ಬಳ್ಳಾರಿ : ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ 2047ರ ವೇಳೆಗೆ, ಯುವ ಜನತೆ ದೇಶವನ್ನು ವಿಕಸಿತ ಭಾರತವನ್ನಾಗಿ ನಿರ್ಮಿಸುವ ಮಹಾಸಂಕಲ್ಪದಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಕರೆ ನೀಡಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮOದಿರ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ 2024-25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವಿಶ್ವವಿದ್ಯಾಲಯವು ಕೇವಲ ಇಟ್ಟಿಗೆ ಮತ್ತು ಕಲ್ಲುಗಳಿಂದ ನಿರ್ಮಿತವಾದ ಕಟ್ಟಡವಲ್ಲ, ಬದಲಿಗೆ ಮಹಾನ್ ಸಾಮ್ರಾಟ್ ರಾಜ ಕೃಷ್ಣದೇವರಾಯರು ಕಲೆ, ಸಾಹಿತ್ಯ, ವಾಸ್ತುಶಿಲ್ಪ ಹಾಗೂ ಲೋಕಕಲ್ಯಾಣದ ಸ್ವರ್ಣಯುಗವನ್ನು ಸೃಷ್ಟಿಸಿದ ಐತಿಹಾಸಿಕ ಮತ್ತು ಗೌರವಶಾಲಿ ನೆಲದಲ್ಲಿದೆ. 2010ರಲ್ಲಿ ತನ್ನ ಸ್ಥಾಪನೆಯಾದಾಗಿನಿಂದ ಈ ವಿಶ್ವವಿದ್ಯಾಲಯವು ಕಡಿಮೆ ಸಮಯದಲ್ಲಿ ಉನ್ನತ ಸಾಧನೆಗಳನ್ನು ಮಾಡಿದೆ ಎಂದು ಹೇಳಿದರು.
ಲೋಕಭವನ ಕರ್ನಾಟಕದ ಯತ್ನದ ಮೇರೆಗೆ ಕೆ.ಕೆ.ಆರ್.ಡಿ.ಬಿ. ಯಿಂದ ಹಂಚಿಕೆ ಮಾಡಲಾದ 42 ಕೋಟಿ ರೂ. ಅನುದಾನದೊಂದಿಗೆ ಡಿಜಿಟಲ್ ಆಧಾರಭೂತ ರಾಜ್ಯದ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಗ್ರೀನ್ ಕ್ಯಾಂಪಸ್ , ಕೃತಕ ಬುದ್ಧಿಮತ್ತೆನಂತಹ ಆಧುನಿಕ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ತೃತೀಯ ಲಿಂಗಿಗಳ ಸಮುದಾಯ ಹಾಗೂ ಸ್ವಚ್ಛತಾ ಕಾರ್ಮಿಕರ ಮಕ್ಕಳಿಗಾಗಿ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ನೀಡುವ ಮೂಲಕ ವಿಶ್ವವಿದ್ಯಾಲಯವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನೈಜ ನಿದರ್ಶನವಾಗಿದೆ ಎಂದರು.
ವಿದ್ಯಾರ್ಥಿಗಳ ಕೈಯಲ್ಲಿರುವ ಡಿಗ್ರಿ ಕೇವಲ ಕಾಗದದ ತುಂಡಲ್ಲ, ಅದು ಅವರ ಪರಿಶ್ರಮದ ಪ್ರಮಾಣ ಹಾಗೂ ಸಮಾಜದ ಮೇಲಿನ ಜವಾಬ್ದಾರಿಯ ಪಾಸ್ ಪೋರ್ಟ್ ಆಗಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮಾತುಗಳಂತೆ, ಶಿಕ್ಷಣದ ಮೂಲಕ ಮಾತ್ರ ಮನುಷ್ಯನ ಮೆದುಳಿನ ಸದುಪಯೋಗ ಮಾಡಲು ಸಾಧ್ಯ. ಸ್ವಾಮಿ ವಿವೇಕಾನಂದರ ಸ್ಪಷ್ಟ ಸಂದೇಶದAತೆ ಚರಿತ್ರೆ, ಮಾನಸಿಕ ವಿಕಾಸ, ಮತ್ತು ಬುದ್ಧಿಯ ವಿಕಾಸವನ್ನುಂಟುಮಾಡುವ ಶಿಕ್ಷಣ ನಮಗೆ ಅಗತ್ಯವಿದೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಯುವಕರಿಗೆ ‘ಕನಸುಗಳು ಎಂದರೆ ರಾತ್ರಿ ಮಲಗಿದಾಗ ಕಾಣುವುದಲ್ಲ, ಅವು ನಮಗೆ ನಿದ್ರೆಯನ್ನೇ ಮಾಡದಂತೆ ಮಾಡುವುದು’ ಎಂದು ಬೋಧಿಸಿದ್ದಾರೆ ಎಂದರು.
ಯುವ ಸಮುದಾಯಕ್ಕೆ ಪಂಚ ಸಂಕಲ್ಪಗಳ ಆಹ್ವಾನ:
ಯುವಜನರಿಗೆ ಐದು ಪ್ರಮುಖ ಸಂಕಲ್ಪಗಳನ್ನು ಕೈಗೊಳ್ಳುವಂತೆ ಕರೆ ನೀಡಿದ ರಾಜ್ಯಪಾಲರಾದ ಡಾ.ಸುಧಾ ಯಾದವ್ ಅವರು, ಉದ್ಯೋಗಿಗಳಾಗುವುದಷ್ಟೇ ಅಲ್ಲ, ಉದ್ಯೋಗದಾತರಾಗಿ-ಉದ್ಯಮಶೀಲತೆಯಿಂದ ಹೊಸ ಸ್ಟಾರ್ಟಪ್, ನಾವೀನ್ಯತೆ ಹುಟ್ಟುಹಾಕಿ, ಇತರರಿಗೆ ಅವಕಾಶ ಸೃಷ್ಟಿಸುವವರಾಗಿ. ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಭಾರತದ ಧ್ವಜವಾಹಕರಾಗಿ ಆರೋಗ್ಯವಂತ ಯುವಕನೇ ಸಶಕ್ತ ರಾಷ್ಟç ನಿರ್ಮಿಸಬಲ್ಲ-ನೀವೂ ದೂರವಿರಿ, ಗೆಳೆಯರನ್ನೂ ಉಳಿಸಿ. ನಿರಂತರ ಕಲಿಕೆಯ ಹಂಬಲ ಇರಲಿ – ತಂತ್ರಜ್ಞಾನ ಪ್ರತಿದಿನ ಬದಲಾಗುತ್ತಿದೆ. ಎಐ ಮತ್ತು ಡಿಜಿಟಲ್ ಯುಗದಲ್ಲಿ ಪ್ರತಿದಿನ ತಮ್ಮನ್ನು ಅಪ್ಡೇಟ್ ಮಾಡಿಕೊಳ್ಳುವವನೇ ಮುಂದೆ ಹೋಗಲು ಸಾಧ್ಯ. ಪ್ರಕೃತಿಯ ರಕ್ಷಕರಾಗಿ – ಪರಿಸರ ಅಸಮತೋಲನ ಇಂದಿನ ಅತಿ ದೊಡ್ಡ ಸವಾಲು – ಏಕ್ ಪೇಡ್ ಮಾ ಕೆ ನಾಮ್ ಭಾವನೆಯೊಂದಿಗೆ ಪ್ರಕೃತಿ ಸಂರಕ್ಷಣೆ, ಸ್ವಚ್ಛತೆಯನ್ನ ಜೀವನಶೈಲಿಯ ಭಾಗವಾಗಿಸಿ ನಿಮ್ಮ ಬೇರುಗಳೊಂದಿಗೆ ಬೆಸೆದುಕೊಂಡಿರಿ – ಜಗತ್ತಿನ ಯಾವುದೇ ಮೂಲೆಗೆ ಹೋದರೂ ನಿಮ್ಮ ಭಾಷೆ, ಸಂಸ್ಕೃತಿ, ಪೋಷಕರು, ಮಾತೃಭೂಮಿಯ ಬಗ್ಗೆ ಸದಾ ಕೃತಜ್ಞರಾಗಿರಾಗಿರಬೇಕು ಎಂದು ತಿಳಿಸಿದರು.
ಇದೇ ವೇಳೆ ರಾಜ್ಯಪಾಲರು, ‘ನಶಾ ಮುಕ್ತ ಭಾರತ ಪ್ರತಿಜ್ಞೆ’ ಬೋಧಿಸಿದರು.
ಕರ್ನಾಟಕ ಮತ್ತು ಒಡಿಶಾ ಉಚ್ಚ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಾ. ಕೃಷ್ಣ ಎಸ್. ದೀಕ್ಷಿತ್ ಅವರು ಘಟಿಕೋತ್ಸವದ ಭಾಷಣದಲ್ಲಿ ಮಾತನಾಡಿ, ಈ ವಿಶ್ವವಿದ್ಯಾಲಯಕ್ಕೆ ವಿಜಯನಗರ ಸಾಮ್ರಾಜ್ಯದ ಮಹಾನ್ ಅರಸರ ಹೆಸರನ್ನು ಇಟ್ಟಿರುವುದು ಅತ್ಯಂತ ಸೂಕ್ತವಾಗಿದ್ದು, ಇತಿಹಾಸಕಾರ ರಾಬರ್ಟ್ ಸಿವೆಲ್ ತಮ್ಮ ‘ಎ ಫರ್ಗಾಟನ್ ಎಂಪೈರ್ ವಿಜಯನಗರ’ ಕೃತಿಯಲ್ಲಿ ಶ್ರೀ ಕೃಷ್ಣದೇವರಾಯರನ್ನು ಮನಸಾರೆ ಹೊಗಳಿದ್ದಾರೆ ಎಂದು ಹೇಳಿದರು.

ಭಾರತವು ಯಾವಾಗಲೂ ಜ್ಞಾನವನ್ನು ಹುಡುಕುವವರ ಮತ್ತು ಸಂತರ ನಾಡಾಗಿದ್ದು, ಪ್ರಾಚೀನ ಕಾಲದಲ್ಲಿ ತಕ್ಷಶಿಲಾ, ನಳಂದಾ, ಪುಷ್ಪಗಿರಿ, ವಿಕ್ರಮಶಿಲಾ, ವಲ್ಲಬಿ, ಓದಂತಪುರಿ ಹಾಗೂ ಸೋಮಪುರದಂತಹ ವಿಶ್ವವಿದ್ಯಾಲಯಗಳಿದ್ದವು ಎಂದು ವಿಲ್ ಡ್ಯೂರಾಂಟ್, ಆರ್ನಾಲ್ಡ್ ಟಾಯ್ ಬಿ ಮತ್ತು ಆರ್.ಸಿ. ಮಜುಂದಾರ್ ದಾಖಲಿಸಿದ್ದಾರೆ. ಯುನೆಸ್ಕೋ ವಿಶ್ವ ಪರಂಪರೆ ಸಮಾವೇಶದ ದಾಖಲೆಯ ಪ್ರಕಾರ ನಳಂದಾ ಅತ್ಯಂತ ಪ್ರಾಚೀನ ವಿಶ್ವವಿದ್ಯಾಲಯವಾಗಿದ್ದು, ಸುಮಾರು 800 ವರ್ಷಗಳ ಕಾಲ ವ್ಯವಸ್ಥಿತವಾಗಿ ಜ್ಞಾನವನ್ನು ಹಂಚಿದೆ ಎಂದು ತಿಳಿಸಿದರು.
ಶಿಕ್ಷಣದ ಉದ್ದೇಶ ಕೇವಲ ಮಾಹಿತಿಯನ್ನು ಕೂಡಿಡುವುದಲ್ಲದೆ, ಅದನ್ನು ನಿಜವಾದ ಜ್ಞಾನವನ್ನಾಗಿ ಮತ್ತು ಸಮಾಜದ ಒಳಿತಿಗೆ ಬಳಸುವ ವಿವೇಕವನ್ನಾಗಿ ಬದಲಾಯಿಸುವುದಾಗಿದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಸಂವಿಧಾನದ ಪ್ರಸ್ತಾವನೆಯ ಮೌಲ್ಯಗಳಾದ ರಾಷ್ಟಿçÃಯತೆ, ದೇಶಭಕ್ತಿ, ಭಾತೃತ್ವ ಮತ್ತು ವಿಶಾಲ ಮನೋಭಾವವನ್ನು ಬೆಳೆಸಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಉದ್ಯೋಗ ಕೌಶಲ ಮತ್ತು ಉದ್ಯಮಶೀಲತೆಯನ್ನು ಬೆಳೆಸಲು ಹೆಚ್ಚಿನ ಒತ್ತು ನೀಡಬೇಕು, ಏಕೆಂದರೆ ಬಹುತೇಕ ವಿದ್ಯಾರ್ಥಿಗಳು ಕೃಷಿ ಕುಟುಂಬಗಳಿAದ ಮತ್ತು ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಪ್ರತಿವರ್ಷ ಭಾರತದಿಂದ ಉನ್ನತ ಶಿಕ್ಷಣ ಪಡೆದ ಸುಮಾರು ಆರು ಲಕ್ಷ ಪ್ರತಿಭಾವಂತರು ವಿದೇಶಗಳಿಗೆ ವಲಸೆ ಹೋಗುತ್ತಿದ್ದು, ಪ್ರತಿಭಾ ಪಲಾಯನ ನಿರಂತರವಾಗಿ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶ್ರೀರಾಮನು ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಎಂದು ಹೇಳಿದಂತೆ ಮತ್ತು ಡಾ. ಅಂಬೇಡ್ಕರ್ ವಿದೇಶದಲ್ಲಿ ಜ್ಞಾನ ಪಡೆದರೂ ತಾಯ್ನಾಡಿಗೆ ಮರಳಿದಂತೆ ಯುವ ಪ್ರತಿಭೆಗಳು ಯೋಚಿಸಬೇಕು. ಜಗತ್ತು ಎದುರಿಸುತ್ತಿರುವ ಕೃತಕ ಬುದ್ಧಿಮತ್ತೆಯ ಸುನಾಮಿಯಿಂದ ಮನುಷ್ಯನ ಸಹಜ ಬುದ್ಧಿಶಕ್ತಿ ದುರ್ಬಲಗೊಳ್ಳಬಾರದು; ಎಐ ಮಾನವನ ಸೇವೆ ಮಾಡುವ ಸಾಧನವಾಗಿರಬೇಕೇ ಹೊರತು ಮಾನವನೇ ಎಐಗೆ ಸೇವಕನಾಗಬಾರದು ಎಂದು ಕಿವಿಮಾತು ಹೇಳಿದರು.













