ಮುಂಗಾರು ಮಳೆ ಆರಂಭವಾಗಿದೆ. ಮಳೆಗಾಲದ ಈ ಸಮಯದಲ್ಲಿ ಹವಾಮಾನದಲ್ಲಿನ ಬದಲಾವಣೆಯಿಂದಾಗಿ ಹಾವುಗಳು ಹೆಚ್ಚಾಗಿ ಹೊರಬಂದು, ಆಶ್ರಯ ಅರಸುತ್ತಾ ಮನೆಗಳ ಒಳಗೆ ನುಗ್ಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾದರೆ, ಹಾವುಗಳು ಮನೆಗೆ ಬರಲು ಮುಖ್ಯ ಕಾರಣಗಳೇನು? ಅವುಗಳನ್ನು ಆಕರ್ಷಿಸುವ ವಸ್ತುಗಳು ಯಾವುವು? ಮತ್ತು ಮನೆಯನ್ನು ಸುರಕ್ಷಿತವಾಗಿಡುವುದು ಹೇಗೆ ಎಂಬುದರ ವಿವರ ಇಲ್ಲಿದೆ.
ಹಾವುಗಳು ಮನೆಗೆ ಬರಲು ಮುಖ್ಯ ಕಾರಣಗಳು
ಆಹಾರದ ಹುಡುಕಾಟ: ಮನೆಗಳಲ್ಲಿ ಇಲಿಗಳು, ಹೆಗ್ಗಣಗಳು ಅಥವಾ ಕಪ್ಪೆಗಳು ಇದ್ದರೆ, ಅವುಗಳನ್ನು ಬೇಟೆಯಾಡಲು ಹಾವುಗಳು ಅವುಗಳ ಬೆನ್ನುಹತ್ತಿ ಮನೆಗಳ ಒಳಗೆ ಪ್ರವೇಶಿಸುತ್ತವೆ.
ತಂಪಾದ ಮತ್ತು ಕತ್ತಲೆಯಾದ ಜಾಗಗಳು: ಹಾವುಗಳು ಸಾಮಾನ್ಯವಾಗಿ ಬಿಸಿಲಿನಿಂದ ರಕ್ಷಣೆ ಪಡೆಯಲು ಅಥವಾ ಅಡಗಿಕೊಳ್ಳಲು ಮನೆಯಲ್ಲಿರುವ ತಂಪಾದ, ಕತ್ತಲೆಯಿಂದ ಕೂಡಿರುವ ಮೂಲೆಗಳನ್ನು ಇಷ್ಟಪಡುತ್ತವೆ.
ಕಸ ಹಾಗೂ ಹಳೆಯ ಸಾಮಗ್ರಿಗಳು: ಮನೆಯ ಸುತ್ತಮುತ್ತ ಅಥವಾ ಮನೆಯೊಳಗೆ ಕಸದ ರಾಶಿ, ನಿರುಪಯುಕ್ತ ಹಳೆಯ ಪ್ಲಾಸ್ಟಿಕ್ ಅಥವಾ ಕಬ್ಬಿಣದ ಸಾಮಾನುಗಳು ಇದ್ದರೆ ಅಲ್ಲಿ ಹಾವುಗಳು ಸುಲಭವಾಗಿ ಬಂದು ಅಡಗಿ ಕುಳಿತುಕೊಳ್ಳುತ್ತವೆ.
ಹಳೆಯ ಪೆಟ್ಟಿಗೆಗಳು ಮತ್ತು ಮರದ ತುಂಡುಗಳು: ಮನೆಯ ಮೂಲೆಯಲ್ಲಿ ಇಟ್ಟಿರುವ ಹಳೆಯ ಪೆಟ್ಟಿಗೆಗಳು, ಒಡೆದ ಆಟಿಕೆಗಳು ಹಾಗೂ ಒಣಗಿದ ಮರದ ತುಂಡುಗಳ ರಾಶಿ ಹಾವುಗಳಿಗೆ ಉತ್ತಮ ಆಶ್ರಯ ತಾಣಗಳಾಗಿ ಮಾರ್ಪಡುತ್ತವೆ.
ವಹಿಸಬೇಕಾದ ಮುನ್ನೆಚ್ಚರಿಕೆಗಳು:
ಮನೆಯಲ್ಲಿ ಇಲಿ ಮತ್ತು ಕಪ್ಪೆಗಳು ಸೇರದಂತೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ.
ಮಳೆಗಾಲದಲ್ಲಿ ಮನೆಯ ಮೂಲೆ-ಮುಲೆಗಳನ್ನು ಹಾಗೂ ಕತ್ತಲೆಯಾದ ಜಾಗಗಳನ್ನು ನಿಯಮಿತವಾಗಿ ಪರಿಶೀಲಿಸಿ.
ಮನೆಯಲ್ಲಿರುವ ಹಳೆಯ ನಿರುಪಯುಕ್ತ ವಸ್ತುಗಳು, ಒಡೆದ ಆಟಿಕೆಗಳು ಮತ್ತು ಕಸದ ರಾಶಿಯನ್ನು ತಕ್ಷಣವೇ ಮನೆಯಿಂದ ಹೊರಹಾಕಿ.
ಮನೆಯ ಸುತ್ತಮುತ್ತ ಕಳೆ ಗಿಡಗಳು ಅಥವಾ ಮರದ ತುಂಡುಗಳು ಬಿದ್ದಿದ್ದರೆ ಅವುಗಳನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛವಾಗಿಡಿ.












