ಬೆಂಗಳೂರು: ರಾಜ್ಯದ BPL, APL ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಸೂಚನೆ ನೀಡಿದೆ. ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಪ್ರತಿಯೊಬ್ಬ ಸದಸ್ಯರೂ ತಮ್ಮ ಆಧಾರ್ e-KYC ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಇಲಾಖೆ ತಿಳಿಸಿದೆ.
ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರ ಆಧಾರ್ ಸಂಖ್ಯೆಯೊಂದಿಗೆ e-KYC ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. 2026ರ ಸೆಪ್ಟೆಂಬರ್ 30 e-KYCಗೆ ಕೊನೆಯ ದಿನಾಂಕ ಎಂದು ತಿಳಿಸಲಾಗಿದ್ದು, ಈ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸಂಬಂಧಪಟ್ಟ ಸದಸ್ಯರ ಹೆಸರನ್ನು ರೇಷನ್ ಕಾರ್ಡ್‌ನಿಂದ ತೆಗೆದುಹಾಕುವ ಸಾಧ್ಯತೆ ಇದೆ.ಅಲ್ಲದೆ, e-KYC ಪೂರ್ಣಗೊಳಿಸದ ಸದಸ್ಯರಿಗೆ ಸಿಗುವ ಪಡಿತರ ಸೌಲಭ್ಯ ಹಾಗೂ ಅನ್ನಭಾಗ್ಯ ಯೋಜನೆಯಡಿ ದೊರೆಯುವ ನಗದು ವರ್ಗಾವಣೆ ಹಣ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ ಎಂದು ಇಲಾಖೆ ಎಚ್ಚರಿಸಿದೆ.
ಆಫ್‌ಲೈನ್ ವಿಧಾನ:
ರೇಷನ್ ಕಾರ್ಡ್‌ದಾರರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ e-KYC ಮಾಡಿಸಬಹುದು. ಕುಟುಂಬದ ಸದಸ್ಯರು ತಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ವಿವರಗಳನ್ನು ಕೊಂಡೊಯ್ಯಬೇಕು. ನ್ಯಾಯಬೆಲೆ ಅಂಗಡಿಯಲ್ಲಿರುವ ಅಧಿಕೃತ ವಿತರಕರು ಬಯೋಮೆಟ್ರಿಕ್ ದೃಢೀಕರಣದ ಮೂಲಕ e-KYC ಪ್ರಕ್ರಿಯೆ ಪೂರ್ಣಗೊಳಿಸಲು ಸಹಾಯ ಮಾಡುತ್ತಾರೆ.
ಮೊಬೈಲ್ ಮೂಲಕ ಆನ್‌ಲೈನ್ ವಿಧಾನ:
ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವವರು ಮೊಬೈಲ್ ಮೂಲಕವೂ e-KYC ಪ್ರಕ್ರಿಯೆ ಪೂರ್ಣಗೊಳಿಸಬಹುದು.
Google Play Storeನಿಂದ Mera Ration ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಅಗತ್ಯವಿದ್ದಲ್ಲಿ Aadhaar FaceRD ಅಪ್ಲಿಕೇಶನ್‌ನ್ನೂ ಇನ್‌ಸ್ಟಾಲ್ ಮಾಡಿಕೊಳ್ಳಬೇಕು.
Mera Ration ಆ್ಯಪ್‌ನಲ್ಲಿ Aadhaar Seeding/e-KYC ಆಯ್ಕೆಯನ್ನು ಆರಿಸಬೇಕು.
ರೇಷನ್ ಕಾರ್ಡ್ ಹಾಗೂ ಆಧಾರ್ ಸಂಬಂಧಿತ ವಿವರಗಳನ್ನು ನಮೂದಿಸಬೇಕು.
OTP ಅಥವಾ Face Authentication ಮೂಲಕ ದೃಢೀಕರಣ ಪೂರ್ಣಗೊಳಿಸಬಹುದು.
ಗ್ರಾಹಕರು ತಮ್ಮ e-KYC ಸ್ಥಿತಿಯನ್ನು ಪರಿಶೀಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಯಾವುದೇ ತಾಂತ್ರಿಕ ಸಮಸ್ಯೆ ಅಥವಾ ದೂರುಗಳಿದ್ದಲ್ಲಿ 1967 ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.










