ಬೆಂಗಳೂರು.ಜುಲೈ.09: ನೀವು ಗೃಹಜ್ಯೋತಿ ಯೋಜನೆಯ ಫಲಾನುಭವಿಯೇ? ಹಾಗಿದ್ದಲ್ಲಿ ಜುಲೈ ತಿಂಗಳ ನಿಮ್ಮ ವಿದ್ಯುತ್ ಬಿಲ್ ವಿಷಯದಲ್ಲಿ ಒಂದು ಮಹತ್ವದ ಬದಲಾವಣೆಯಾಗಿದೆ. ಈ ತಿಂಗಳು ನಿಮ್ಮ ಮನೆಗೆ ಮೀಟರ್ ರೀಡರ್ ಗಳು ಬಂದು ರೀಡಿಂಗ್ ಮಾಡುವುದಿಲ್ಲ. ಬದಲಿಗೆ, ಹಳೆಯ ಬಿಲ್ ಗಳ ಆಧಾರದ ಮೇಲೆ ಸರಾಸರಿ ಮೊತ್ತವನ್ನು ಲೆಕ್ಕ ಹಾಕಿ ಬಿಲ್ ನೀಡಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನಿರ್ಧರಿಸಿದೆ.
ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯಕ್ಕಾಗಿ ಬೆಸ್ಕಾಂ ತನ್ನ ಮೀಟರ್ ರೀಡರ್ ಸಿಬ್ಬಂದಿಯನ್ನು ನಿಯೋಜಿಸಿದೆ. ಈ ವಿಶೇಷ ಕಾರ್ಯದ ಹಿನ್ನೆಲೆಯಲ್ಲಿ, ಜುಲೈ ತಿಂಗಳ ನಿಯಮಿತ ಮೀಟರ್ ರೀಡಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಜುಲೈ ತಿಂಗಳ ಬಿಲ್ಲಿಂಗ್ ಅವಧಿಗೆ ಗ್ರಾಹಕರ ಕಳೆದ ಮೂರು ತಿಂಗಳ ವಿದ್ಯುತ್ ಬಳಕೆಯನ್ನು ಪರಿಗಣಿಸಲಾಗುತ್ತದೆ. ಈ ಮೂರು ತಿಂಗಳ ಬಳಕೆಯ ಸರಾಸರಿಯನ್ನು (Average) ತೆಗೆದು ಅದರ ಆಧಾರದ ಮೇಲೆ ಜುಲೈ ತಿಂಗಳ ಬಿಲ್ ಸಿದ್ಧಪಡಿಸಲಾಗುತ್ತದೆ. ಈ ಮೊತ್ತವನ್ನು ಗ್ರಾಹಕರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಅಥವಾ ಇಮೇಲ್ ಮೂಲಕ ಕಳುಹಿಸಿಕೊಡಲಾಗುತ್ತದೆ.
ಆಗಸ್ಟ್ ತಿಂಗಳಿನಿಂದ ಎಂದಿನಂತೆ ನಿಯಮಿತವಾಗಿ ಮೀಟರ್ ರೀಡಿಂಗ್ ಪ್ರಕ್ರಿಯೆ ಪುನರಾರಂಭಗೊಳ್ಳಲಿದ್ದು, ನೈಜ ಬಳಕೆಯ ಆಧಾರದ ಮೇಲೆಯೇ ಬಿಲ್ ವಿತರಿಸಲಾಗುತ್ತದೆ. ಒಂದು ವೇಳೆ ಜುಲೈ ತಿಂಗಳ ಸರಾಸರಿ ಬಿಲ್ಲಿಂಗ್ನಲ್ಲಿ ಯೂನಿಟ್ ವ್ಯತ್ಯಾಸ ಕಂಡುಬಂದಲ್ಲಿ, ಅದನ್ನು ಮುಂದಿನ ತಿಂಗಳ ಬಿಲ್ಗಳಲ್ಲಿ ಸೂಕ್ತವಾಗಿ ಹೊಂದಾಣಿಕೆ (Adjust) ಮಾಡಲಾಗುವುದು ಎಂದು ಬೆಸ್ಕಾಂ ಭರವಸೆ ನೀಡಿದೆ.
ಗೃಹ ಬಳಕೆದಾರರಿಗೆ ಮಾತ್ರ ಈ ನಿಯಮ ಅನ್ವಯಿಸಲಿದ್ದು, ಉಳಿದಂತೆ ಎಚ್ಟಿ (HT) ಗ್ರಾಹಕರು, 40 HP ಹಾಗೂ ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್ಟಿ (LT) ಗ್ರಾಹಕರು, ಸೋಲಾರ್ ರೂಫ್ಟಾಪ್ ಬಳಕೆದಾರರು ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದವರಿಗೆ ಎಂದಿನಂತೆ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆಯೇ ಬಿಲ್ ನೀಡಲಾಗುತ್ತದೆ.
ಬಿಲ್ ಪಾವತಿ ಹೇಗೆ?
ಜುಲೈ ತಿಂಗಳ ಬಿಲ್ ಪಾವತಿಸಲು ಗ್ರಾಹಕರು ಎಂದಿನ ವಿಧಾನಗಳನ್ನೇ ಬಳಸಬಹುದು. ಬೆಸ್ಕಾಂ ಉಪ ವಿಭಾಗದ ನಗದು ಕೌಂಟರ್ಗಳು, ಅಧಿಕೃತ ವೆಬ್ಸೈಟ್, ಬೆಸ್ಕಾಂ ಮಿತ್ರ ಆಪ್ ಅಥವಾ ಇತರ ಥರ್ಡ್ ಪಾರ್ಟಿ ಪಾವತಿ ಆಪ್ ಗಳ ಮೂಲಕ ಸುಲಭವಾಗಿ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.











