ಚಿತ್ರದುರ್ಗ: ಬ್ಯಾಂಕ್ ಖಾತೆಗಳ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ದಂಧೆ ನಡೆಸುತ್ತಿದ್ದ ಜಾಲವನ್ನು ಪೊಲೀಸರಿಗೆ ತಿಳಿಸುವುದಾಗಿ ಹೆದರಿಸಿದ್ದ ವ್ಯಕ್ತಿಯನ್ನು ವ್ಯವಸ್ಥಿತವಾಗಿ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಪ್ರಕರಣದ ತನಿಖೆಯನ್ನು ಸಿಐಡಿ ಘಟಕಕ್ಕೆ ವರ್ಗಾಯಿಸಲಾಗಿದೆ.
ಮೃತರನ್ನು ಮಲ್ಲಿಕಾರ್ಜುನ್ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಚಂದ್ರಶೇಖರ್ ಅಲಿಯಾಸ್ ಡಬ್ಬಿಂಗ್ ಚಂದ್ರ ಅಲಿಯಾಸ್ ಕೋಟಾ ನೋಟ್ ಚಂದ್ರ (ಎ-1), ರೋಷನ್ ಸಾಲ್ಡನ್ (ಎ-2) ಮತ್ತು ಸದಾಶಿವ ನಾಯಕ (ಎ-3) ಎಂಬುವವರನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳು ಮೃತ ಮಲ್ಲಿಕಾರ್ಜುನನ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಆತನ ಮೊಬೈಲ್ ನಂಬರ್ ಪಡೆದುಕೊಂಡು ತಾವೇ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಈ ಖಾತೆಗಳ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ದಂಧೆಯ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ತಾವೇನಾದರೂ ಸಿಕ್ಕಿಬಿದ್ದರೆ ಪೊಲೀಸರಿಗೆ ಮಲ್ಲಿಕಾರ್ಜುನನೇ ಸಿಗಲಿ ಎಂಬುದು ಆರೋಪಿಗಳ ಸಂಚಾಗಿತ್ತು. ಇತ್ತೀಚೆಗೆ ಮಲ್ಲಿಕಾರ್ಜುನನಿಗೆ ತನ್ನ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿರುವುದು ಬೆಳಕಿಗೆ ಬಂದಾಗ, ತಾನು ಈ ಕಾನೂನುಬಾಹಿರ ಕೆಲಸಕ್ಕೆ ಒಪ್ಪುವುದಿಲ್ಲ ಮತ್ತು ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದನು. ಇದರಿಂದ ಗಾಬರಿಗೊಂಡ ಆರೋಪಿಗಳು, ತಮ್ಮ ದಂಧೆ ಬಯಲಾಗುವ ಮುನ್ಸೂಚನೆಯಿಂದ ಮಲ್ಲಿಕಾರ್ಜುನನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು.
ಏಪ್ರಿಲ್ 18 ರಿಂದ ಮೇ 1 ರ ಅವಧಿಯಲ್ಲಿ ಆರೋಪಿಗಳು ಮಲ್ಲಿಕಾರ್ಜುನನನ್ನು ಕೊಲೆ ಮಾಡಿದ್ದರು. ಬಳಿಕ ಯಾವುದೇ ಸಾಕ್ಷ್ಯ ಸಿಗದಂತೆ ಮಾಡಲು ಸಂಚು ಹೂಡಿದ್ದ ಆರೋಪಿ ಸದಾಶಿವ ನಾಯಕ, ಮೃತನ ದೇಹವನ್ನು ತೋಟವೊಂದರಿಂದ ಜಿಲ್ಲಾಸ್ಪತ್ರೆಗೆ ತಂದು ದಾಖಲಿಸಿ, ಆತ ಮೃತಪಟ್ಟಿರುವುದಾಗಿ ನಾಟಕವಾಡಿದ್ದನು. ಮೃತನ ಅಂತ್ಯಕ್ರಿಯೆಯಲ್ಲೂ ಮುಂದೆ ನಿಂತು ಮುಖಂಡತ್ವ ವಹಿಸಿದ್ದನು.
ಆರಂಭದಲ್ಲಿ ಮೃತನ ಪತ್ನಿ ಆಶಾ ನೀಡಿದ ದೂರಿನ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವು (ಯುಡಿಆರ್) ಎಂದು ಪ್ರಕರಣ ದಾಖಲಾಗಿತ್ತು. ಆದರೆ, ಸದಾಶಿವ ನಾಯಕನ ಅತಿಯಾದ ಆಸಕ್ತಿ ಮತ್ತು ನಡವಳಿಕೆಯಿಂದ ಅನುಮಾನಗೊಂಡ ಪತ್ನಿ ಆಶಾ, ಮೇ 26 ರಂದು ಪೊಲೀಸರಿಗೆ ಮತ್ತೊಂದು ವಿಸ್ತೃತ ದೂರು ನೀಡಿದರು. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಅಕ್ರಮ ದಂಧೆ ಮತ್ತು ಕೊಲೆಯ ಭೀಕರ ಸತ್ಯ ಹೊರಬಂದಿದೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳ ಮಾರ್ಗದರ್ಶನದಲ್ಲಿ, ಚಿತ್ರದುರ್ಗ ಉಪ ವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ ನೇತೃತ್ವದ ಗ್ರಾಮಾಂತರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮುಂದಿನ ಉನ್ನತ ತನಿಖೆಗಾಗಿ ಕಡತವನ್ನು ಸಿಐಡಿ (CID) ಘಟಕಕ್ಕೆ ವರ್ಗಾಯಿಸಲಾಗಿದೆ. ಕೊಲೆ ಆರೋಪಿಗಳನ್ನು ಪತ್ತೆಹಚ್ಚಿದ ವಿಶೇಷ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು (IPS) ಶ್ಲಾಘಿಸಿದ್ದಾರೆ.











