ದೆಹಲಿ.ಆಗಸ್ಟ್.7: NEET-UG ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಯಾವುದೇ ಮುದ್ರಣಾಲಯದಿಂದ) ಸೋರಿಕೆಯಾಗಿಲ್ಲ, ಬದಲಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ವಿಷಯ ತಜ್ಞರೇ ರಹಸ್ಯವಾಗಿ ಸೋರಿಕೆ ಮಾಡಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (CBI) ತನ್ನ ದೋಷಾರೋಪಣ ಪಟ್ಟಿಯಲ್ಲಿ (Charge Sheet) ಗಂಭೀರ ಆರೋಪ ಮಾಡಿದೆ.
ಅನುವಾದ ಮತ್ತು ಪರಿಶೀಲನೆ (ಪೂಫ್ರೀಡಿಂಗ್) ಕೆಲಸಕ್ಕಾಗಿ ದೊರೆತ ಅಧಿಕೃತ ಪ್ರವೇಶವನ್ನು ದುರುಪಯೋಗಪಡಿಸಿಕೊಂಡು ಈ ಅಕ್ರಮ ಎಸಗಲಾಗಿದೆ ಎಂದು ಸಿಬಿಐ ಉಲ್ಲೇಖಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪಣ ಪಟ್ಟಿಯು ಆಗಸ್ಟ್ 10 ರಂದು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಸಿಬಿಐ ದೋಷಾರೋಪಣ ಪಟ್ಟಿಯ ಪ್ರಮುಖ ಅಂಶಗಳು

ಮೂವರು ತಜ್ಞರಿಂದ ಸೋರಿಕೆ: ಸಸ್ಯಶಾಸ್ತ್ರ (Botany) ಮತ್ತು ಪ್ರಾಣಿಶಾಸ್ತ್ರ (Zoology) ತಜ್ಞೆ ಮನೀಷಾ ಗುರುನಾಥ್ ಮಂಢಾರೆ, ರಸಾಯನಶಾಸ್ತ್ರ (Chemistry) ತಜ್ಞ ಪ್ರಹ್ಲಾದ್ ವಿಠ್ಠಲರಾವ್ ಕುಲಕರ್ಣಿ (ಪಿ.ವಿ. ಕುಲಕರ್ಣಿ) ಮತ್ತು ಭೌತಶಾಸ್ತ್ರ (Physics) ತಜ್ಞೆ ಮನೀಷಾ ಸಂಜಯ್ ಹವಾಲ್ದಾರ್ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ರಹಸ್ಯ ತರಗತಿ ಮತ್ತು ಕೈಬರಹದ ಟಿಪ್ಪಣಿ: ಪುಣೆಯಲ್ಲಿರುವ ತಮ್ಮ ಮನೆಗಳಲ್ಲಿ ರಹಸ್ಯ ಪರಿಷ್ಕರಣೆ (Revision) ತರಗತಿಗಳನ್ನು ನಡೆಸಿ, ವಿದ್ಯಾರ್ಥಿಗಳಿಗೆ ಪ್ರಶ್ನೆಗಳು, ನಾಲ್ಕು ಆಯ್ಕೆಗಳು ಮತ್ತು ಸರಿಯಾದ ಉತ್ತರಗಳನ್ನು ಬಾಯ್ಮಾತಿನಲ್ಲಿ ಹೇಳಿಕೊಡಲಾಗಿತ್ತು. ಯಾವುದೇ ಡಿಜಿಟಲ್ ಸಾಕ್ಷಿ ಸಿಗದಂತೆ ವಿದ್ಯಾರ್ಥಿಗಳಿಗೆ ಕೈಯಲ್ಲೇ ಬರೆದುಕೊಳ್ಳಲು ಸೂಚಿಸಲಾಗಿತ್ತು.
ಭೌತಶಾಸ್ತ್ರದ ಪ್ರಶ್ನೆಗಳನ್ನು ಉಪನ್ಯಾಸಕ ತೇಜಸ್ ಹರ್ಷದ್ಕುಮಾರ್ ಶಾಗೆ ಹಂಚಿಕೊಳ್ಳಲಾಗಿದ್ದು, ಅವರು ಇದನ್ನು ಲಾಕೂರ್ನ ರೇಣುಕಾಯಿ ಕೆರಿಯರ್ ಸೆಂಟರ್ (RCC) ನಿರ್ದೇಶಕ ಪ್ರೊ. ಶಿವರಾಜ್ ಮೊಟೆಗಾಂವ್ಕರ್ ಅವರಿಗೆ ರವಾನಿಸಿದ್ದರು. ಇದರ ಪ್ರತಿಫಲವಾಗಿ ಹವಾಲ್ದಾರ್ ಅವರ ಪತಿಯ ಮೊಬೈಲ್ ಸಂಖ್ಯೆಗೆ ಆನ್ಲೈನ್ ಮೂಲಕ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದೆ.
ಲಾಕೂರ್ನ ಸಿದ್ಧಿ ವಿನಾಯಕ ಆಸ್ಪತ್ರೆಯಲ್ಲಿ ಅಭ್ಯರ್ಥಿಗಳನ್ನು ಸೇರಿಸಿ ತರಬೇತಿ ನೀಡಲಾಗಿತ್ತು. ನಂತರ ಈ ಸೋರಿಕೆಯಾದ ಪ್ರಶ್ನೆಗಳು ಮಹಾರಾಷ್ಟ್ರದಿಂದ ಹರಿಯಾಣ ಮತ್ತು ರಾಜಸ್ಥಾನಕ್ಕೂ ಹರಡಿದವು. ಟೆಲಿಗ್ರಾಂ ಮೂಲಕ ಪಿಡಿಎಫ್ ರೂಪದಲ್ಲಿ ಹಂಚಿಕೆಯಾಗಿ, ಜೈಪುರದಲ್ಲಿ 10 ರಿಂದ 12 ಲಕ್ಷ ರೂಪಾಯಿಗೆ ಮಾರಾಟವಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿಧಿವಿಜ್ಞಾನ ಸಾಕ್ಷ್ಯ: ದೆಹಲಿಯ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ (CFSL) ನಡೆಸಿದ ಕೈಬರಹದ ವಿಶ್ಲೇಷಣೆಯಲ್ಲಿ, ದಾಳಿಯ ವೇಳೆ ವಶಪಡಿಸಿಕೊಂಡ ನೋಟ್ಬುಕ್ಗಳಲ್ಲಿದ್ದ ಪ್ರಶ್ನೆಗಳು ಮತ್ತು ಪರೀಕ್ಷೆಯ ಮೂಲ ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆಗಳು ಒಂದೇ ಆಗಿರುವುದು ದೃಢಪಟ್ಟಿದೆ. ಜೊತೆಗೆ, ವೈದ್ಯ ಡಾ. ಶಿರೂರೆ ಅವರ ಕುಟುಂಬದವರಿಂದ 5 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಈ ಎಲ್ಲಾ ಅಂಶಗಳನ್ನು ಸಿಬಿಐ ತನ್ನ ಚಾರ್ಜ್ಶೀಟ್ನಲ್ಲಿ ದಾಖಲಿಸಿದ್ದು, ನ್ಯಾಯಾಲಯದ ಮುಂದಿನ ವಿಚಾರಣೆ ವೇಳೆ ಇವುಗಳ ಪರಿಶೀಲನೆ ನಡೆಯಲಿದೆ.












