ಚಿತ್ರದುರ್ಗ: ಇಂಗಳದಾಳ್ ಲಂಬಾಣಿಹಟ್ಟಿ ಗ್ರಾಮದ ಬಳಿ ಪತ್ತೆಯಾಗಿದ್ದ ಅನಾಮಧೇಯ ವ್ಯಕ್ತಿಯ ಭೀಕರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಕೃತ್ಯ ಎಸಗಿದ ಮೃತನ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಚೌಳೂರು ಗ್ರಾಮದ ನಿವಾಸಿ, ಸುಮಾರು 38 ವರ್ಷದ ಶಿವಮೂರ್ತಿ ಕೊಲೆಯಾದ ದುರ್ದೈವಿ. ಇವರು ಪರಶುರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಜೂನ್ 26 ರಂದು ಶಿವಮೊಗ್ಗದ ಆಸ್ಪತ್ರೆಗೆ ಬಾಡಿಗೆ ಇದೆ ಎಂದು ಕಾರಿನಲ್ಲಿ ಹೋದವರು ನಾಪತ್ತೆಯಾಗಿದ್ದರು. ಬಳಿಕ ಅವರ ಕಾರು ಚನ್ನಗಿರಿ ಸಮೀಪದ ಶ್ರೀನಿವಾಸಪುರ ಗೇಟ್ ಬಳಿ ಪತ್ತೆಯಾಗಿತ್ತು. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು.
ಜುಲೈ 1 ರಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಸಹಾಯವಾಣಿ 112 ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಇಂಗಳದಾಳ್ ಲಂಬಾಣಿಹಟ್ಟಿ ಬಳಿಯ ಗುಡ್ಡದಲ್ಲಿ ಅನಾಮಧೇಯ ಶವವೊಂದು ಪತ್ತೆಯಾಗಿತ್ತು. ಗ್ರಾಮಾಂತರ ಠಾಣೆಯ ಸಿಪಿಸಿ ವೀರಭದ್ರಪ್ಪ ಅವರು ನೀಡಿದ ಸುಳಿವಿನ ಆಧಾರದ ಮೇಲೆ, ನಾಪತ್ತೆಯಾಗಿದ್ದ ಶಿವಮೂರ್ತಿಯವರ ಪತ್ನಿ ರೂಪಾ ಹೆಚ್.ಜೆ. ಅವರನ್ನು ಸ್ಥಳಕ್ಕೆ ಕರೆಸಿ ಗುರುತು ಪತ್ತೆ ಹಚ್ಚಲಾಯಿತು. ಯಾರೋ ದುಷ್ಕರ್ಮಿಗಳು ಶಿವಮೂರ್ತಿಯವರನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಗಂಭೀರತೆ ಅರಿತ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು. ಡಿವೈಎಸ್ಪಿ ಅರುಣ್ ನಾಗೇಗೌಡ ನೇತೃತ್ವದಲ್ಲಿ, ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಬಾಲಚಂದ್ರ ನಾಯಕ್, ಪಿಎಸ್ಐ ಸುರೇಶ್ ರುಕ್ಕಮ್ಮ ಹಾಗೂ ಸಿಬ್ಬಂದಿಗಳಾದ ಜಯರಾಂ, ವೀರಭದ್ರಪ್ಪ, ನಾಗರಾಜನಾಯ್ಕ, ತಿಮ್ಮಣ್ಣ, ಪ್ರಸನ್ನ ಮತ್ತು ಮಹಿಳಾ ಸಿಬ್ಬಂದಿ ನಾಗರತ್ನಮ್ಮ ಅವರನ್ನೊಳಗೊಂಡ ತಂಡವು ಭರ್ಜರಿ ಕಾರ್ಯಾಚರಣೆ ನಡೆಸಿದೆ.
ಸದ್ಯ ಪೊಲೀಸರು ಕೊಲೆಗೆ ಸಂಬಂಧಿಸಿದಂತೆ ಮೃತನ ಪತ್ನಿ ಎ-2 ಸುಮತಿ (ರೂಪಾ), ಎ-1 ನೂರ್ ಅಹಮದ್ ಅಲಿಯಾಸ್ ರಿಯಾಜ್, ಎ-4 ಅಕ್ಷಯ್ ಅಲಿಯಾಸ್ ಅಚ್ಚು ಹಾಗೂ ಎ-5 ಝಂಕಾರ್ ಎಂಬುವವರನ್ನು ಬಂಧಿಸಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಕೊಲೆ ಪ್ರಕರಣದ ರಹಸ್ಯ ಭೇದಿಸಿದ ಇಡೀ ಪೊಲೀಸ್ ತಂಡದ ದಕ್ಷ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದು, ಸೂಕ್ತ ಬಹುಮಾನ ಘೋಷಿಸಿದ್ದಾರೆ.










