ಬೆಂಗಳೂರು.ಆಗಸ್ಟ್.7: ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಬ್ಯಾಂಕ್ ಖಾತೆಯ ವಿವರಗಳಿಂದ ಹಿಡಿದು ವೈಯಕ್ತಿಕ ಮಾಹಿತಿ ಹಾಗೂ ಪ್ರಮುಖ ದಾಖಲೆಗಳವರೆಗೆ ಎಲ್ಲವೂ ಮೊಬೈಲ್ನಲ್ಲೇ ಸಂಗ್ರಹವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಫೋನ್ ಕಳುವಾದರೆ ಅಥವಾ ಎಲ್ಲಾದರೂ ಕಳೆದುಹೋದರೆ, ದುರುಪಯೋಗವಾಗಬಹುದು ಎಂಬ ಭಯ ಪ್ರತಿಯೊಬ್ಬರನ್ನೂ ಕಾಡುವುದು ಸಹಜ.
ಸಾರ್ವಜನಿಕರ ಈ ಆತಂಕಕ್ಕೆ ಪರಿಹಾರವಾಗಿ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ‘CEIR’ (Central Equipment Identity Register) ಪೋರ್ಟಲ್ ಆರಂಭಿಸಿದೆ. ಇದರ ಮೂಲಕ ನೀವು ಮನೆಯಲ್ಲೇ ಕುಳಿತು ಕಳೆದುಹೋದ ಮೊಬೈಲ್ ಅನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಬಹುದು.

CEIR ಪೋರ್ಟಲ್ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ?

CEIR ಎಂಬುದು ಕೇಂದ್ರ ಸರ್ಕಾರದ ಡಿಜಿಟಲ್ ಪ್ಲಾಟ್ಫಾರ್ಮ್ ಆಗಿದ್ದು, ದೇಶದ ಎಲ್ಲಾ ಮೊಬೈಲ್ ನೆಟ್ವರ್ಕ್ಗಳಲ್ಲಿ ಕಳುವಾದ ಫೋನ್ಗಳ IMEI ಸಂಖ್ಯೆಯನ್ನು ಟ್ರ್ಯಾಕ್ ಮತ್ತು ಬ್ಲಾಕ್ ಮಾಡುವ ಕೆಲಸ ಮಾಡುತ್ತದೆ. ಒಮ್ಮೆ ಈ ಪೋರ್ಟಲ್ನಲ್ಲಿ ಫೋನ್ ಬ್ಲಾಕ್ ಮಾಡಿದರೆ, ಕಳ್ಳರು ಅದಕ್ಕೆ ಬೇರೆ ಸಿಮ್ ಕಾರ್ಡ್ ಹಾಕಿದರೂ ಬಳಸಲು ಸಾಧ್ಯವಾಗುವುದಿಲ್ಲ.
ಫೋನ್ ಬ್ಲಾಕ್ ಮಾಡುವ ಮೊದಲು ಕೈಗೊಳ್ಳಬೇಕಾದ ಕ್ರಮಗಳು:
ಪೊಲೀಸ್ ದೂರು: ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ಹತ್ತಿರದ ಪೊಲೀಸ್ ಠಾಣೆಯಲ್ಲಿ ಫೋನ್ ಕಳುವಾದ ಅಥವಾ ಕಳೆದುಹೋದ ಬಗ್ಗೆ ದೂರು (FIR/Missing Report) ದಾಖಲಿಸಬೇಕು.
ಅಗತ್ಯ ದಾಖಲೆಗಳು: ಮೊಬೈಲ್ನ IMEI ಸಂಖ್ಯೆ, ಖರೀದಿಸಿದ ಬಿಲ್, ಫೋನ್ ಬ್ರ್ಯಾಂಡ್ ಹಾಗೂ ಮಾಡೆಲ್ ವಿವರ ಮತ್ತು ಪೊಲೀಸ್ ದೂರಿನ ಪ್ರತಿಯನ್ನು ಸಿದ್ಧವಿಟ್ಟುಕೊಳ್ಳಿ.
ಡುಪ್ಲಿಕೇಟ್ ಸಿಮ್: ಅರ್ಜಿಯ ಪರಿಶೀಲನೆಗೆ OTP ಬರುವುದರಿಂದ, ಕಳೆದುಹೋದ ಸಂಖ್ಯೆಯ ಡುಪ್ಲಿಕೇಟ್ ಸಿಮ್ ಪಡೆಯುವುದು ಕಡ್ಡಾಯ.
ಆನ್ಲೈನ್ನಲ್ಲಿ ಫೋನ್ ಬ್ಲಾಕ್ ಮಾಡುವ ವಿಧಾನ:
ಮೊದಲು ಅಧಿಕೃತ ವೆಬ್ಸೈಟ್ ceir.sancharsaathi.gov.in ಗೆ ಭೇಟಿ ನೀಡಿ.
ಮುಖಪುಟದಲ್ಲಿರುವ ‘Block Stolen/Lost Mobile’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ‘Submit’ ನೀಡಿ.
ವಿವರಗಳನ್ನು ಪರಿಶೀಲಿಸಿದ ನಂತರ ಇಲಾಖೆಯು ನಿಮ್ಮ ಫೋನ್ ಅನ್ನು ಬ್ಲಾಕ್ ಮಾಡುತ್ತದೆ. ಒಂದು ವೇಳೆ ಭವಿಷ್ಯದಲ್ಲಿ ನಿಮ್ಮ ಫೋನ್ ಸಿಕ್ಕರೆ, ಇದೇ ಪೋರ್ಟಲ್ ಮೂಲಕ ಅದನ್ನು ಸುಲಭವಾಗಿ ‘Unblock’ ಕೂಡ ಮಾಡಿಕೊಳ್ಳಬಹುದು.













