ್ಸಳ ಶೈಲಿಯನ್ನು ನೆನಪಿಸುತ್ತವೆ. ಈ ದೇವಾಲಯದ ನವರಂಗದ ಕಂಬದ ಮೇಲೆ ಕೊರೆಯಲಾಗಿರುವ ಕ್ರಿ.ಶ 1465ರ ಶಾಸನದಲ್ಲಿ ರಂಗನಾಥ ದೇವಾಲಯವನ್ನು ತಿರುವೆಂಗಳನಾಥ (ವೆಂಕಟನಾಥ) ದೇವರು ಎಂದು ಕರೆಯಲಾಗಿದೆ.
ಈ ದೇವಾಲಯದ ಸಮೀಪ ಸಿಕ್ಕಿರುವ ಕಸ್ತೂರಿ ರಂಗಪ್ಪನಾಯಕರ ಕಾಲದ ಕ್ರಿ.ಶ. 1756ರ ಶಾಸನವೊಂದರಲ್ಲಿ ಹೊರಕೆರೆ ರಂಗಧಾಮ ಎಂದು ಕರೆಯಲಾಗಿದೆ. 15ನೇ ಶತಮಾನದ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದ ತಿರುವೆಂಗನಾಥ ಎಂಬ ಹೆಸರು ಕಣ್ಮರೆಯಾಗಿ ರಂಗಧಾಮ ಎಂದು 18ಶತಮಾನದ ಹೊತ್ತಿಗೆ ಕರೆಸಿಕೊಂಡಿದೆ ಎಂದು ಡಾ.ಮಹೇಶ್ ರವರು ತಿಳಿಸಿದ್ದಾರೆ.
ಪ್ರಸ್ತುತ ಸಿಕ್ಕಿರುವ ಹೊಸ ಶಾಸನವು 5 ಸಾಲುಗಳನ್ನು ಒಳಗೊಂಡಿದೆ. ನಂದನ ಹೊಸೂರಿನ ಗೋವಿಂದ ನೀಡಿದ ಸೇವೆಯನ್ನು ತಿಳಿಸುತ್ತದೆ. ಯಾವ ರೀತಿಯ ಸೇವೆ ತಿಳಿದು ಬಂದಿರುವುದಿಲ್ಲ ದೇವಾಲಯದ ಪ್ರಕಾರದ ಗೋಡೆಯಲ್ಲಿ ಶಾಸನ ಇರುವುದರಿಂದ ನಂದನ ಹೊಸೂರಿನ ಗೋವಿಂದ ಈ ದೇವಾಲಯದ ಪ್ರಾಕಾರ ಗೋಡೆಯನ್ನು ನಿರ್ಮಿಸಿರಬೇಕೆಂದು ಡಾ.ಮಹೇಶ್ರವರು ಅಭಿಪ್ರಾಯ ಪಟ್ಟಿದ್ದಾರೆ.
ಶಾಸನದಲ್ಲಿ ಪ್ರಮತಿ ಸಂವತ್ಸರದ ಬಳಕೆಯಾಗಿರುವುದರಿಂದ 1639 ಹಾಗೂ 1693ರ ಅವಧಿಯದ್ದಾಗಿರಬಹುದೆಂದು ತಿಳಿಸಿದ್ದಾರೆ. ಈ ಎರಡು ಅವಧಿಯಲ್ಲಿ ಪ್ರಮತಿ ಸಂವತ್ಸರ ಕಾಣಿಸಿಕೊಂಡಿದ್ದಾರೆ. ಸ್ಥಳೀಯ ಜನಪದೀಯ ಐತಿಹ್ಯಗಳಲ್ಲಿ ನಂದನ ಹೊಸೂರಿನ ಹೊತೆಗೆ ಇರುವ ಸಾಂಸ್ಕೃತಿಕ ಸಂಘರ್ಷವನ್ನು ಬೇರೊಂದು ನೆಲೆಯಲ್ಲಿ ಅರ್ಥೈಸಲು ಈ ಶಾಸನ ಮಹತ್ವದ ದಾಖಲೆಯಾಗಿದೆ ಎಂದು ಡಾ.ಮಹೇಶ್ ರವರು ತಿಳಿಸಿದ್ದಾರೆ. ಶಾಸನ ಪಠ್ಯ ಓದಿಕೊಟ್ಟ ಶಾಸನ ತಜ್ಞರಾದ ಶಶಿಕುಮಾರ್ನಾಯ್ಕ್ ಕ್ಷೇತ್ರಕಾರ್ಯದಲ್ಲಿ ನೆರವಾದ ದೇವಾಲಯದ ಅರ್ಚಕರಾದ ಹೊರಕೇರಪ್ಪ, ಪ್ರಿಯಾಂಕ, ಪ್ರತ್ಯುಷ್, ಪ್ರಬುದ್ಧರಿಗೆ ಧನ್ಯವಾದ ತಿಳಿಸಿದ್ದಾರೆ.

ಮಾಹಿತಿ
ಡಾ.ಮಹೇಶ್ ಕುಂಚಿಗನಾಳು
ಉಪನ್ಯಾಸಕರು, ಚಿತ್ರದುರ್ಗ
ಮೊ : 9738573758











