ಸುದ್ದಿಒನ್, ಹೊಳಲ್ಕೆರೆ, ಸೆಪ್ಟೆಂಬರ್. 10 : ಮನೆ ನಿರ್ಮಾಣ ಮಾಡಲು ಲೈಸೆನ್ಸ್ ಪಡೆಯುವ ಸಲುವಾಗಿ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕೃಷ್ಣಮೂರ್ತಿ
5,000/- ರೂಗಳ ಲಂಚದ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಣದೊಂದಿಗೆ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದಿದೆ.

ಮಂಜಮ್ಮ ಎನ್ನುವವರು ಹೊಳಲ್ಕೆರೆ ಪಟ್ಟಣದ ಶಿವಮೊಗ್ಗ ರಸ್ತೆಯ ಕುಕುವಾಡೇಶ್ವರಿ ದೇವಸ್ಥಾನದ ಹಿಂಭಾಗದಲ್ಲಿ ಜೈಪುರ ಗ್ರಾಮಕ್ಕೆ ಒಳಪಡುವ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ 30*30 ಅಳತೆಯ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಲು ಲೈಸೆನ್ಸ್ ಪಡೆಯುವ ಸಲುವಾಗಿ ಅರೇಹಳ್ಳಿ ಗ್ರಾಮ ಪಂಚಾಯ್ತಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಲೈಸೆನ್ಸ್ ಪಡೆಯುವ ಸಂಬಂಧ ಹಲವಾರು ಬಾರಿ ಅರೇಹಳ್ಳಿ ಗ್ರಾಮ ಪಂಚಾಯ್ತಿ ಕಛೇರಿಗೆ ಹೋಗಿ ಅಲ್ಲಿನ ಪಿ.ಡಿ.ಓ. ಕೃಷ್ಣಮೂರ್ತಿ ಇವರಿಗೆ ವಿಚಾರಿಸಿದಾಗ ಅವರು ಮತ್ತು ಅಲ್ಲಿನ ಅಪರೇಟರ್, ನಾಳೆ ಬನ್ನಿ, ಮುಂದಿನ ವಾರ ಬನ್ನಿ ಎಂದು ಹೇಳಿ ಕಳುಹಿಸುತ್ತಿದ್ದರು. ನಂತರ ಅರೇಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ ಪಾಲೇನಗೌಡ್ರು ಇವರಿಂದ ಹೇಳಿಸಿದರೂ ಸಹಾ ಯಾವುದೇ ಪ್ರಯೋಜನವಾಗಿರುವುದಿಲ್ಲ. ನಂತರ 28-08-2025ರಂದು ಅರೇಹಳ್ಳಿ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಪಿ.ಡಿ.ಓ. ಕೃಷ್ಣಮೂರ್ತಿ ಇವರನ್ನು ಮತ್ತೊಮ್ಮೆ ವಿಚಾರಿಸಿದಾಗ, ಅವರು ಲೈಸೆನ್ಸ್ ನೀಡಲು ರೂ. 15,000/-ಗಳ ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟಿರುತ್ತಾರೆ.

ಈ ವಿಚಾರವಾಗಿ ಲಂಚದ ಹಣವನ್ನು ಕೊಟ್ಟು ಮನೆ ನಿರ್ಮಾಣಕ್ಕೆ ಲೈಸೆನ್ಸ್ ಪಡೆದುಕೊಳ್ಳಲು ಇಷ್ಟವಿರದ ಇವರು ಶ್ರೀ ಕೃಷ್ಣಮೂರ್ತಿ, ಪಿ.ಡಿ.ಓ. ಅರೇಹಳ್ಳಿ ಗ್ರಾಮ ಪಂಚಾಯ್ತಿ, ಹೊಳಲ್ಕೆರೆ ತಾ|| ಇವರ ಮೇಲೆ ಲೋಕಾಯುಕ್ತ ಕಚೇರಿಗೆ ದೂರು ನೀಡಿರುತ್ತಾರೆ.
ಈ ದೂರಿನ ಮೇರೆಗೆ ಇಂದು ಜಿ. ಕೃಷ್ಣಮೂರ್ತಿ, ಪಿ.ಡಿ.ಓ., ಅರೇಹಳ್ಳಿ ಗ್ರಾಮ ಪಂಚಾಯ್ತಿ, ಹೊಳಲ್ಕೆರೆ ತಾ, ಚಿತ್ರದುರ್ಗ ಜಿಲ್ಲೆ ಇವರು ತಾನು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿಯಲ್ಲಿಯೇ ರೂ.5,000/- ರೂಗಳ ಲಂಚದ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಪ್ರಸ್ತುತ ಅವರನ್ನು ವಶಕ್ಕೆ ಪಡೆದು, ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಕಛೇರಿಯ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ ಕಛೇರಿಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎನ್. ಮೃತ್ಯುಂಜಯ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಟ್ರ್ಯಾಪ್ ಕಾಲಕ್ಕೆ ಚಿತ್ರದುರ್ಗ ಲೋಕಾಯುಕ್ತ ಠಾಣೆಯ ಪೊಲೀಸ್ ನಿರೀಕ್ಷಕರು ಗಳಾದ ಮುಪ್ತಾಕ್ ಅಹ್ಮದ್ ಡಿ. ಶೇಖ್ ಮತ್ತು ಬಸವರಾಜ ಬಿ. ಲಮಾಣಿ ಹಾಗೂ ಸಿಬ್ಬಂದಿಯವರಾದ ಜಿ.ಎಂ. ತಿಪ್ಪೇಸ್ವಾಮಿ, ಶ್ರೀನಿವಾಸ ಹೆಚ್., ಶ್ರೀಮತಿ ಎಸ್.ಆರ್. ಪುಷ್ಪ, ಮಂಜುನಾಥ ಆರ್, ವೀರೇಶ ಎಂ, ಸತೀಶ್ ಎಲ್.ಜಿ., ರಾಜೇಶ್ ಎಸ್, ಮಾರುತಿ ಕೆ.ಟಿ., ವೆಂಕಟೇಶ್‌ಕುಮಾರ್ ಆರ್, ಮಾರುತಿ ಡಿ, ಸಂತೋಷ ಟಿ.ವಿ. ರವರುಗಳು ಹಾಜರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















